ತಿರುವನಂತಪುರಂ: ವಿದ್ವತ್ ಕಾವೇರಪ್ಪ (Vidhwath Kaverappa) ಹಾಗೂ ವೈಶಾಖ್ ವಿಜಯ್‌ಕುಮಾರ್ (Vijaykumar Vyshak) ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಕರ್ನಾಟಕ ತಂಡ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ (Ranji Trophy 2025-26_ ಎಲೈಟ್ ಬಿ ಪಂದ್ಯದಲ್ಲಿ ಕೇರಳ ವಿರುದ್ಧ ಮೇಲುಗೈ ಸಾಧಿಸಿದೆ. ತವರು ಅಭಿಮಾನಿಗಳ ಎದುರು ಕೇರಳ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು ಹಾಗೂ 348 ರನ್‌ಗಳ ಹಿನ್ನಡೆಯನ್ನು ಅನುಭವಿಸಿತು. ಆ ಮೂಲಕ ಆತಿಥೇಯ ಕೇರಳ ತಂಡ ಫಾಲೋ ಆನ್‌ಗೆ ಸಿಲುಕಿದೆ ಹಾಗೂ ಪಂದ್ಯದ ನಾಲ್ಕನೇ ಮತ್ತು ಅಂತಿಮ ದಿನ ಸೋಲಿನ ಭೀತಿಗೆ ಒಳಗಾಗಿದೆ. ಇದರೊಂದಿಗೆ ಕರ್ನಾಟಕ ತಂಡ ಮೊದಲ ಗೆಲುವು ಪಡೆಯಲು ಎದುರು ನೋಡುತ್ತಿದೆ.
ಸೋಮವಾರ ಇಲ್ಲಿನ ಕೇರಳ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೂರು ವಿಕೆಟ್ ನಷ್ಟಕ್ಕೆ 23 ರನ್‌ಗಳಿಂದ ಮೂರನೇ ದಿನದಾಟವನ್ನು ಆರಂಭಿಸಿದ ಕೇರಳ ತಂಡ, ವಿದ್ವತ್ ಕಾವೇರಪ್ಪ ( ) ಹಾಗೂ ವೈಶಾಖ್ ವಿಜಯ್‌ಕುಮಾರ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿತು. ಈ ಕಾರಣದಿಂದ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲಿಲ್ಲ. ಕೇರಳ ಪರ ಬಾಬಾ ಅಪರಿಜಿತ್ ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ.
ಕರುಣ್ ನಾಯರ್, ಆರ್ ಸ್ಮರಣ್ ದ್ವಿಶತಕ; ದೊಡ್ಡ ಮೊತ್ತ ಕಲೆ ಹಾಕಿದ ಕರ್ನಾಟಕ!
ಬಾಬಾ ಅಪರಿಜಿತ್ ಅರ್ಧಶತಕ
ಕೇರಳ ಪರ ಪ್ರಥಮ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಬಾಬಾ ಅಪರಿಜಿತ್, 159 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 88 ರನ್ ಗಳಿಸಿದರು. ಆ ಮೂಲಕ ಆತಿಥೇಯರ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸಚಿನ್ ಬೇಬಿ ಮತ್ತು ಅಹ್ಮದ್ ಇಮ್ರಾನ್ ತಲಾ 31 ರನ್‌ಗಳನ್ನು ಕಲೆ ಹಾಕಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ 30ರ ಗಡಿ ದಾಟಲಿಲ್ಲ. ಆ ಮೂಲಕ ಕೇರಳ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 95 ಓವರ್‌ಗಳಿಗೆ 238 ರನ್‌ಗಳಿಗೆ ಕುಸಿಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಕಾರಣ ಫಾಲೋ ಆನ್‌ಗೆ ಸಿಲುಕಿತು.
ಕರ್ನಾಟಕ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ವಿದ್ವತ್ ಕಾವೇರಪ್ಪ 42 ರನ್ ನೀಡಿ ನಾಲ್ಕು ವಿಕೆಟ್ ಸಾಧನೆ ಮಾಡಿದರೆ, ಇವರಿಗೆ ಸಾಥ್ ನೀಡಿದ್ದ ವೈಶಾಖ್ ವಿಜಯ್‌ಕುಮಾರ್ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಶಿಖರ್ ಶೆಟ್ಟಿ ಎರಡು ವಿಕೆಟ್ ಪಡೆದರು.
AUS vs IND: ಆಸ್ಟ್ರೇಲಿಯಾಗೆ ಆಘಾತ, ಕೊನೆಯ ಎರಡು ಟಿ20ಐ ಪಂದ್ಯಗಳಿಂದ ಟ್ರಾವಿಸ್ ಹೆಡ್ ಔಟ್!
ಸೋಲಿನ ಭೀತಿಯಲ್ಲಿ ಕೇರಳ
ನಂತರ ಫಾಲೋ ಆನ್‌ಗೆ ಸಿಲುಕಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕೇರಳ ತಂಡ, ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ಮೂರು ಓವರ್‌ಗಳಿಗೆ 10 ರನ್ ಕಲೆ ಹಾಕಿದೆ. ಇನ್ನು ನಾಲ್ಕನೇ ಹಾಗೂ ಕೊನೆಯ ದಿನ ಕೇರಳ ತಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಲಿದೆ. ಆದರೆ, ಕರ್ನಾಟಕ ತಂಡ ಮಂಗಳವಾರ 10 ವಿಕೆಟ್‌ಗಳನ್ನು ಬಹುಬೇಗ ಉರುಳಿಸಿ ಪಂದ್ಯವನ್ನು ಗೆಲ್ಲಲು ಎದುರು ನೋಡುತ್ತಿದೆ.
ಕರುಣ್-ಸ್ಮರಣ್ ದ್ವಿಶತಕ
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡ, ಕರುಣ್ ನಾಯರ್ (233) ಹಾಗೂ ಆರ್ ಸ್ಮರಣ್ (220*) ಅವರ ದ್ವಿಶತಕಗಳ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 167 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 586 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಡಿಕ್ಲೆರ್ ಮಾಡಿಕೊಂಡಿತ್ತು.