ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2027) ಟೂರ್ನಿಯಲ್ಲಿಯೂ ಭಾರತ ತಂಡವನ್ನು ರೋಹಿತ್ ಶರ್ಮಾ (Rohit sharma) ಮುನ್ನಡೆಸಬಹುದೆಂದು ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು (Ambati Rayudu) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಅಂದ ಹಾಗೆ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿದಿರುವ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಅನ್ನು ಕೂಡ ಭಾರತಕ್ಕೆ ಗೆದ್ದುಕೊಡುವ ಲೆಕ್ಕಾಚಾರದಲ್ಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. ಅವರು ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಆದರೆ, ಭಾರತ ಟೆಸ್ಟ್ ತಂಡದ ನಾಯಕನಾಗಿ ಶುಭಮನ್ ಗಿಲ್, ತಮ್ಮ ಮೊದಲ ಇಂಗ್ಲೆಂಡ್ ಪ್ರವಾಸದಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಏಕದಿನ ತಂಡಕ್ಕೂ ಗಿಲ್ ಅವರನ್ನೇ ನಾಯಕನ್ನಾಗಿ ನೇಮಕ ಮಾಡಿದರೆ ಅಚ್ಚರಿ ಇಲ್ಲ. ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದ್ದು, ಈ ವೇಳೆಗೆ ರೋಹಿತ್ ಶರ್ಮಾ 40 ವರ್ಷ ಹಾಗೂ ವಿರಾಟ್ ಕೊಹ್ಲಿ 39 ವರ್ಷ ವಯಸ್ಸಾಗಲಿದೆ.
ʻದಿನ ನಿತ್ಯ 10 ಕಿಮೀ ಓಡಬೇಕುʼ: ರೋಹಿತ್ ಶರ್ಮಾಗೆ ಯೋಗರಾಜ್ ಸಿಂಗ್ ಫಿಟ್ನೆಸ್ ಪಾಠ!
ಶುಭಾಂಕರ್ ಮಿಶ್ರಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಂಬಾಟಿ ರಾಯುಡು, "ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುವುದು ಅಗತ್ಯವಿದೆ. ಮುಂದಿನ ಏಕದಿನ ವಿಶ್ವಕಪ್ ಅನ್ನು ಗೆಲ್ಲುವುದು ಮುಂದಿನ ಗುರಿ. ಅಂದ ಹಾಗೆ ದಿನದಾಂತ್ಯಕ್ಕೆ ನಾವೆಲ್ಲರೂ ಭಾರತೀಯರು. ನಮಗಾಗಿ ಯಾರು ವಿಶ್ವಕಪ್ ಗೆಲ್ಲುತ್ತಾರೆಂಬುದು ಇಲ್ಲಿನ ಪ್ರಶ್ನೆ. ಐಸಿಸಿ ಟೂರ್ನಿಯಲ್ಲಿ ನೀವು ಈ ರೀತಿ ನೋಡಬೇಕಾಗುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಏನಾಗಬಹುದೆಂದು ಯಾರಿಗೆ ಗೊತ್ತು? ಯಾವುದೂ ಖಚಿತವಿಲ್ಲ. ಆ ಸಮಯದಲ್ಲಿ, ವಿಶೇಷವಾಗಿ ಐಸಿಸಿ ಟೂರ್ನಿಗಳಲ್ಲಿ, ಭಾರತಕ್ಕಾಗಿ ಯಾರು ಗೆಲ್ಲಬಹುದು? ದೇಶಕ್ಕಾಗಿ ಯಾರು ಗೆಲ್ಲಬಹುದು ಎಂಬುದು ಮುಖ್ಯ," ಎಂದು ತಿಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ 76 ರನ್ ಗಳಿಸಿ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೋಹಿತ್ ಶರ್ಮಾ, ಈಗಾಗಲೇ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್‌ಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 32 ಶತಕಗಳು ಸೇರಿದಂತೆ 48.76ರ ಸರಾಸರಿಯಲ್ಲಿ 11,168 ರನ್‌ಗಳೊಂದಿಗೆ, ಅವರು ಈ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸಕ್ರಿಯ ಆಟಗಾರರಾಗಿದ್ದಾರೆ.
ಒಡಿಐ ಕ್ರಿಕೆಟ್ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ರೋಹಿತ್ ಶರ್ಮಾ!
ಆಧುನಿಕ ಕ್ರಿಕೆಟ್‌ಗೆ ಸೂಕ್ತವಾದ ನಿಸ್ವಾರ್ಥ ಬ್ಯಾಟಿಂಗ್ ವಿಧಾನವನ್ನು ಅಳವಡಿಸಿಕೊಂಡಿರುವ ರೋಹಿತ್ ಶರ್ಮಾ, ಒಂಬತ್ತು ತಿಂಗಳ ಅವಧಿಯಲ್ಲಿ ಎರಡು ಐಸಿಸಿ ಪ್ರಶಸ್ತಿ ಗೆಲುವುಗಳಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಆದರೂ 2023ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಕೂದಲೆಳೆಯ ಅಂತರದಲ್ಲಿ ವಿಫಲರಾಗಿದ್ದರು.
"ನಾಯಕನಾಗಿ ರೋಹಿತ್ ಶರ್ಮಾ ನಮಗಾಗಿ ಗೆಲುವು ಸಾಧಿಸಲು ಸಾಧ್ಯವಾದರೆ, ಅವರೇ ನಾಯಕನಾಗಿಯೇ ಉಳಿಯಬೇಕು. ರೋಹಿತ್ ಮನಸ್ಸು ಮಾಡಿ ಫಿಟ್ನೆಸ್ ಕಾಯ್ದುಕೊಂಡರೆ ಮತ್ತು ಆಡಲು ಬಯಸಿದರೆ, ಇಂದು ಏಕದಿನ ಕ್ರಿಕೆಟ್‌ನಲ್ಲಿ ಅವರ ಸ್ಥಾನವನ್ನು ಯಾರು ತುಂಬಬಲ್ಲರು ಎಂದು ನನಗೆ ಹೇಳಿ. ಅವರು ತಂಡಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಬಲ್ಲರು. ರೋಹಿತ್ ಶರ್ಮಾ ಆಡಲೇಬೇಕು," ಎಂದು ಅವರು ತಿಳಿಸಿದ್ದಾರೆ.