ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs CSK: ರೋಹಿತ್‌-ಸೂರ್ಯ ಅಬ್ಬರ, ಮುಂಬೈ ಇಂಡಿಯನ್ಸ್‌ಗೆ ಹ್ಯಾಟ್ರಿಕ್‌ ಜಯ!

ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಬಿರುಗಾಳಿಯ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಈ ಗೆಲುವಿನ ಮೂಲಕ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆದು, ಟೂರ್ನಿಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಿಗಿದಿದೆ. ಸೋತ ಸಿಎಸ್‌ಕೆ 10ನೇ ಸ್ಥಾನಕ್ಕೆ ಕುಸಿದಿದೆ.

1/6

176 ರನ್‌ ಕಲೆ ಹಾಕಿದ್ದ ಸಿಎಸ್‌ಕೆ

ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 176 ರನ್ ಗಳಿಸಿತ್ತು. ಆ ಮೂಲಕ ಮುಂಬೈ ಇಂಡಿಯನ್ಸ್‌ಗೆ 177 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.

2/6

ಶಿವಂ ದುಬೆ, ರವೀಂದ್ರ ಜಡೇಜಾ ಫಿಫ್ಟಿ

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ರವೀಂದ್ರ ಜಡೇಜಾ 35 ಎಸೆತಗಳಲ್ಲಿ 53 ರನ್ ಗಳಿಸಿ ಅಜೇಯರಾಗಿ ಉಳಿದರೆ, ಶಿವಂ ದುಬೆ 32 ಎಸೆತಗಳಲ್ಲಿ 50 ರನ್ ಗಳಿಸಿದರು. ಇದಕ್ಕೂ ಮುನ್ನ ಆಯುಷ್‌ ಮ್ಹಾತ್ರೆ15 ಎಸೆತಗಳಲ್ಲಿ 32 ರನ್‌ ಸಿಡಿಸಿದ್ದರು.

3/6

ಮುಂಬೈ ಇಂಡಿಯನ್ಸ್: 177-1

ಇದಕ್ಕೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್‌, ರೋಹಿತ್‌ ಶರ್ಮಾ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ ಅಬ್ಬರದ ಬ್ಯಾಟಿಂಗ್‌ ಸಹಾಯದಿಂದ ಕೇವಲ 15.4 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 177 ರನ್‌ಗಳಿಸಿ ಭರ್ಜರಿ ಗೆಲುವು ಪಡೆಯಿತು. ಈ ಋತುವಿನಲ್ಲಿ ಮುಂಬೈ ತಂಡ ಆಡಿದ 8 ಪಂದ್ಯಗಳಲ್ಲಿ ಇದು ನಾಲ್ಕನೇ ಗೆಲುವು.

4/6

ರೋಹಿತ್‌ ಶರ್ಮಾ ಅಬ್ಬರ

ಕಳೆದ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ರೋಹಿತ್‌ ಶರ್ಮಾ ಸಿಎಸ್‌ಕೆ ಎದುರು ಅಬ್ಬರಿಸಿದರು. ಇನಿಂಗ್ಸ್‌ ಆರಂಭಿಸಿದ ಇವರು ಆಡಿದ 45 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 76 ರನ್‌ ಸಿಡಿಸಿ ಮುಂಬೈ ಇಂಡಿಯನ್ಸ್‌ ಗೆಲುವಿಗೆ ನೆರವಾದರು ಹಾಗೂ ಪಂದ್ಯ ಶ್ರೇಷ್ಢ ಪ್ರಶಸ್ತಿಗೆ ಭಾಜನರಾದರು.

5/6

ಸೂರ್ಯಕುಮಾರ್‌ ಯಾದವ್‌ ಅರ್ಧಶತಕ

ರೋಹಿತ್‌ ಶರ್ಮಾ ಜೊತೆ ಮತ್ತೊಂದು ತುದಿಯಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಸೂರ್ಯಕುಮಾರ್‌ ಯಾದವ್‌, ಕೇವಲ 30 ಎಸೆತಗಳಲ್ಲಿ ಅಜೇಯ 68 ರನ್‌ ಸಿಡಿಸಿದ್ದರು. ಇವರು 226.67ರ ಸ್ಟ್ರೈಕ್‌ ರೇಟ್‌ನಲ್ಲಿ 5 ಸಿಕ್ಸರ್‌ ಹಾಗೂ 6 ಬೌಂಡರಿಗಳನ್ನು ಬಾರಿಸಿದ್ದು ಅತ್ಯಂತ ವಿಶೇಷವಾಗಿತ್ತು. ಇದಕ್ಕೂ ಮುನ್ನ ರಯಾನ್‌ ರಿಕೆಲ್ಟನ್‌ 24 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದ್ದರು.

6/6

ಸಿಎಸ್‌ಕೆಗೆ ಪ್ಲೇಆಫ್ಸ್‌ ಹಾದಿ ಕಠಿಣ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಪಡೆದಿದೆ ಹಾಗೂ ಇನ್ನಿಳಿದ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದರ ಪರಿಣಾಮ ಸಿಎಸ್‌ಕೆ 2025ರ ಐಪಿಎಲ್‌ ಟೂರ್ನಿಯ ಪ್ಲೇಆಫ್ಸ್‌ ಹಾದಿ ಅತ್ಯಂತ ಕಠಿಣವಾಗಿದೆ.