ಮುಂಬೈ: ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಮಹಿಳಾ ಏಕದಿನ ವಿಶ್ವಕಪ್ (Women World Cup 2025) ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು (SAW vs INDW) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಆ ಮೂಲಕ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಮೊದಲು ಬ್ಯಾಟ್ ಮಾಡಲಿದೆ.
ಈ ಪಂದ್ಯದ ಟಾಸ್ ಅನ್ನು ಮೂಲತಃ ಮಧ್ಯಾಹ್ನ 2:30 ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಮಳೆಯಿಂದಾಗಿ ಇದು ಸಾಧ್ಯವಾಗಲಿಲ್ಲ. ನಂತರ ಟಾಸ್ ಅನ್ನು ಮಧ್ಯಾಹ್ನ 3 ಗಂಟೆಗೆ ನಡೆಸಲು ನಿರ್ಧರಿಸಲಾಯಿತು. ಆದಾಗ್ಯೂ, ಮಳೆಯಿಂದಾಗಿ ಟಾಸ್ ಅನ್ನು ಹಲವು ಬಾರಿ ಮುಂದೂಡಲಾಯಿತು. ಅಂತಿಮವಾಗಿ, ಟಾಸ್ ಸಂಜೆ 4:32 ಕ್ಕೆ ನಡೆಯಿತು. ಪಂದ್ಯದ ಮೊದಲ ಎಸೆತವನ್ನು ಸಂಜೆ 5:00 ಗಂಟೆಗೆ ನಡೆಸಲಾಯಿತು.
India vs South Africa Live Score: ಮಹಿಳಾ ವಿಶ್ವಕಪ್ ಫೈನಲ್‌ಗೆ ಮಳೆ ಅಡ್ಡಿ; ಟಾಸ್ ವಿಳಂಬ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಭಾರತ ತಂಡಕ್ಕೆ ಸಿಗುತ್ತಿರುವುದು ಒಳ್ಳೆಯದು. ವಾಸ್ತವವಾಗಿ, ಕಳೆದ ಆರು ಮಹಿಳಾ ವಿಶ್ವಕಪ್ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು ಐದರಲ್ಲಿ ಗೆಲುವು ಪಡೆದಿದೆ. ಎರಡನೇ ಬ್ಯಾಟಿಂಗ್ ನಡೆಸಿದ ತಂಡಗಳು ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿವೆ. ಆದ್ದರಿಂದ, ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕಡಿಮೆ ಒತ್ತಡವನ್ನು ಅನುಭವಿಸಲಿದೆ.
ಚೊಚ್ಚಲ ವಿಶ್ವಕಪ್ ಮೇಲೆ ಕಣ್ಣು
ಈ ಬಾರಿ ಟೂರ್ನಿಯಲ್ಲಿ ಹೊಸ ಚಾಂಪಿಯನ್ ಅನ್ನು ನಾವು ನೋಡುವುದು ವಿಶೇಷವಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇನ್ನೂ ಒಮ್ಮೆಯೂ ಕಪ್ ಗೆದ್ದಿಲ್ಲ. ಹಾಗಾಗಿ ಈ ಪಂದ್ಯವನ್ನು ಗೆದ್ದು ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಅನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿವೆ. ಅಂದ ಹಾಗೆ ಲೀಗ್ ಹಂತದಲ್ಲಿ ಈ ಎರಡೂ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಭಾರತವನ್ನು ಹರಿಣ ಪಡೆ ಮಣಿಸಿತ್ತು.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ ಮಹಿಳಾ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನಾ, ಜೆಮಿಮಾ ರೊಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ), ಅಮಂಜೋತ್ ಕೌರ್, ರಾಧಾ ಯಾದವ್, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್
ದಕ್ಷಿಣ ಆಫ್ರಿಕಾ ಮಹಿಳಾ ತಂಡ: ಲಾರಾ ವಾಲ್ವಾಡ್ಟ್ (ನಾಯಕಿ), ತಝ್ಮಿನ್ ಬ್ರಿಟ್ಸ್, ಅನೆಕ್ ಬಾಷ್, ಸುನ್ ಲುಸ್, ಮಾರಿಝನ್ನೆ ಕಪ್, ಸಿನಾಲೊ ಜಾಫ್ಟ್ (ವಿಕೆಟ್ ಕೀಪರ್), ಅನೆರಿಯಆ ಡರ್ಕಸನ್, ಕ್ಲೋ ಟ್ರಯಾನ್, ನಡಿನ್ ಕ್ಲಾರ್ಕ್, ಅಯಾಬಂಗಾ ಖಾಕ, ಎನ್‌ಕುಲುಲೆಕೊ ಮ್ಲಾಬಾ