ನವದೆಹಲಿ: ದಕ್ಷಿಣ ಆಫ್ರಿಕಾ ತಂಡ ಎರಡನೇ ಏಕದಿನ ಪಂದ್ಯದಲ್ಲಿ(SA vs ENG) 5 ರನ್‌ಗಳ ಗೆಲುವು ಪಡೆಯುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಸರಣಿಯಲ್ಲಿ ಹರಿಣ ಪಡೆಯ (South Africa) ಪಾಲಿಗೆ ಸತತ ಎರಡನೇ ಗೆಲುವು ಇದಾಗಿದೆ. ಬ್ಯಾಟಿಂಗ್‌ನಲ್ಲಿ ಮ್ಯಾಥ್ಯೂ ಬ್ರೀಟ್ಜ್ಕೆ ಮಿಂಚಿದರೆ, ಬೌಲಿಂಗ್‌ನಲ್ಲಿ ನಂಡ್ರೆ ಬರ್ಗರ್ ಪ್ರಾಬಲ್ಯ ಸಾಧಿಸಿದರು. ಅಂದ ಹಾಗೆ ಈ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಪರ ನಾಯಕನಾಗಿ ತೆಂಬಾ ಬವೂಮ (Temba Bavuma) ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ದ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದ ಬಳಿಕ ದಕ್ಷಿಣ ಆಫ್ರಿಕಾ ತಂಡ, ಇದೀಗ ಇಂಗ್ಲೆಂಡ್ ವಿರುದ್ಧವೂ ಅತ್ಯುತ್ತಮ ಪ್ರದರ್ಶನವನ್ನು ತೋರಿ ಒಡಿಐ ಸರಣಿಯನ್ನು ತನ್ನದಾಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ಇದು ಸತತ ಎರಡನೇ ಏಕದಿನ ಸರಣಿ ಗೆಲುವಾಗಿದೆ. ಈ ಸರಣಿಗಳಲ್ಲಿಯೂ ಹರಿಣ ಪಡೆಯನ್ನು ತೆಂಬಾ ಬವೂಮ ಮುನ್ನಡೆಸಿದ್ದರು. ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿ ಗೆಲುವಿನ ಬಳಿಕ ತೆಂಬಾ ಬವೂಮ ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಗಳನ್ನು ಗೆದ್ದ ಮೊದಲ ನಾಯಕ ಎಂಬ ಕೀರ್ತಿಯನ್ನು ತೆಂಬಾ ಬವೂಮ ಬರೆದಿದ್ದಾರೆ.
Asia Cup 2025: ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್ ಕ್ರಮಾಂಕ ಸೂಚಿಸಿದ ಮೊಹಮ್ಮದ್ ಕೈಫ್!
ಅಲ್ಲದೆ 27 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯನ್ನು ಗೆದ್ದ ಮೊದಲ ನಾಯಕ ಎಂಬ ದಾಖಲೆಯನ್ನು ತೆಂಬಾ ಬವೂಮ ಬರೆದಿದ್ದಾರೆ. ಹನ್ಸೀ ಕ್ರಾನ್ಜಿ ಅವರು 1998ರಲ್ಲಿ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯನ್ನು ಗೆದ್ದ ಮೊದಲ ದಕ್ಷಿಣ ಆಫ್ರಿಕಾ ನಾಯಕ ಎನಿಸಿಕೊಂಡಿದ್ದರು. ಇದೀಗ ಇವರೆ ಬಳಿಕ ಎರಡನೇ ನಾಯಕ ತೆಂಬಾ ಬವೂಮ.
ಮ್ಯಾಥ್ಯೂ ಬ್ರೀಟ್ಜ್ಕೀ ಸ್ಪೋಟಕ ಬ್ಯಾಟಿಂಗ್
ಇನ್ನು ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆ ಮೂಲಕ ಬ್ಯಾಟ್ ಮಾಡುವಂತಾದ ದಕ್ಷಿಣ ಆಫ್ರಿಕಾ ಪರ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಇಂಗ್ಲೆಂಡ್‌ನ ಬೌಲರ್‌ಗಳಿಗೆ ಬೆವರಿಳಿಸಿದರು. ಅದರಲ್ಲಿಯೂ ವಿಶೇಷವಾಗಿ ಮ್ಯಾಥ್ಯೂ ಬ್ರೀಟ್ಜ್ಕಿ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು 77 ಎಸೆತಗಳಲ್ಲಿ 85 ರನ್‌ಗಳನ್ನು ಬಾರಿಸಿದರು. ಟ್ರಿಸ್ಟನ್ ಸ್ಟಬ್ಸ್ ಅವರು ಅರ್ಧಶತಕವನ್ನು ಬಾರಿಸಿದರು. ಡೆವಾಲ್ಡ್ ಬ್ರೆವಿಸ್ ಅವರು ಕೇವಲ 20 ಎಸೆತಗಳಲ್ಲಿ 42 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 330 ರನ್‌ಗಳನ್ನು ಕಲೆ ಹಾಕಿತು.
ಇನ್ನು ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ ಜೋ ರೂಟ್, ಜಾಕೋಬ್ ಬೆಥೆಲ್ ಹಾಗೂ ಜೋಸ್ ಬಟ್ಲರ್ ಅವರ ಅರ್ಧಶತಕಗಳ ಬಲದಿಂದ ಗೆಲುವಿನ ಹಾದಿಯಲ್ಲಿತ್ತು. ಆದರೆ, ನಂಡ್ರೆ ಬರ್ಗರ್ (3 ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ 325 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 5 ರನ್ ಅಂತರದಲ್ಲಿ ಸೋಲು ಅನುಭವಿಸಿತು.