ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ವಿರಾಟ್ ಕೊಹ್ಲಿಯನ್ನು ಹೊರಗಿಟ್ಟು 2025ರ ಐಪಿಎಲ್‌ ತಂಡ ಕಟ್ಟಿದ ಆರ್‌ ಅಶ್ವಿನ್!

R Ashwin’s Picks IPL 2025 team: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 6 ರನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್, ಮೂವರು ಆರ್‌ಸಿಬಿ ಆಟಗಾರರಿಗೆ ಸ್ಥಾನ ಕಲ್ಪಿಸಿ ತಮ್ಮ 2025ರ ಐಪಿಎಲ್‌ನ ಬಲಿಷ್ಠ ತಂಡವನ್ನು ಕಟ್ಟಿದ್ದಾರೆ.

2025ರ ಐಪಿಎಲ್‌ ತಂಡವನ್ನು ಕಟ್ಟಿದ ಆರ್‌ ಅಶ್ವಿನ್‌.

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin), 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ತಮ್ಮ ನೆಚ್ಚಿನ ತಂಡವನ್ನು ಕಟ್ಟಿದ್ದಾರೆ. ತಮ್ಮ ಐಪಿಎಲ್‌ ತಂಡದಲ್ಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂವರು ಆಟಗಾರರಿಗೆ ಸ್ಥಾನ ಕಲ್ಪಿಸಿದ್ದಾರೆ. ಆದರೆ, ವಿರಾಟ್‌ ಕೊಹ್ಲಿ (Virat Kohli)ಯನ್ನು ಹೊರಗಿಟ್ಟು ಅಶ್ವಿನ್ ಅಚ್ಚರಿ ಮೂಡಿಸಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ, 54.75ರ ಸರಾಸರಿಯಲ್ಲಿ 8 ಅರ್ಧಶತಕ ನೆರವಿನಿಂದ 657 ರನ್ ಗಳಿಸಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಮೂರನೇ ಗರಿಷ್ಠ ಸ್ಕೋರರ್ ಆಗಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿತ್ತು.

ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಆರಂಭಿಕ ಆಟಗಾರರಾಗಿ ಇಳಿದು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರನ್ನೇ ತಾವು ರಚಿಸಿದ ಪ್ಲೇಯಿಂಗ್ ಇಲೆವೆನ್‌ನ ಆರಂಭಿಕ ಜೋಡಿಯಾಗಿ ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡಿದ್ದಾರೆ. ಟೂರ್ನಿಯಲ್ಲಿ 156.17ರ ಸ್ಟ್ರೆಕ್ ರೇಟ್‌ನಲ್ಲಿ 759 ರನ್ ಗಳಿಸಿದ್ದ ಸಾಯಿ ಸುದರ್ಶನ್, ಆರೆಂಜ್ ಕ್ಯಾಪ್ ಅನ್ನು ಮುಡಿಗೇರಿಸಿಕೊಂಡಿದ್ದರು.

IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

ಶ್ರೇಯಸ್ ಅಯ್ಯರ್‌ಗೆ ಮೂರನೇ ಸ್ಥಾನ

ಅಶ್ವಿನ್ ತಾವು ರಚಿಸಿದ ಬಲಿಷ್ಠ ಐಪಿಎಲ್ ತಂಡದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮುಂಬೈ ಇಂಡಿಯನ್ಸ್‌ನ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್‌ಗೆ 3 ಮತ್ತು 4ನೇ ಕ್ರಮಾಂಕ ನೀಡಿದ್ದಾರೆ. 2014ರ ನಂತರ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ಶ್ರೇಯಸ್ ಅಯ್ಯರ್ ಯಶಸ್ಸು ಕಂಡಿದ್ದರು. ತಮ್ಮ ನಾಯಕತ್ವದಿಂದ ಅಲ್ಲದೆ ಅಪ್ಪಟ ಬ್ಯಾಟರ್ ಆಗಿಯೂ ತಂಡಕ್ಕೆ ಆಸರೆಯಾಗಿದ್ದ ಅಯ್ಯರ್, 175.07ರ ಸ್ಟ್ರೆಕ್ ರೇಟ್‌ನಲ್ಲಿ 604 ರನ್ ಬಾರಿಸಿದ್ದರು. ಇನ್ನು ಸತತ 16 ಇನಿಂಗ್ಸ್‌ಗಳಲ್ಲಿ 25ಕ್ಕೂ ಹೆಚ್ಚು ರನ್ ಸಿಡಿಸಿ ದಾಖಲೆ ಬರೆದಿದ್ದ ಸೂರ್ಯಕುಮಾರ್ ಯಾದವ್ 717 ರನ್ ಗಳಿಸಿ ಟೂರ್ನಿಯ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಜಿತೇಶ್ ಶರ್ಮಾಗೂ ಸ್ಥಾನ

ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಲಖನೌ ಸೂಪರ್ ಜಯಂಟ್ಸ್ ತಂಡದ ಸ್ಟಾರ್ ಆಟಗಾರ ನಿಕೋಲಸ್ ಪೂರನ್‌ಗೆ 5ನೇ ಕ್ರಮಾಂಕ ನೀಡಿದ ಅಶ್ವಿನ್, ಆರ್‌ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಫೋಟಕ ಆಟಗಾರ ಡೆವಾಲ್ಡ್ ಬ್ರೆವಿಸ್‌ರನ್ನು ನಂತರದ ಸ್ಥಾನದಲ್ಲಿ ಬ್ಯಾಟಿಂಗ್ ಆಮಂತ್ರಿಸಿದ್ದಾರೆ.

IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್‌ ಸ್ಟಾರ್ಕ್‌!

ಕೃಣಾಲ್ ಪಾಂಡ್ಯಗೆ ಆಲ್‌ರೌಂಡರ್ ಪಟ್ಟ

ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕೃಣಾಲ್ ಪಾಂಡ್ಯರನ್ನು ತಮ್ಮ ತಂಡದ ಬೌಲಿಂಗ್ ಆಲ್‌ರೌಂಡರ್ ಆಗಿ ಅಶ್ವಿನ್ ಆಯ್ಕೆ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲಿ 17ಕ್ಕೆ 2 ವಿಕೆಟ್ ಪಡೆದಿದ್ದ ಕೃಣಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. 24 ವಿಕೆಟ್ ಪಡೆದು ಟೂರ್ನಿಯ ಎರಡನೇ ಗರಿಷ್ಠ ವಿಕೆಟ್ ಟೇಕರ್ ನೂರ್ ಅಹಮದ್‌ಗೂ ಅಶ್ವಿನ್ ಸ್ಥಾನ ನೀಡಿದ್ದಾರೆ.

ಜಾಶ್‌ ಹೇಝಲ್‌ವುಡ್‌ಗೂ ಅವಕಾಶ

ತಮ್ಮ ವೇಗದ ಬೌಲಿಂಗ್ ದಾಳಿಯಿಂದ ಆರ್‌ಸಿಬಿ ತಂಡದ ವೇಗದ ಬಲವನ್ನು ಹೆಚ್ಚಿಸಿದ್ದ ಜಾಶ್‌ ಹೇಝಲ್‌ವುಡ್ (22 ವಿಕೆಟ್) ಹಾಗೂ ಮುಂಬೈ ಇಂಡಿಯನ್ಸ್ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾಗೂ ತಂಡದಲ್ಲಿ ಅವಕಾಶ ಕಲ್ಪಿಸಿರುವ ಅಶ್ವಿನ್, ಕನ್ನಡಿಗ ಹಾಗೂ ಪರ್ಪಲ್ ಕ್ಯಾಪ್ ವಿಜೇತ ಪ್ರಸಿಧ್‌ ಕೃಷ್ಣ (25) ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡದೊಳಗೆ ಕರೆತಂದಿದ್ದಾರೆ.

IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್‌ಸಿಬಿ ಪ್ರತಿಕ್ರಿಯೆ!

ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ‌ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಈ ಸೀಸನ್ ಉತ್ತಮವಾಗಿರಲಿಲ್ಲ. 9 ಪಂದ್ಯಗಳಿಂದ ಕೇವಲ 7 ವಿಕೆಟ್ ಗಳನ್ನು ಅಶ್ವಿನ್ ಪಡೆದಿದ್ದರು.

ಆರ್‌ ಅಶ್ವಿನ್ ಕಟ್ಟಿದ 2025ರ ಐಪಿಎಲ್ ಬಲಿಷ್ಠ ತಂಡ: ಶುಭಮನ್ ಗಿಲ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ನೂರ್ ಅಹಮದ್, ಜಾಶ್ ಹೇಝಲ್‌ವುಡ್, ಜಸ್‌ಪ್ರೀತ್ ಬುಮ್ರಾ

ಇಂಪ್ಯಾಕ್ಟ್ ಪ್ಲೇಯರ್: ಪ್ರಸಿಧ್‌ ಕೃಷ್ಣ