ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL 2025: ಯುಪಿ ವಾರಿಯರ್ಸ್‌ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ವನಿತೆಯರು!

RCB vs UPW Match Highlights: ಲಖನೌದ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹೈಸ್ಕೋರಿಂಗ್‌ ಪಂದ್ಯದಲ್ಲಿ ಕಠಿಣ ಹೋರಾಟ ನೀಡಿದ ಹೊರತಾಗಿಯೂ ಯುಪಿ ವಾರಿಯರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೇವಲ 12 ರನ್‌ಗಳಿಂದ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಆರ್‌ಸಿಬಿ ಇನ್ನೂ ಒಂದು ಬಾಕಿ ಇರುವಾಗಲೇ ಟೂರ್ನಿಯ ಪ್ಲೇಆಫ್ಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.

ಯುಪಿ ವಾರಿಯರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್‌ಸ್‌ ಬೆಂಗಳೂರು ತಂಡಕ್ಕೆ ಸೋಲು.

ಲಖನೌ: ಕೊನೆಯ ಓವರ್‌ವರೆಗೂ ತೀವ್ರ ಕುತೂಹಲ ಕೆರಳಿಸಿದ್ದ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ಟೂರ್ನಿಯ ಹೈಸ್ಕೋರಿಂಗ್‌ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (RCB), ಯುಪಿ ವಾರಿಯರ್ಸ್‌ (UPW) ಎದುರು 12 ರನ್‌ಗಳಿಂದ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ, ಟೂರ್ನಿಯ ಪ್ಲೇಆಫ್ಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಇನ್ನು ಈ ಪಂದ್ಯದ ಗೆಲುವಿನ ಹೊರತಾಗಿಯೂ ಯುಪಿ ವಾರಿಯರ್ಸ್‌ ತಂಡ ಕೂಡ ನಾಕ್‌ಔಟ್‌ನಿಂದ ಅಧಿಕೃತವಾಗಿ ಹೊರ ನಡೆದಿದೆ.

ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಟೂರ್ನಿಯ 18ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ನೀಡಿದ್ದ ದಾಖಲೆಯ ಮೊತ್ತವಾದ 226 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ರಿಚಾ ಘೋಷ್‌ (69 ರನ್‌) ಹಾಗೂ ಸ್ನೇಹಾ ರಾಣಾ (26 ರನ್‌) ಸ್ಟೋಟಕ ಅರ್ಧಶತಕದ ಹೊರತಾಗಿಯೂ 19.3 ಓವರ್‌ಗಳಿಗೆ 213 ರನ್‌ಗಳಿಂದ ಆಲ್‌ಔಟ್‌ ಆಯಿತು. ಆ ಮೂಲಕ 12 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ಯುಪಿ ವಾರಿಯರ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಸೋಫಿಯಾ ಎಕ್ಲೆಸ್ಟೋನ್‌ (25 ಕ್ಕೆ 3) ಅವರು ಯಶಸ್ವಿ ಬೌಲರ್‌ ಎನಿಸಿಕೊಂಡರು.

WPL 2025: ಹರ್ಮನ್‌ಪ್ರೀತ್ ಕೌರ್‌ಗೆ ದಂಡದ ಬಿಸಿ ಮುಟ್ಟಿಸಿದ ಬಿಸಿಸಿಐ

ರಿಚಾ ಘೋಷ್‌ ಸ್ಪೋಟಕ ಅರ್ಧಶತಕ

ಬೃಹತ್‌ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಎರಡು ವಿಕೆಟ್‌ ಬೇಗ ಕಳೆದುಕೊಂಡರೂ ಉತ್ತಮ ಆರಂಭ ಪಡೆದುಕೊಂಡಿತ್ತು. ಸಬ್ಬಿನೇನಿ ಮೇಘಾನ ಕೇವಲ 12 ಎಸೆತಗಳಲ್ಲಿ 27 ರನ್‌ ಸಿಡಿಸಿದ್ದರೆ, ಎಲಿಸ್‌ ಪೆರಿ 28 ರನ್‌ಗಳಿಗೆ ಆರ್‌ಸಿಬಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟು ವಿಕೆಟ್‌ ಒಪ್ಪಿಸಿದರು. ಆದರೆ, ಇವರಿಬ್ಬರೂ ವಿಕೆಟ್‌ ಒಪ್ಪಿಸಿದ ಬಳಿಕ ಒಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದವು. ಆದರೆ, ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ರಿಚಾ ಘೋಷ್‌ ಕೇವಲ 33 ಎಸೆತಗಳಲ್ಲಿ ಐದು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 69 ರನ್‌ಗಳಿಗೆ ಆರ್‌ಸಿಬಿಯನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಆದರೆ, ದೀಪ್ತಿ ಶರ್ಮಾ ಸ್ಪಿನ್‌ ಮೋಡಿಗೆ ಶರಣಾದರು.



6 ಎಸೆತಗಳಲ್ಲಿ 26 ರನ್‌ ಗಳಿಸಿದ ಸ್ನೇಹಾ ರಾಣಾ

ಆರ್‌ಸಿಬಿಗೆ ಕೊನೆಯ ಎರಡು ಓವರ್‌ಗಳಲ್ಲಿ 43 ರನ್‌ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಸ್ನೇಹಾ ರಾಣಾ, 19ನೇ ಓವರ್‌ನಲ್ಲಿ ಮೂರು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 26 ರನ್‌ಗಳನ್ನು ಸಿಡಿಸಿದರು. ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಕೊಟ್ಟು ವಿಕೆಟ್‌ ಒಪ್ಪಿಸಿದರು. ಆ ಮೂಲಕ 9 ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ಕೊನೆಯ ಓವರ್‌ನಲ್ಲಿ 15 ರನ್‌ ಅಗತ್ಯವಿತ್ತು. ಆದರೆ, ಅಂತಿಮ ಓವರ್‌ನಲ್ಲಿ ರೇಣುಕಾ ಸಿಂಗ್‌ ರನ್‌ಔಟ್‌ ಆದರು.

ದಾಖಲೆ ಮೊತ್ತ ಕಲೆ ಹಾಕಿದ ಯುಪಿ ವಾರಿಯರ್ಸ್‌

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಯುಪಿ ವಾರಿಯರ್ಸ್‌ ತಂಡ, ಜಾರ್ಜಿಯಾ ವಾಲ್‌ (99 ರನ್‌) ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ225 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 226 ರನ್‌ಗಳ ದಾಖಲೆಯ ಮೊತ್ತದ ಗುರಿಯನ್ನು ನೀಡಿತು. ಜಾರ್ಜಿಯಾ ವಾಲ್‌ಗೂ ಮುನ್ನ ಗ್ರೇಸ್‌ ಹ್ಯಾರಿಸ್‌ 39 ರನ್‌ ಸಿಡಿಸಿದ್ದರೆ, ಕಿರಣ್‌ ನವಿಗಿರೆ 46 ರನ್‌ಗಳನ್ನು ಸಿಡಿಸಿದ್ದರು.