ಆರ್‌ಸಿಬಿ ಮಾಜಿ ವೇಗಿಗೆ ಸತತ ಬೌಂಡರಿಗಳನ್ನು ಬಾರಿಸಿದ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್!
ಪ್ರಸ್ತುತ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾರತ ತಂಡದ ಮಾಜಿ ವೇಗಿ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ನವದೀಪ್ ಸೈನಿಗೆ ಸತತವಾಗಿ ಬೌಂಡರಿಗಳನ್ನು ಬಾರಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ನವದೀಪ್ ಸೈನಿಗೆ ಸತತ ಬೌಂಡರಿಗಳನ್ನು ಬಾರಿಸಿದ ಆರ್ಯವೀರ್ ಸೆಹ್ವಾಗ್.

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ಹಾಗೂ ಸೆಂಟ್ರಲ್ ಡೆಲ್ಲಿ ಕಿಂಗ್ಸ್(EDR vs CDK) ತಂಡಗಳ ನಡುವಣ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತದ ಮಾಜಿ ಸ್ಪೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯನ್ (Aaryavir) ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ನವದೀಪ್ ಸೈನಿ (Navdeep Saini) ಅವರಿಗೆ ಸತತವಾಗಿ ಬೌಂಡರಿಗಳನ್ನು ಭಾರಿಸಿ ಗಮನವನ್ನು ಸೆಳೆದಿದ್ದಾರೆ. ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡ ಪಂದ್ಯದ ಎರಡನೇ ಓವರ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತ್ತು. ಅದರಲ್ಲಿಯೂ ವಿಶೇಷವಾಗಿ ಆರ್ಯವೀರ್ ಅವರು ಬ್ಯಾಟಿಂಗ್‌ನಲ್ಲಿ ಧೂಳೆಬ್ಬಿಸಿದರು.
ನವದೀಪ್ ಸೈನಿ ಅವರು ಓವರ್ ಪಿಚ್ ಬೌಲ್ ಮಾಡಿದ್ದರು ಹಾಗೂ ಆರ್ಯವೀರ್ ಅವರು ಇನ್‌ಸೈಡ್ ಔಟ್ ಮೂಲಕ ಬೌಂಡರಿ ಬಾರಿಸಿದ್ದರು. ನಂತರ ಆಫ್ ಸ್ಟಂಪ್ ಹೊರಗಡೆ ಗುಡ್ ಲೆನ್ತ್ ಎಸೆತದಲ್ಲಿ ಆರ್ಯವೀರ್, ರೂಮ್ ಮಾಡಿಕೊಂಡು ಎಕ್ಸ್ ಕವರ್ಸ್ ಹಾಗೂ ಮಿಡ್ ಆಫ್ ಫೀಲ್ಡರ್ ನಡುವೆ ಸೊಗಸಾದ ಬೌಂಡರಿಯನ್ನು ಗಳಿಸಿದ್ದರು. ಆ ಮೂಲಕ ಸತತ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಸೆಹ್ವಾಗ್ ಪುತ್ರ ಎಲ್ಲರ ಗಮನವನ್ನು ಸೆಳೆದಿದ್ದರು. ಈ ವಿಡಿಯೊವನ್ನು ಡಿಪಿಎಲ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
Asia Cup 2025: ಏಷ್ಯಾಕಪ್‌ನಿಂದ ಕೈಬಿಟ್ಟ ವಿಚಾರದಲ್ಲಿ ಮೌನ ಮುರಿದ ಶಮಿ
ನವದೀಪ್ ಸೈನಿ ಅವರ ಬಳಿಕ ರೌನಿಕ್ ವಘೇರಾ ಅವರ ಬೌಲಿಂಗ್‌ನಲ್ಲಿ ಆರ್ಯವೀರ್ ಸೆಹ್ವಾಗ್ ಸತತ ಬೌಂಡರಿಗಳನ್ನು ಸಿಡಿಸಿದ್ದರು. ಇವರು ಐದನೇ ಓವರ್‌ನಲ್ಲಿ ಸತತ ಬೌಂಡರಿಗಳನ್ನು ಸಿಡಿಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಡಿದ ಕೇವಲ 16 ಎಸೆತಗಳಲ್ಲಿ 137.50ರ ಸ್ಟ್ರೈಕ್ ರೇಟ್‌ನಲ್ಲಿ 22 ರನ್‌ಗಳನ್ನು ಗಳಿಸಿದರು. ಆರ್ಯವೀರ್ ಅವರ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡ ಅಂತಿಮವಾಗಿ 62 ರನ್‌ಗಳಿಂದ ಗೆಲುವು ಪಡೆದಿತ್ತು. ಈ ಗೆಲುವಿನ ಮೂಲಕ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕ ಪ್ಲೇಆಫ್ಸ್‌ಗೆ ಇನ್ನಷ್ಟು ಹತ್ತಿರವಾಗಿದೆ.
Virendra Sehwag's Son Aaryavir debut in the Delhi Premier league.!!
— MANU. (@IMManu_18) August 27, 2025
pic.twitter.com/bUYF0621QW
ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜಿನಲ್ಲಿ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಅವರನ್ನು ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡ 8 ಲಕ್ಷ ರೂ. ಗಳಿಸಿಸಿತ್ತು. ಟಿ20 ಟೂರ್ನಿಯಲ್ಲಿ ಆರ್ಯವೀರ್ ಸೆಹ್ವಾಗ್ ಮೊದಲ ಪ್ರದರ್ಶನ ಇದಾಗಿದೆ. ಕಳೆದ ವರ್ಷ ಕೋಚ್ ಬೆಹಾರ್ ಟ್ರೋಫಿ ಟೂರ್ನಿಯ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಆರ್ಯವೀರ್ ಅವರು 229 ಎಸೆತಗಳಲ್ಲಿ ಅಜೇಯ 200 ರನ್‌ಗಳನ್ನು ಕಲೆ ಹಾಕಿದ್ದರು. ಈ ದೊಡ್ಡ ಇನಿಂಗ್ಸ್‌ನಲ್ಲಿ ಅವರು ಎರಡು ಸಿಕ್ಸರ್ ಹಾಗೂ 34 ಬೌಂಡರಿಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಅವರು ಅಂತಿಮವಾಗಿ 309 ಎಸೆತಗಳಲ್ಲಿ 297 ರನ್‌ಗಳನ್ನು ಬಾರಿಸಿದ್ದರು.
ತನ್ನ ಕನಸನ್ನು ಬಹಿರಂಗಪಡಿಸಿದ ಆರ್ಯವೀರ್
ವಿರಾಟ್ ಕೊಹ್ಲಿ ಅವರ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವುದು ನನ್ನ ಕನಸು ಎಂದು ಆರ್ಯವೀರ್ ತಿಳಿಸಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಜೊತೆ ಆಡಬೇಕೆಂಬ ಬಯಕೆಯನ್ನು ಸೆಹ್ವಾಗ್ ಪುತ್ರ ಹೊಂದಿದ್ದಾರೆ. "ಐಪಿಎಲ್ ಟೂರ್ನಿಯಲ್ಲಿ ಶೀಘ್ರದಲ್ಲೇ ಆಡಲು ಅವಕಾಶ ಸಿಕ್ಕರೆ, ವಿರಾಟ್ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ನನ್ನ ಕನಸು," ಎಂದು ಆರ್ಯವೀರ್ ತಿಳಿಸಿದ್ದಾರೆ.