Asia Cup 2025: ಶುಭಮನ್ ಗಿಲ್‌ಗಾಗಿ ಸಂಜು ಸ್ಯಾಮ್ಸನ್‌ಗೆ ಅನ್ಯಾಯ ಮಾಡಬೇಡಿ!
ಮುಂಬರುವ 2025ರ ಏಷ್ಯಾ ಕಪ್ ಟೂರ್ನಿ ಸೆಪ್ಟಂಬರ್ 9 ರಂದು ಆರಂಭವಾಗಲಿದೆ. ಈ ಟೂರ್ನಿಗೆ ಭಾರತ ತಂಡ ಸಜ್ಜಾಗುತ್ತಿದೆ. ಅಂದ ಹಾಗೆ ಶುಭಮನ್ ಗಿಲ್ ಆಗಮನದಿಂದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಭಾರತ ತಂಡದ ಪ್ಲೇಯಿಂಗ್ XI ಸ್ಥಾನ ಸಿಗುವ ಬಗ್ಗೆ ಅನುಮಾನವಿದೆ. ಇದರ ಬಗ್ಗೆ ಪತ್ರಿಕೋದ್ಯಮ ವಿದ್ಯಾರ್ಥಿ ಕೆಎನ್ ರಂಗು ತಮ್ಮ ಅಂಕಣದಲ್ಲಿ ವಿವರಿಸಿದ್ದಾರೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿರುವ ಶುಭಮನ್ ಗಿಲ್, ಸಂಜು ಸ್ಯಾಮ್ಸನ್.

ಅಂಕಣ: ಕೆ. ಎನ್. ರಂಗು, ಚಿತ್ರದುರ್ಗ
ಕ್ಷಮಿಸಿ ಸಂಜು ಸ್ಯಾಮ್ಸನ್ ಮುಂದಿನ ಬಾರಿ ನಿಮಗೆ ಚಾನ್ಸ್ ಸಿಗುತ್ತೆ. ಈ ಮಾತನ್ನು ನಾನು ಹೇಳುತ್ತಿಲ್ಲ. ಮತ್ತೆ ಇನ್ಯಾರು ಅವರ ಅಭಿಮಾನಿಗಳು ಹೇಳುತ್ತಿದ್ದಾರಾ? ಖಂಡಿತವಾಗಿಯೂ ಇಲ್ಲ. ಬದಲಾಗಿ 2025ರ ಏಷ್ಯಾ ಕಪ್ ತಂಡದ ಆಯ್ಕೆಯ ಸಮಯದಲ್ಲಿ ಮ್ಯಾನೇಜ್‌ಮೆಂಟ್ ಹೇಳಬಹುದು. ಯಾಕೆ ಗೊತ್ತೆ? ಕ್ರಿಕೆಟ್ ಲೋಕದಲ್ಲಿ ತನ್ನ ಭವಿಷ್ಯದ ಬಗ್ಗೆ ಸಾಲು ಸಾಲು ಕನಸು ಕಂಡು ಕ್ರಿಕೆಟ್‌ನ ಗಂಧ ಗಾಳಿ ಅಷ್ಟಾಗಿ ಗೊತ್ತಿಲ್ಲದ ಕೇರಳ ಎಕ್ಸ್‌ಪ್ರೆಸ್ ಹತ್ತಿ, ಕೈಗೆ ಗ್ಲೌಸ್ ಹಾಕಿ, ಬ್ಯಾಗಲ್ಲಿ ಬ್ಯಾಟ್ ಇಟ್ಟುಕೊಂಡು ಬಂದವರು ಸ್ಯಾಮ್ಸನ್. ದೇಶಿಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿ, ಭಾರತ ತಂಡಕ್ಕೆ ಬಂದಾಗ ಭಾರತದ ಭವಿಷ್ಯದ ಕ್ರಿಕೆಟ್ ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಂಜು ಸ್ಯಾಮ್ಸನ್ ಅವರು ಕ್ರಿಕೆಟ್ ವೃತ್ತಿ ಬದುಕಿಗೆ ಕಾಲಿಟ್ಟಾಗಿನಿಂದ ಇಂದಿನವರೆಗಿನ ಹಾದಿ ಗಮನಿಸಿದರೆ ಅದು ಒಂದು ಅಪೂರ್ಣ ಹಾಡಿನಂತೆ ಗೋಚರಿಸುತ್ತದೆ. ಇದಾಗಿಯೂ ಅವರ ಆತ್ಮವಿಶ್ವಾಸ ಎಲ್ಲಿಯೂ ಕುಂದು ಹೋಗಿಲ್ಲ. ಅವರಲ್ಲಿದ್ದ ಗಟ್ಟಿತನ, ಏಕಾಗ್ರತೆ, ಪರಿಶ್ರಮ, ಗುರಿ ಅವರನ್ನು ಉತ್ತುಂಗಕ್ಕೇರಿಸಿಲ್ಲ ಅಂದರೂ ಕೂಡ ಒಂದಷ್ಟರ ಮಟ್ಟಿಗೆ ಕೈ ಹಿಡಿದಿದೆ.
ವಿಕೆಟ್ ಹಿಂದೆ ನಿಂತು ಕೀಪಿಂಗ್ ಮಾಡುವಾಗ ಅವರಲ್ಲಿ ಕಾಣುವ ಶಾಂತ ಸ್ವಭಾವ, ಮತ್ತು ಬ್ಯಾಟ್ ಹಿಡಿದು ಕ್ರೀಸ್‌ನಲ್ಲಿ ನಿಂತಾಗ ಅವರ ಮುಖದಲ್ಲಿ ಕಾಣುವ ಧೈರ್ಯ ಅವರನ್ನು ಎಲ್ಲಿಗೋ ಕರೆದುಕೊಂಡು ಹೋಗಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಹಿಂದೆ ನಾವು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಅವರಿಗೆ ಬಲವಾದ ಪೈಪೋಟಿ ಕೊಡಬಲ್ಲ ಮತ್ತು ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದಂತಹ ಹೆಸರು ವಿನೋದ್ ಕಾಂಬ್ಳಿಯವರದ್ದಾಗಿತ್ತು. ಆದರೆ ಸಚಿನ್ ಅವರಲ್ಲಿದ್ದ ಕಾರ್ಯಕ್ಷಮತೆ, ಪರಿಶ್ರಮ ಕಾಂಬ್ಳಿಯವರಲ್ಲಿರಲಿಲ್ಲ. ಇದರಿಂದಾಗಿ ಕಾಂಬ್ಳಿಯವರ ಹೆಸರು ಕ್ರಿಕೆಟ್ ಲೋಕದಲ್ಲಿ ಕೇವಲ ಕೋಲ್ಮಿಂಚಿನಂತೆ ಮಿಂಚಿ ಮರೆಯಾಯಿತು. ಇದು ಪರಿಶ್ರಮದ ಅಗತ್ಯ ಮತ್ತು ಸತತ ಅಭ್ಯಾಸದ ಪರಿಣಾಮವನ್ನು ತೋರಿಸುತ್ತದೆ. ಇವೆರಡೂ ಸ್ಯಾಮ್ಸನ್ ಅವರಲ್ಲಿದೆ, ಆದರೆ ಅದೃಷ್ಟ ಸ್ಯಾಮ್ಸನ್ ಅವರಲ್ಲಿಲ್ಲ. ಅರ್ಥಾತ್ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ಸಿಗಲಿಲ್ಲ. ಅದಕ್ಕೆ ಕಾರಣಗಳು ಹಲವಾರಿವೆ.
ಏಷ್ಯಾ ಕಪ್ ಟೂರ್ನಿಗೂ ಮುನ್ನ 42 ಎಸೆತಗಳಲ್ಲಿ ಶತಕ ಬಾರಿಸಿದ ಸಂಜು ಸ್ಯಾಮ್ಸನ್!
ಪ್ರತಿ ಆಟಗಾರನಿಗೂ ಪ್ರತಿಯೊಂದು ಅವಕಾಶವೂ ಅಮೂಲ್ಯವಾಗಿರುತ್ತದೆ. ನಾನು ಸ್ಯಾಮ್ಸನ್ ಅವರಿಗೆ ಅವಕಾಶವೇ ದೊರಕಿಲ್ಲ ಎಂದು ಹೇಳಲು ಹೊರಟಿಲ್ಲ. ಅವಕಾಶಗಳು ಖಂಡಿತವಾಗಿಯೂ ಸಿಕ್ಕಿವೆ. ಆದರೆ ಸಿಕ್ಕಿರುವ ಎಲ್ಲಾ ಅವಕಾಶಗಳು ಕ್ಷಣಿಕವಾಗಿವೆ. ಯಾವುದೇ ಆಟಗಾರ ಆರಂಭದಲ್ಲೇ ಬಂದು ಸೆಂಚುರಿ ಬಾರಿಸಲು ಸಾಧ್ಯವಿಲ್ಲ. ಹುಟ್ಟಿದ ತಕ್ಷಣವೆ ಮಹಾತ್ಮಗಾಂಧಿಯವರಲ್ಲಿ ಅಹಿಂಸೆ ಮತ್ತು ಭಗತ್ ಸಿಂಗ್ ಅವರ ಶೌರ್ಯ ಮನೋಭಾವ ಬೆಳೆದಿರಲಿಲ್ಲ. ಒಂದೇ ಏಟಿಗೆ ಯಾವ ಕಲ್ಲು ಶಿಲೆಯಾಗಲು ಸಾಧ್ಯವಿಲ್ಲ. ಒಂದೊಂದು ಹುಳಿ ಪೆಟ್ಟಿನಲ್ಲೂ ಕಲ್ಲು ಒಂದೊಂದು ಪಾಠ ಕಲಿತು ಮೂರ್ತಿಯಾಗುತ್ತೆ. ಹಾಗೆಯೇ ಪ್ರಾರಂಭಿಕ ಹಂತದಲ್ಲಿ ಎಡರು ತೊಡರುಗಳು ಸಹಜ. ಹಗಲು ಕಂಡ ಬಾವಿಗೆ ಹೋಗಿ ರಾತ್ರಿ ಬೀಳಲು ಸಾಧ್ಯವೇ? ಆದ ತಪ್ಪುಗಳನ್ನು ತಿದ್ದಿಕೊಳ್ಳಲು ಒಂದಷ್ಟು ಕಾಲವಕಾಶ ಬೇಕಾಗುತ್ತದೆ. ಆ ಕಾಲಾವಕಾಶ ಸ್ಯಾಮ್ಸನ್ ಅವರಿಗೆ ಸಿಗದ ಕಾರಣ ಅವರ ಪ್ರತಿಭೆಗೆ ತಕ್ಕಂತಹ ಯಶಸ್ಸು ಸಿಗಲಿಲ್ಲ. ಕೆಲವೊಮ್ಮೆ ಅವಕಾಶ ಸಿಕ್ಕರೂ ಯಾವುದೋ ಒಂದು ಪಂದ್ಯದಲ್ಲಿ ವಿಫಲವಾದ ಕೂಡಲೆ ಅವರಿಗೆ ಅವಕಾಶದ ಬಾಗಿಲು ಮುಚ್ಚಿಬಿಡುತ್ತದೆ. ಅವರು ಗುರಿಯಿಟ್ಟು ಹೊಡೆದ ಯಾವುದೋ ಒಂದು ಬಾಲ್ ಗುರಿ ತಲುಪದೇ, ಫೀಲ್ಡರ್ ಕೈ ಸೇರಿದರೆ ಪಂದ್ಯದ ಹಿಂದಿನ ದಿನ ಮಾಡಿದ ಅಭ್ಯಾಸದ ಬೆವರೆಲ್ಲ ವ್ಯರ್ಥವಾಗಿಬಿಡುತ್ತದೆ. ಸ್ಯಾಮ್ಸನ್ ಅವರ ಹಿನ್ನಡೆಗೆ ಇದೇ ಮೂಲ ಕಾರಣವೆಂದು ನಾನು ಭಾವಿಸುತ್ತೇನೆ.
ಹೀಗೆ ಅವಕಾಶ ವಂಚಿತರಾಗಿ ಎಲೆ ಮರೆ ಕಾಯಿಯಂತೆ ಕ್ರಿಕೆಟ್ ಬದುಕು ಸಾಗಿಸುತ್ತಿರುವ ಸ್ಯಾಮ್ಸನ್, ಕೇವಲ ಅಂಕಿ ಅಂಶಗಳ ಆಟಗಾರನಲ್ಲ. ಅವರ ಬ್ಯಾಟಿಂಗ್ ಶೈಲಿ ವಿಭಿನ್ನ ಮತ್ತು ವಿಶಿಷ್ಟವಾದಂತಹದ್ದಾಗಿದೆ. ಅವರ ಬ್ಯಾಟ್‌ನಿಂದ ಬರುವ ಕವರ್ ಡ್ರೈವ್ ಮತ್ತು ಆ ಟೈಮಿಂಗ್ ಬೇರೆ ಯಾರ ಬ್ಯಾಟ್‌ನಿಂದಲೂ ನೋಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಅದೆಷ್ಟೋ ಅಭಿಮಾನಿಗಳ ಮನಸ್ಸು ಗೆದ್ದಿರುವ ಸ್ಯಾಮ್ಸನ್ ಕ್ರೀಸ್‌ನಲ್ಲಿ ಇದ್ದಾರೆ ಅಂದರೆ ಅಭಿಮಾನಿಗಳ ಜೊತೆಗೂ ತಂಡಕ್ಕೂ ಒಂದು ಭರವಸೆ ಇರುತ್ತದೆ. ತಂಡ ಇಕ್ಕಟ್ಟಿಗೆ ಸಿಲುಕಿದಾಗ ಸಹನೆಯಿಂದ ಗೆಲುವಿನ ದೋಣಿ ಹತ್ತಿಸಿ ದಡ ಸೇರಿಸಿದ ಎಷ್ಟೋ ಉದಾಹರಣೆಗಳನ್ನು ಗಮನಿಸಬಹುದು. ಇಂತಹ ಒಂದು ದೈತ್ಯ ಪ್ರತಿಭೆಗೆ ಭಾರತೀಯ ಕ್ರಿಕೆಟ್ ಅವಕಾಶ ನೀಡಲು ಹಿಂದೆ ಮುಂದೆ ನೋಡಿದ ಪರಿಣಾಮ ಅವರ ಕ್ರಿಕೆಟ್ ಕೆರಿಯರ್‌ಗೆ ಬಹು ದೊಡ್ಡ ಹೊಡೆತ ಬಿತ್ತು. ಇದರಲ್ಲಿ ಸಂಜು ಅವರ ತಪ್ಪು ಕೂಡ ಇದೆ. ತನ್ನನ್ನ ತಾನು ಬೇಗ ಗುರುತಿಸಿಕೊಳ್ಳುವ ಹಂಬಲದಲ್ಲಿ ಎಡವಿದ ಕಾಲಲ್ಲೇ ಪದೇ ಪದೇ ಎಡವಿ ಪೆವಿಲಿಯನ್ ಕಡೆ ಸಾಗಿದರು. ಇದರ ಪರಿಣಾಮ ರಿಷಬ್ ಪಂತ್ ಮುಂಚೆಯೇ ಟವಲ್ ಹಾಕಿ ಕಾಯುತ್ತಿದ್ದರು. ನನಗೆ ಅವಕಾಶ ಯಾವಾಗ ಸಿಗುತ್ತೋ ಅಂತ. ಸಿಕ್ಕ ಅವಕಾಶಗಳಲ್ಲಿ ಅಸಾಧರಣ ಪ್ರದರ್ಶನ ತೋರಿದರು. ನಂತರ ಇಶಾನ್ ಕಿಶನ್ ಸೇರಿದಂತೆ ಅನೇಕ ಯುವ ಪ್ರತಿಭೆಗಳು ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಕಾರಣ ಸಂಜುಗೆ ಅಷ್ಟಾಗಿ ಅವಕಾಶಗಳು ಲಭಿಸಲಿಲ್ಲ. ಇದು ಅವರನ್ನು ಬ್ಯಾಕಪ್ ಆಟಗಾರರನ್ನಾಗಿ ಮಾಡಿ ಬೆಂಚ್ ಕಾಯುವಂತೆ ಮಾಡಿತು.
Asia Cup 2025: ಏಷ್ಯಾಕಪ್‌ನಿಂದ ಕೈಬಿಟ್ಟ ವಿಚಾರದಲ್ಲಿ ಮೌನ ಮುರಿದ ಶಮಿ
ಇದರ ನಡುವೆಯೂ ಅವರ ಪ್ರತಿಭೆಗೆ ಐಪಿಎಲ್ ಮತ್ತೆ ಮತ್ತೆ ಜೀವ ತುಂಬುತ್ತಲೇ ಬಂತು. ರಾಜಸ್ತಾನ್ ತಂಡದ ನಾಯಕನಾಗಿ ಸಂಜು ಐಪಿಎಲ್‌ನಲ್ಲಿ ತನ್ನದೇ ಆದ ವರ್ಚಸ್ಸು ರೂಪಿಸಿಕೊಂಡರು. ಅವರ ನಿರ್ಧಾರಗಳು, ಯುವ ಆಟಗಾರರಿಗೆ ನೀಡಿದ ಮಾರ್ಗದರ್ಶನ ಕೇವಲ ಅವರು ಪ್ರತಿಭಾನ್ವಿತ ಕ್ರಿಕೆಟಿಗ ಮಾತ್ರವಲ್ಲ ಒಬ್ಬ ಉತ್ತಮ ನಾಯಕನೆಂದು ಬಿಂಬಿಸಿದವು. 2022ರ ಐಪಿಎಲ್ ಸೀಸನ್‌ನಲ್ಲಿ ತಂಡವನ್ನು ಫೈನಲ್‌ಗೆ ಕರೆದೊಯ್ಯಲು ಎದುರಾಳಿಗಳನ್ನು ಮಣಿಸಲು ಅವರು ಹೂಡಿದ ಹಲವು ತಂತ್ರಗಳು ಅವರಲ್ಲಿದ್ದ ಸೃಜನಶೀಲತೆಯನ್ನು ತೆರೆದಿಟ್ಟವು. ಆದರೆ ಇದಾದ ಬಳಿಕ ಅವರ ಅಸ್ಥಿರ ಪ್ರದರ್ಶನ ಅವರ ಮೇಲೆ ಮರು ಸಂಶಯವನ್ನು ಹುಟ್ಟು ಹಾಕಿತು. ಈ ಸಂಶಯಗಳನ್ನು ಹುಸಿಗೊಳಿಸಲು ಆಯ್ಕೆಗಾರರು ಅವರಿಗೆ ಅವಕಾಶ ಒದಗಿಸಲಿಲ್ಲ. ಹಾಗಾಗಿ ನೋಡುಗರ ಕಣ್ಣಲ್ಲಿ ಸಂಜು ಕೆಲಕಾಲ ಅಸ್ಥಿರವಾಗಿಯೇ ಉಳಿದುಕೊಂಡು ಬಿಟ್ಟರು.
ಹೀಗಾದ ಮೇಲೆ ಸತತ ಪ್ರಯತ್ನ, ಅಥವಾ ಮರಳಿ ಯತ್ನ ಮಾಡಿ ಪುನಃ ಲಯಕ್ಕೆ ಮರಳುವಷ್ಟರ ಹೊತ್ತಿಗೆ ಸಂಜು ಪಾಲಿನ ಅವಕಾಶದ ಬಾಗಿಲು ಮುಚ್ಚಿತ್ತು. ಬ್ಯಾಕಪ್ ಆಟಗಾರನಾಗಿ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದ ಅವರು ಸಿಕ್ಕ ಅವಕಾಶಗಳಲ್ಲಿ ತಮ್ಮ ಗ್ಲೌಸಿನ ಮತ್ತು ಬ್ಯಾಟಿನ ಸಾಮರ್ಥ್ಯ ತೋರಿಸಿದರು. ಹೀಗೆ ಕಳೆದ ಕೆಲವು ದಿನಗಳಿಂದ ಅಭಿಷೇಕ್ ಶರ್ಮಾ ಜೊತೆ ಉತ್ತಮ ಆರಂಭಿಕ ಆಟಗಾರರಾಗಿ ಕಾರ್ಯನಿರ್ವಹಿಸಿ ಏಷ್ಯಾಕಪ್ ಟೂರ್ನಿಯಲ್ಲಿ ತಂಡದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ನಿರೀಕ್ಷೆಯಂತೆಯೇ 15 ಮಂದಿ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೂಡ ಇತ್ತು. ಆದರೆ ಟೆಸ್ಟ್ ಕ್ರಿಕೆಟ್ ನಾಯಕ ಶುಭ್‌ಮನ್ ಗಿಲ್ ತಂಡದ ಉಪನಾಯಕರಾಗಿರುವುದರಿಂದ ಅಭಿಷೇಕ್ ಜೊತೆ ಅವರು ಇನಿಂಗ್ಸ್ ಆರಂಭಿಸುವುದು ಬಹುತೇಕ ಸ್ಪಷ್ಟವಾಗಿದೆ. ಮತ್ತೆ ಸ್ಯಾಮ್ಸನ್ ಅವರ ಕಥೆ ಏನು ಅಂದರೆ ಬೆಂಚ್ ಕಾಯ್ದು, ಬ್ಯಾಕಪ್ ಆಟಗಾರರಾಗಿ ತಂಡದಲ್ಲಿ ಉಳಿಯಬೇಕು. ಇದು ಅವರಿಗೆ ಮತ್ತು ಅಭಿಮಾನಿಗಳಿಗೆ ನುಂಗಲಾರದ ತುತ್ತಾದರೂ ಅನ್ಯ ಮಾರ್ಗವಿಲ್ಲ.
Asia Cup 2025: ಏಷ್ಯಾ ಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಒಮಾನ್
ತಂಡ ಪ್ರಕಟವಾಗುವ ಮುನ್ನ ಸ್ಯಾಮ್ಸನ್ ಅವರಿಗೆ ನಾನು ತಂಡದಲ್ಲಿ ಆಡಿಯೇ ಆಡುತ್ತೇನೆ ಎನ್ನುವ ಭರವಸೆ ಇತ್ತು. ಯಾಕೆಂದರೆ ವಿಕೆಟ್ ಕೀಪರ್ ರಿಷಭ್ ಪಂತ್ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಕ್ಕೆ ತುತ್ತಾಗಿ ತಂಡದಿಂದ ದೂರ ಉಳಿದಿದ್ದಾರೆ. ಈ ಕಾರಣ ಸಂಜುವಿನಲ್ಲಿ ಆಸೆ ಚಿಗುರಿತ್ತು. ಆದರೆ ಆಯ್ಕೆ ಸಮಿತಿ ಮೂರು ಜನ ಆರಂಭಿಕ ಆಟಗಾರರನ್ನು ಆಯ್ಕೆ ಮಾಡಿದ ಕಾರಣ ಅವರ ಆಶಾಗಣ್ಣುಗಳಿಗೆ ಅಲ್ಪ ನಿರಾಶೆಯುಂಟು ಮಾಡಿತು. ಇಷ್ಟೆಲ್ಲಾ ಆದ ಮೇಲೂ ಸ್ವತಃ ಅಜಿತ್ ಅಗರ್ಕರ್ ಅವರೇ ಅಭಿಷೇಕ್ ಜೊತೆ ಗಿಲ್ ಓಪನ್ ಮಾಡಲಿದ್ದಾರೆ ಎನ್ನುವ ಸುಳಿವು ನೀಡಿದ್ದಾರೆ. ಇದು ಅವರನ್ನು ಮತ್ತಷ್ಟೂ ಆತಂಕದ ಸುಳಿಗೆ ತಳ್ಳಿದೆ. ಇದೆಲ್ಲಾ ಬಿಟ್ಟು ಯಶಸ್ವಿ ಜೈಸ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ಅವರಂತೆ ತಂಡದಲ್ಲಿ ಸ್ಥಾನ ಸಿಗಲಿಲ್ಲವೆಂದಲ್ಲಿ ಆ ನೋವು ಕ್ಷಣಿಕವಾಗುತ್ತಿತ್ತೇನೋ? ಆದರೆ ಈ ಸನ್ನೀವೇಶ ಅವರನ್ನು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಸಿದೆ ಎನ್ನಬಹುದು.
ಇನ್ನು ಒಂದು ವೇಳೆ ಏನಾದರೂ ಮ್ಯಾನೇಜ್‌ಮೆಂಟ್ ಸ್ಯಾಮ್ಸನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಯೋಚಿಸದರೆ ಅದು ಒಂದು ರೀತಿಯ ಸಮಾಧಾನ ಕೊಡಬಹುದು. ಆದರೆ ವಾಸ್ತವವಾಗಿ ಮಧ್ಯಮ ಕ್ರಮಾಂಕ ಸಂಜು ಅವರಿಗೆ ಸೂಕ್ತ ಎನಿಸಿವುದಿಲ್ಲ. ಏಕೆಂದರೆ ಅವರು ಆರಂಭಿಕರಾಗಿಯೇ ಆಡುವುದು ಉತ್ತಮ. ಹೊಸ ಬಾಲಲ್ಲಿ ಅವರಿಗಿರುವ ಹಿಡಿತ ಮಧ್ಯಮ ಕ್ರಮಾಂಕದಲ್ಲಿ ಆಡುವಾಗ ಕಾಣ ಸಿಗುವುದಿಲ್ಲ. ಹಾಗಾಗಿ ಅಗ್ರ ಕ್ರಮಾಂಕವೇ ಅವರಿಗೆ ಬ್ಯಾಟ್ ಬೀಸಲು ಸರಿಯಾದ ಸಮಯ ಎನ್ನಬಹುದು. ಮುಖ್ಯ ವಿಕೆಟ್ ಕೀಪರ್ ಸಂಜು ಅವರೇ ಆಗಿರುವುದರಿಂದ ಇದೊಂದು ಯೋಚನೆ ಆಯ್ಕೆದಾರರ ತೆಲೆಗೆ ಬರಬಹುದು.
Asia Cup 2025: ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ
ಇತ್ತ ಅವರಿಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗದೇ ಹೋದರೆ ಬಹಳ ನಿರಾಶದಾಯಕ ಮತ್ತು ಆಘಾತಕಾರಿ ಸಂಗತಿ. ಒಬ್ಬ ಉತ್ತಮ ಕೌಶಲವುಳ್ಳ ಆಟಗಾರನೊಬ್ಬನಿಗೆ ಅವಕಾಶ ಕೈ ತಪ್ಪಿ ಹೋದರೆ ಅದು ಅವರ ನಂಬಿಕೆ ಮತ್ತು ಭರವಸೆಗಳಿಗೆ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರ ಭವಿಷ್ಯಕ್ಕೆ ಇದು ಒಂದು ರೀತಿಯಾಗಿ ಹಿನ್ನಡೆಯನ್ನುಂಟು ಮಾಡಬಹುದು. ಹೀಗೆ ಅನೇಕ ಏಳು ಬೀಳುಗಳಿಂದ ಕೂಡಿರುವ ಅವರ ಪಯಣ ಎಲ್ಲರಿಗೂ ಜೀವನ ಪಾಠವಾಗಿದೆ. ಕೇವಲ ಪ್ರತಿಭೆ ಇದ್ದರೆ ಸಾಕಾಗುವುದಿಲ್ಲ. ಅದನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ, ಪರಿಶ್ರಮದ ಜೊತೆಗೆ ಸಿಕ್ಕ ಅವಕಾಶಗಳನ್ನು ಬಾಚಿ ತಬ್ಬಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಅದೃಷ್ಟ ಮಾತೆಯೂ ಕೈ ಹಿಡಿಯ ಬೇಕಾಗುತ್ತದೆ. ಆದರೆ ಇವುಗಳಲ್ಲಿ ಸಂಜು ಅವರಿಗೆ ಒಂದಲ್ಲ ಒಂದು ಸಮಯದಲ್ಲಿ ಯಾವುದಾದರೂ ಒಂದು ಅಂಶ ಕೈ ಕೊಟ್ಟಿದೆ. ಇದರ ಪರಿಣಾಮವೇ ಬ್ಯಾಕಪ್ ಆಟಗಾರರಾಗಿರುವುದು. ತಂಡದಲ್ಲಿ ಮಿಂಚಿ ಮೆರೆಯಬೇಕಿದ್ದವರು ಬೆಂಚ್ ಕಾಯುವುದು ಅಂದರೆ ವಿಷಾದದ ಸಂಗತಿ. ಆದರೆ ಎಂದೂ ಕೋಪಗೊಳ್ಳದೇ, ಧೃತಿಗೆಡದೇ, ತಾಳ್ಮೆ ಕಳೆದುಕೊಳ್ಳದೇ ಸದಾ ಮುಖದಲ್ಲಿ ಮಂದಹಾಸ ಬೀರುವ ಅವರ ಚೈತನ್ಯ ಕಡಿಮೆಯಾಗಿಲ್ಲ.
ಆದರೆ ಇನ್ನೂ ಕಾಲ ಮಿಂಚಿಲ್ಲ. ಅದೃಷ್ಟ ಸಹಕರಿಸಿದರೆ ಒಂದು ಉತ್ತಮ ಸರಣಿ, ಪಂದ್ಯಕ್ಕೊಂದು ಅದ್ಭುತ ಅರ್ಧ ಶತಕವೋ ಅಥವಾ ಶತಕವೋ ಬಂದರೆ ಸಾಕು ಅವರ ಹೆಸರು ಮತ್ತೆ ಬೇರೆಯದ್ದೆ ರೂಪ ಪಡೆಯುತ್ತದೆ. ಪ್ರತಿ ಬಾರಿಯೂ ಸಂಜು ಮೈದಾನಕ್ಕಿಳಿದಾಗ ಅವರ ಜೊತೆ ಅಭಿಮಾನಿಗಳ ಆಶೀರ್ವಾದ ಇರುತ್ತೆ. ಉತ್ಸಾಹ ಇರುತ್ತೆ. ಹಾಗಾಗಿ ಅವರು ಇನ್ನೂ ಭಾರತೀಯ ಕ್ರಿಕೆಟ್‌ನಲ್ಲಿ ಪೂರ್ಣಗೊಳ್ಳದ ಅಧ್ಯಾಯ. ಅದು ಬಹು ದೊಡ್ಡ ಗೆಲುವಿನೊಂದಿಗೆ ಸಂಪೂರ್ಣ ಅಧ್ಯಾಯವಾಗುತ್ತದೆ ಎನ್ನುವ ಆಶಾ ಭಾವನೆ ಇನ್ನೂ ಮಂಕಾಗಿಲ್ಲ. ಇಟ್ ಇಸ್ ಓಕೆ ಸ್ಯಾಮ್ಸನ್, ಸೋಲದೇ ಗೆದ್ದರೆ ಮಂದಹಾಸ ಸೋತು ಗೆದ್ದರೆ ಇತಿಹಾಸ.