ನವದೆಹಲಿ: ಭಾರತ ಎ ತಂಡ, ದಕ್ಷಿಣ ಆಫ್ರಿಕಾ ಎ ವಿರುದ್ಧ ನಾಲ್ಕು ದಿನಗಳ ಎರಡು ಪಂದ್ಯಗಳನ್ನು ಆಡಲಿದೆ. ಈ ಪಂದ್ಯಕ್ಕೆ ಬಿಸಿಸಿಐ ಭಾರತ ಎ ತಂಡವನ್ನು (India A Squad) ಪ್ರಕಟಿಸಿದೆ. ಗಾಯದಿಂದ ಗುಣಮುಖರಾಗಿರುವ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ (Rishabh Pant) ಭಾರತ ಎ ತಂಡದ ನಾಯಕತ್ವವನ್ನು ನೀಡಲಾಗಿದೆ. ಆತಿಥೇಯ ತಂಡ ಅಕ್ಟೋಬರ್ 30 ರಂದು ಮೊದಲನೇ ಪಂದ್ಯವನ್ನು ಆಡಲಿದೆ. ಆದರೆ, ದೇಶಿ ಹಾ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದರೂ ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ (Sarfaraz Khan) ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರು ಸಂಪೂರ್ಣ ಫಿಟ್ ಆಗಿದ್ದು, ಮುಂಬೈ ಪರ ರಣಜಿ ಟ್ರೋಫಿ ಪಂದ್ಯದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ.
ಭಾರತ 'ಎ' ತಂಡದಿಂದ 28 ವರ್ಷದ ಸರ್ಫರಾಜ್ ಖಾನ್ ಅವರನ್ನು ಕೈಬಿಟ್ಟಿರುವುದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಅಭಿಮಾನಿಗಳು ಆಯ್ಕೆದಾರರು ಮತ್ತು ಬಿಸಿಸಿಐ ಅನ್ನು ಪ್ರಶ್ನಿಸುತ್ತಿದ್ದಾರೆ. ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೂಡ ಸರ್ಫರಾಝ್ ಖಾನ್ ಅವರನ್ನು ಕೈ ಬಿಟ್ಟ ಬಿಸಿಸಿಐ ಅನ್ನು ಪ್ರಶ್ನೆ ಮಾಡಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ, "ಸರ್ಫರಾಜ್ ಖಾನ್ ಅವರನ್ನು ಭಾರತ ಎ ತಂಡಕ್ಕೆ ಏಕೆ ಆಯ್ಕೆ ಮಾಡಲಾಗಿಲ್ಲ?" ಎಂದು ಪ್ರಶ್ನೆ ಮಾಡಿದ್ದಾರೆ.
ಭಾರತ ಎ ತಂಡದಿಂದ ಮೊಹಮ್ಮದ್ ಶಮಿ ಔಟ್, ರಿಷಭ್ ಪಂತ್‌ಗೆ ನಾಯಕತ್ವ!
ಅಸಾದುದ್ದೀನ್ ಓವೈಸಿ ಅವರ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಡ್ರೆಸ್ಸಿಂಗ್ ರೂಮ್ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪ ಸರ್ಫರಾಜ್ ಖಾನ್ ಅವರ ಮೇಲಿದೆ. ಸರ್ಫರಾಝ್ ಅವರನ್ನು ಕೈಬಿಡಲು ಇದೇ ಕಾರಣ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದರಲ್ಲಿ ಮುಸ್ಲಿಂ ದೃಷ್ಟಿಕೋನವನ್ನು ಹುಡುಕುತ್ತಿದ್ದಾರೆ. ಆದರೆ, ಇನ್ನು ಕೆಲವರು ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ ಅವರ ಉದಾಹರಣೆಯನ್ನು ಉಲ್ಲೇಖಿಸುತ್ತಿದ್ದಾರೆ. ಗೌತಮ್ ಗಂಭೀರ್ ಕೂಡ ಸರ್ಫರಾಜ್ ಅವರನ್ನು ಕೈಬಿಟ್ಟ ಆರೋಪ ಎದುರಿಸುತ್ತಿದ್ದಾರೆ.
28ರ ಪ್ರಾಯದ ಸರ್ಫರಾಝ್ ಖಾನ್ ಭಾರತ ಪರ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕವನ್ನು ಗಳಿಸಿದ್ದಾರೆ. ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 150 ರನ್ ಗಳಿಸಿದರು. ಆದಾಗ್ಯೂ, ನ್ಯೂಜಿಲೆಂಡ್ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ವಿಫಲರಾಗಿದ್ದರು. ಇದರ ನಂತರ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಈಗ ಅವರಿಗೆ ಭಾರತ ಎ ತಂಡದಲ್ಲುಯೂ ಅವಕಾಶ ನಿರಾಕರಿಸಲಾಗಿದೆ.
ಮೊದಲನೇ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಎ ತಂಡ: ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ಆಯುಷ್ ಮ್ಹಾತ್ರೆ, ಎನ್ ಜಗದೀಸನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಅನ್ಷುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಸರನ್ಶ್ ಜೈನ್.
ಎರಡನೇ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಎ ತಂಡ: ರಿಷಬ್ ಪಂತ್ (ನಾಯಕ/ವಿಕೆಟ್ ಕೀಪರ್), ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್‌ವಾಡ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುಥರ್, ಖಲೀಲ್ ಅಹ್ಮದ್, ಗುರ್ನರ್ ಬ್ರಾರ್, ಅಭಿಮನ್ಯು ಈಶ್ವರನ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.