ನವದೆಹಲಿ: ಮುಂಬರುವ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ಮಿನಿ ಹರಾಜಿಗೂ ಮುನ್ನ ಭಾರತ ತಂಡದ ವಿಶ್ವಕಪ್ ವಿಜೇತ ಆಟಗಾರ್ತಿ ದೀಪ್ತಿ ಶರ್ಮಾ (Deepthi Sharma) ಹಾಗೂ ಅಮೇಲಿಯಾ ಕೌರ್ ಸೇರಿದಂತೆ ಹಲವು ಆಟಗಾರ್ತಿಯರು ತಮ್ಮ-ತಮ್ಮ ಫ್ರಾಂಚೈಸಿಗಳಿಂದ ರಿಲೀಸ್ ಆಗಲಿದ್ದಾರೆಂದು ಇಎಸ್‌ಪಿಎನ್ ಕ್ರಿಕ್‌ಇನ್ಪೋ ವರದಿ ಮಾಡಿದೆ. ದೀಪ್ತಿ ಶರ್ಮಾಅವರ ಜತೆಗೆ ಮೆಗ್ ಲ್ಯಾನಿಂಗ್ ಸೇರಿದಂತೆ ಹಲವು ಆಟಗಾರ್ತಿಯರು ಈ ಸಲ ಮಿನಿ ಹರಾಜಿನಲ್ಲಿ (WPL Mini Auction) ಕಾಣಿಸಿಕೊಳ್ಳಲಿದ್ದಾರೆ.
ಡೆಲ್ಲಿ ಫ್ರಾಂಚೈಸಿಯು ಮೆಗ್ ಲ್ಯಾನಿಂಗ್ ಅವರಿಂದ ಬೇರೆಯಾಗಲು ಯೋಜಿಸುತ್ತಿದೆ ಎಂದು ಇಂಡಿಯಾ ಟುಡೇ ಈ ಹಿಂದೆ ವರದಿ ಮಾಡಿತ್ತು. ಹೊಸ ಋತುವಿಗೆ ಮುಂಚಿತವಾಗಿ ತಮ್ಮ ಪೂರ್ಣ ಉಳಿಸಿಕೊಳ್ಳುವಿಕೆಗಾಗಿ ಪ್ರಯತ್ನಿಸಿದ ಎರಡು ತಂಡಗಳಲ್ಲಿ ಡೆಲ್ಲಿ ಮೂಲದ ಫ್ರಾಂಚೈಸಿಯೂ ಸೇರಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಅನ್ನಾಬೆಲ್ ಸದರ್ಲ್ಯಾಂಡ್, ಮಾರಿಜಾನ್ ಕಾಪ್, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ ಮತ್ತು ನಿಕಿ ಪ್ರಸಾದ್ ಅವರನ್ನು ಉಳಿಸಿಕೊಂಡಿತು.
ಮುಂಬೈ ಇಂಡಿಯನ್ಸ್ ತಂಡ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸೀವರ್ ಬ್ರಂಟ್, ಅಮಂಜೋತ್ ಕೌರ್, ಜಿ ಕಮಿಲಿನಿ ಹಾಗೂ ಹೇಯ್ಲಿ ಮ್ಯಾಥ್ಯೂಸ್ ಅವರನ್ನು ಉಳಿಸಿಕೊಂಡಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಮೃತಿ ಮಂಧಾನಾ, ಎಲಿಸ್ ಪೆರಿ, ರಿಚಾ ಘೋಷ್ ಹಾಗೂ ಶ್ರೇಯಾಂಕ ಪಾಟೀಲ್ ಅವರನ್ನು ಉಳಿಸಿಕೊಂಡಿದೆ ಎಂದು ವರದಿಯಾಗಿದೆ.
IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ
ಗುಜರಾತ್ ಟೈಟನ್ಸ್ ತಂಡ ಆಶ್ಲೆ ಗಾರ್ಡ್ನರ್ ಹಾಗೂ ಬೆಥ್ ಮೂನಿ ಅವರನ್ನು ಉಳಸಿಕೊಂಡು ಹರ್ಲೀನ್ ಡಿಯೋಲ್ ಸೇರಿದಂತೆ ಹಲವರನ್ನು ರಿಲೀಸ್ ಮಾಡಲು ನಿರ್ಧರಿಸಿದೆ. ಯುಪಿ ವಾರಿಯರ್ಸ್ ತಂಡ ಶ್ವೇತಾ ಸೆಹ್ರಾವತ್ ಅವರನ್ನು ಉಳಿಸಿಕೊಂಡು, ದೀಪ್ತಿ ಶರ್ಮಾ, ಅಲಿಸಾ ಹೀಲಿ ಸೇರಿದಂತೆ ಹಲವು ಆಟಗಾರ್ತಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದಲೂ ಗಮನ ಸೆಳೆದಿರುವ ಕ್ರಾಂತಿ ಗೌಡ್ ಅವರು ರೀಲಿಸ್ ಆಟಗಾರ್ತಿಯರ ಪಟ್ಟಿಗೆ ಸೇರಿಸಲಾಗಿದೆ. ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದ ಹೊರತಾಗಿಯೂ ದೀಪ್ತಿ ಶರ್ಮಾ ಅವರನ್ನು ಕೈ ಬಿಡುವ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಏಕೆಂದರೆ ಈ ಟೂರ್ನಿಯಲ್ಲಿ ಅವರು 22 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ಐದು ವಿಕೆಟ್ ಹಾಗೂ ಅರ್ಧಶತಕ ಗಳಿಸಿದ್ದರು. ಈ ಟೂರ್ನಿಯಲ್ಲಿ ಅವರು ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟಕ್ಕಿಟ್ಟ ಡಿಯಾಜಿಯೊ!
ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉಳಿಸಿಕೊಳ್ಳಲಿರುವ ಆಟಗಾರ್ತಿಯರು
ಡೆಲ್ಲಿ ಕ್ಯಾಪಿಟಲ್ಸ್: ಅನ್ನಾಬೆಲ್ ಸುಥರ್ಲೆಂಡ್, ಮಾರಿಜಾನ್ ಕಾಪ್, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ, ನಿಕಿ ಪ್ರಸಾದ್
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸೀವರ್ ಬ್ರಂಟ್, ಅಮಂಜೋತ್ ಕೌರ್, ಜಿ ಕಮಿಲಿನಿ ಹಾಗೂ ಹೇಯ್ಲಿ ಮ್ಯಾಥ್ಯೂಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನಾ, ಎಲಿಸ್ ಪೆರಿ, ರಿಚಾ ಘೋಷ್, ಶ್ರೇಯಾಂಕ ಪಾಟೀಲ್
ಗುಜರಾತ್ ಜಯಂಟ್ಸ್: ಆಶ್ಲೆ ಗಾರ್ಡ್ನರ್, ಬೆಥ್ ಮೂನಿ
ಯುಪಿ ವಾರಿಯರ್ಸ್: ಶ್ರೇತಾ ಸೆಹ್ರಾವತ್