ಕೌಲಾಲಂಪುರ: ಕನ್ನಡತಿ ನಿಕಿ ಪ್ರಸಾದ್ ಸಾರಥ್ಯದ ಅಂಡರ್ 19 ಭಾರತ ಮಹಿಳಾ ತಂಡವು ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಿರಿಯರ ಮಹಿಳಾ ತಂಡದ ಈ ಸಾಧನೆಯನ್ನು ಭಾರತ ಹಿರಿಯರ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್, ಇರ್ಫಾನ್ ಪಠಾಣ್, ರಿಷಭ್ ಪಂತ್, ಮಿಥಾಲಿ ರಾಜ್ ಸೇರಿದಂತೆ ಹಲವು ದಿಗ್ಗಜರು ಶ್ಲಾಘಿಸಿದ್ದಾರೆ. 2023ರ ಚೊಚ್ಚಲ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಶಫಾಲಿ ವರ್ಮಾ ಸಾರಥ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಅಂಡರ್ 19 ಮಹಿಳಾ ತಂಡದ ಸಾಧನೆಯನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಶ್ಲಾಘಿಸಿದ್ದು, "ನಮ್ಮ ಯುವ ಆಟಗಾರ್ತಿಯರು ನಿಜಕ್ಕೂ ರೋಮಾಂಚಕ ಪ್ರದರ್ಶನ ನೀಡಿದ್ದಾರೆ. ಭಾರತ ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ," ಎಂದು ಟ್ವೀಟ್ ಮಾಡಿ ಗುಣಗಾಣ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾವನ್ನು ಮಣಿಸಿ ಸತತ 2ನೇ ಬಾರಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ!
ಅದ್ಭುತ ಸಾಧನೆ: ಮಿಥಾಲಿ ರಾಜ್
"ಇದು ತಡೆಯಲಾಗದ, ಸರಿಸಾಟಿಯಿಲ್ಲದ, ಅಜೇಯ ಗೆಲುವಾಗಿದೆ . ಅಂಡರ್ 19 ಮಹಿಳಾ ತಂಡವು ಕೇವಲ ಟ್ರೋಫಿ ಮಾತ್ರ ಗೆದ್ದಿಲ್ಲ, ಬದಲಿಗೆ ಪ್ರಾಬಲ್ಯ ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ಪ್ರತಿ ಹಂತದಲ್ಲೂ ಭಾರತದ ಆಟಗಾರ್ತಿಯರ ಹಿಡಿತದಲ್ಲಿತ್ತು. ಇಂತಹ ಅತ್ಯದ್ಭುತ ಪ್ರದರ್ಶನ ತೋರಲು ನೆರವಾದ ಪ್ರತಿಯೊಬ್ಬ ಆಟಗಾರ್ತಿ ಹಾಗೂ ಸಿಬ್ಬಂದಿ ತಂಡವನ್ನು ಅಭಿನಂದಿಸುತ್ತೇನೆ. ನಿಮ್ಮ ಸಾಧನೆಯಿಂದ ನಮಗೆ ನಿಜಕ್ಕೂ ಹೆಮ್ಮೆಯಾಗಿದೆ. ಭಾರತ ತಂಡದಲ್ಲಿ ಸುವರ್ಣ ಯುಗ ಆರಂಭವಾಗಿದೆ," ಎಂದು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಝ್ ಶ್ಲಾಘಿಸಿದ್ದಾರೆ.
ವಿಶ್ವಕಪ್ ವಿಜೇತ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ರಿಷಭ್ ಪಂತ್ ಅವರು ಕೂಡ ಅಂಡರ್ 19 ಮಹಿಳಾ ತಂಡದ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಗಂಗೋಡಿ ತ್ರಿಷಾ ಆಲ್‌ರೌಂಡ್ ಪ್ರದರ್ಶನ
ಮಲೇಷ್ಯಾದ ಕೌಲಾಲಂಪುರದಲ್ಲಿ ಭಾನುವಾರ (ಫೆಬ್ರವರಿ 2) ನಡೆದಿದ್ದ ಅಂಡರ್ 19 ಮಹಿಳಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ, ಜಿ ತ್ರಿಷಾ (15 ಕ್ಕೆ3) ಅವರ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 80 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಪರುಣಿಕಾ ಸಿಸೋಡಿಯಾ, ಆಯುಷಿ ಶುಕ್ಲಾ ಹಾಗೂ ವೈಷ್ಣವಿ ಶರ್ಮಾ ತಲಾ ಎರಡು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ನೀಡಿದ 83 ರನ್‌ಗಳ ಗುರಿ ಹಿಂಬಾಲಿಸಿದ ಭಾರತ-19 ತಂಡ ಆರಂಭಿಕ ಆಟಗಾರ್ತಿ ಜಿ ಕಮಲಿನಿ (9 ರನ್) ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಜಿ ತ್ರಿಷಾ (44 ರನ್) ಹಾಗೂ ಉಪನಾಯಕಿ ಸನಿಕಾ ಚಾಲ್ಕೆ (26 ರನ್) 52 ರನ್ ಜೊತೆಯಾಟದಿಂದ 11.2 ಓವರ್‌ಗಳಲ್ಲೇ ಗೆಲುವಿನ ದಡ (84 ರನ್) ತಲುಪಿ ಚಾಂಪಿಯನ್ ಪಟ್ಟ ಅಲಂಕರಿಸಿತು. ತಮ್ಮ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಜಿ ತ್ರಿಷಾ, ಟೂರ್ನಿ ಶ್ರೇಷ್ಠ (309 ರನ್, 7 ವಿಕೆಟ್) ಪ್ರಶಸ್ತಿಗೂ ಭಾಜನರಾದರು.