ಇಂದೋರ್: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಮಹಿಳಾ ವಿಶ್ವಕಪ್(Women's World Cup 2025) ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ನಾಲ್ಕು ರನ್‌ಗಳ ವೀರೋಚಿತ ಸೋಲು ಅನುಭವಿಸಿತ್ತು. ಇದೀಗ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ಭಾರತ ತಂಡದ ಉಪ ನಾಯಕಿ ಸ್ಮೃತಿ ಮಂಧಾನ(Smriti Mandhana) ಹೇಳಿದ್ದಾರೆ. ತಮ್ಮ ವಿಕೆಟ್ ಪತನವಾಗಿದ್ದು ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ಸ್ಮೃತಿ ಔಟಾದಾಗ ಗೆಲ್ಲಲು 52 ಎಸೆತದಲ್ಲಿ 55 ರನ್ ಬೇಕಿತ್ತು. ಕೈಯಲ್ಲಿ ಇನ್ನೂ 6 ವಿಕೆಟ್ ಇತ್ತು. ರನ್‌ರೇಟ್ ಒತ್ತಡವಿರಲಿಲ್ಲ. ಆದರೆ ರಿಚಾ ಘೋಷ್ 8, ದೀಪ್ತಿ ಶರ್ಮಾ 50 ರನ್ ಗಳಿಸಿ ವಿಕೆಟ್ ಕಳೆದುಕೊಂಡು ಭಾರತದ ಡಗೌಟ್‌ನಲ್ಲಿ ಮೌನ ಆವರಿಸುವಂತೆ ಮಾಡಿದರು.
‘ಹೊಡೆತಗಳ ಆಯ್ಕೆ ಉತ್ತಮವಾಗಿರಬೇಕಿತ್ತು. ಈ ತಪ್ಪು ನನ್ನಿಂದಲೇ ಶುರುವಾಯಿತು’ ಎಂದು ಮಂಧಾನ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೆಮಿಮಾ ರಾಡ್ರಿಗಸ್ ಅವರನ್ನು ಇಂಗ್ಲೆಂಡ್ ಪಂದ್ಯದಿಂದ ಕೈಬಿಟ್ಟ ಬಗ್ಗೆಯೂ ಸ್ಪಷ್ಟನೆ ನೀಡಿದ ಸ್ಮೃತಿ, ಐದು ಮಂದಿ ಬೌಲರ್‌ಗಳ ಆಯ್ಕೆಯೊಡನೆ ಕಣಕ್ಕಿಳಿದರೆ ಸಾಲದು ಎಂಬುದು ಕಳೆದ ಎರಡು ಪಂದ್ಯಗಳಲ್ಲಿ ಅರಿವಿಗೆ ಬಂದಿತ್ತು. ಹಗಾಗಿ ಜೆಮಿಮಾ ಅವರನ್ನು ಕೈಬಿಡುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಯಿತು. ಒಂದೊಮ್ಮೆ ಅವರು ಇರುತ್ತಿದರೆ ಪಂದ್ಯ ಗೆಲ್ಲಲೂ ಬಹುದಿತ್ತು.
ಇದನ್ನೂ ಓದಿ Smriti Mandhana: ಸ್ಮೃತಿ ಮಂಧಾನಗೆ ಕೂಡಿ ಬಂದ ಕಂಕಣ ಭಾಗ್ಯ; ಬಹುಕಾಲದ ಪ್ರಿಯಕರನ ಜತೆ ಮದುವೆ
ಇಂಗ್ಲೆಂಡ್ ಎದುರಿನ ಸೋಲಿನಿಂದ ತಂಡದ ಆತ್ಮವಿಶ್ವಾಸ ಕುಗ್ಗಿಲ್ಲ. ಉಳಿದಿರುವ ಎರಡೂ ಪಂದ್ಯಗಳಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಸೆಮಿಫೈನಲ್ ಪ್ರವೆಶೀಸುವ ವಿಶ್ವಾಸ ನಮ್ಮಲ್ಲಿದೆ ಎಂದು ಮಂಧಾನ ಹೇಳಿದರು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಹೆದರ್ ನೈಟ್‌ರ ಅಮೋಘ ಶತಕ (91 ಎಸೆತದಲ್ಲಿ 109 ರನ್, 15 ಬೌಂಡರಿ, 1 ಸಿಕ್ಸರ್)ದ ನೆರವಿನಿಂದ 50 ಓವರಲ್ಲಿ 8 ವಿಕೆಟ್‌ಗೆ 288 ರನ್ ಕಲೆಹಾಕಿತು. ಭಾರತ 284 ರನ್ ಗಳಿಸಿ, 4 ರನ್ ಸೋಲಿಗೆ ಶರಣಾಯಿತು.