ಆನ್‌ಲೈನ್ ಬೆಟ್ಟಿಂಗ್: ಇ.ಡಿ ಎದುರು ವಿಚಾರಣೆಗೆ ಹಾಜರಾದ ಸುರೇಶ್ ರೈನಾ
ಸೋಮವಾರವಷ್ಟೇ ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಹಾಗೂ ಜೂಜಾಟಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟ ರಾಣಾ ದಗ್ಗುಬಾಟಿ ಕೂಡ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಸೋಮವಾರ ವಿಚಾರಣೆಗೆ ಹಾಜರಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ಆಗಸ್ಟ್ 6ರಂದು ವಿಚಾರಣೆಗೆ ಹಾಜರಾಗಿದ್ದರು.


ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ(Suresh Raina) ಬುಧವಾರ (ಆ.13) ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ED) ಮುಂದೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್-ಸಂಬಂಧಿತ(Illegal betting app case) ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾದರು. 1xBet ಅಕ್ರಮ ಬೆಟ್ಟಿಂಗ್ ಆ್ಯಪ್ ಗೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಹಾಜರಾದ ಸುರೇಶ್ ರೈನಾ ಅವರಿಂದ ಜಾರಿ ನಿರ್ದೇಶನಾಲಯ ಹೇಳಿಕೆ ದಾಖಲಿಸಿಕೊಂಡಿತು ಎಂದು ಮೂಲಗಳು ಹೇಳಿವೆ.
38 ವರ್ಷದ ಮಾಜಿ ಭಾರತೀಯ ಕ್ರಿಕೆಟಿಗರಾದ ಸುರೇಶ್ ರೈನಾ ಈ ಆ್ಯಪ್ ಗೆ ಸಂಬಂಧಿಸಿದ ಕೆಲ ಪ್ರಚಾರಗಳಲ್ಲಿ ಭಾಗಿಯಾಗಿದ್ದರು. ವಿಚಾರಣೆಯ ವೇಳೆ ಈ ಆ್ಯಪ್ ನೊಂದಿಗೆ ಅವರಿಗಿರುವ ಸಂಬಂಧದ ಕುರಿತು ಮಾಹಿತಿ ಸಂಗ್ರಹಿಸುವ ಸಲುವಾಗಿ ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿತು ಎನ್ನಲಾಗಿದೆ.
ಅಸಂಖ್ಯಾತ ಜನರಿಗೆ ಹಾಗೂ ಹೂಡಿಕೆದಾರರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಎಸಗಿ, ಭಾರಿ ಪ್ರಮಾಣದ ತೆರಿಗೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಇಂತಹ ಅಕ್ರಮ ಬೆಟ್ಟಿಂಗ್ ಆ್ಯಪ್ ಗಳ ಕುರಿತು ದಾಖಲಾಗಿರುವ ವಿವಿಧ ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ ED Raid: ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಇಡಿ ರೇಡ್
ಸೋಮವಾರವಷ್ಟೇ ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಹಾಗೂ ಜೂಜಾಟಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟ ರಾಣಾ ದಗ್ಗುಬಾಟಿ ಕೂಡ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಸೋಮವಾರ ವಿಚಾರಣೆಗೆ ಹಾಜರಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ಆಗಸ್ಟ್ 6ರಂದು ವಿಚಾರಣೆಗೆ ಹಾಜರಾಗಿದ್ದರು. ಪ್ರಕಾಶ್ ರಾಜ್ ಅವರು ಜುಲೈ 30ರಂದು ವಿಚಾರಣೆಗೆ ಹಾಜರಾಗಿದ್ದರು. ಇವರೊಂದಿಗೆ ನಟಿ ಲಕ್ಷ್ಮಿ ಮಂಚು ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೋಟಿಸ್ ನೀಡಲಾಗಿದೆ.
ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರಕ್ಕೆ ಸಂಬಂಧಿಸಿ ಕ್ರಿಕೆಟಿಗರು, ನಟರು ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ವಿರುದ್ಧ 5 ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ ವಿಚಾರಣೆ ನಡೆಸುತ್ತಿದೆ.