ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PAK vs WI: ಪಾಕಿಸ್ತಾನ ತಂಡ ಕೇವಲ 92 ರನ್‌ಗಳಿಗೆ ಆಲ್‌ಔಟ್‌, ಒಡಿಐ ಸರಣಿ ಗೆದ್ದ ವೆಸ್ಟ್‌ ಇಂಡೀಸ್‌!

PAK vs WI 3rd ODI Highlights: ಬ್ಯಾಟಿಂಗ್‌ ವೈಫಲ್ಯದಿಂದಾಗಿ ಪಾಕಿಸ್ತಾನ ತಂಡ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 202 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ಈ ಸರಣಿಯನ್ನು ಆತಿಥೇಯ ವೆಸ್ಟ್‌ ಇಂಡೀಸ್‌ ತಂಡ 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ವೆಸ್ಟ್‌ ಇಂಡೀಸ್‌ ವಿರುದ್ದ ಕೇವಲ 92 ರನ್‌ಗೆ ಪಾಕಿಸ್ತಾನ ಆಲ್‌ಔಟ್‌!

ವೆಸ್ಟ್‌ ಇಂಡೀಸ್‌ ವಿರುದ್ಧ ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲು.

Profile Ramesh Kote Aug 13, 2025 5:07 PM

ಟ್ರಿನಿಡಾಡ್‌: ಶೇಯ್‌ ಹೋಪ್‌ (Shai Hope) ಶತಕ ಹಾಗೂ ಜೇಡನ್‌ ಸೀಲ್ಸ್‌ (Jayden Seales) ಮಾರಕ ಬೌಲಿಂಗ್‌ ಸಹಾಯದಿಂದ ವೆಸ್ಟ್‌ ಇಂಡೀಸ್‌ ತಂಡ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ (PAK vs WI) ಪಾಕಿಸ್ತಾನ ತಂಡದ ವಿರುದ್ದ 202 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಂಡೀಸ್‌ 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಮೊಹಮ್ಮದ್‌ ರಿಝ್ವಾನ್‌ ಅವರ ನಾಯಕತ್ವದ ಪ್ರವಾಸಿ ಪಾಕಿಸ್ತಾನ ತಂಡ ಏಕದಿನ ಸರಣಿಯನ್ನು ಕಳೆದುಕೊಂಡಿತು.

ಇಲ್ಲಿನ ಬ್ರಿಯಾನ್‌ ಲಾರಾ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಹಾಗೂ ಏಕದಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ವೆಸ್ಟ್‌ ಇಂಡೀಸ್‌ ತಂಡ, ಶೇಯ್‌ ಹೋಪ್‌ (120) ಅವರ ಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 294 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 295 ರನ್‌ಗಳ ಗುರಿಯನ್ನು ನೀಡಿತ್ತು.

WI vs PAK: 18ನೇ ಒಡಿಐ ಶತಕ ಸಿಡಿಸಿ ಬ್ರಿಯಾನ್‌ ಲಾರಾ ಸನಿಹ ಬಂದ ಶೇಯ್‌ ಹೋಪ್‌!

ಬಳಿಕ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ, ಜೇಡನ್‌ ಸೀಲ್ಸ್‌ (18ಕ್ಕೆ 6) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. 29.2 ಓವರ್‌ಗಳಿಗೆ 92 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿತು. ವಿಂಡೀಸ್‌ ತಂಡದ ಶತಕ ಬಾರಿಸಿದ ಶೇಯ್‌ ಹೋಪ್‌, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.‌



ಶೇಯ್‌ ಹೋಪ್‌ 18ನೇ ಶತಕ

ವೆಸ್ಟ್‌ ಇಂಡೀಸ್‌ ಇನಿಂಗ್ಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಶೇಯ್‌ ಹೋಪ್‌. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ವೆಸ್ಟ್‌ ಇಂಡೀಸ್‌ಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಶೇಯ್‌ ಹೋಪ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 94 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 120 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ಏಕದಿನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 18ನೇ ಶತಕವನ್ನು ಪೂರ್ಣಗೊಳಿಸಿದರು.



ಜೇಡನ್‌ ಸೀಲ್ಸ್‌ ಮಾರಕ ಬೌಲಿಂಗ್‌

ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡಕ್ಕೆ ಆರಂಭದಲ್ಲಿಯೇ ಜೇಡನ್‌ ಸೀಲ್ಸ್‌ ಆಘಾತ ನೀಡಿದ್ದರು. ಪಾಕ್‌ ತಂಡದ ಆರಂಭಿಕರಾದ ಸೈಯಮ್‌ ಆಯುಬ್‌ ಹಾಗೂ ಅಬ್ದುಲ್ಲಾ ಶಫಿಕ್‌ ಅವರನ್ನು ಶೂನ್ಯಕ್ಕೆ ವಿಕೆಟ್‌ ಕಿತ್ತ ಸೀಲ್ಸ್‌, ನಂತರ ಕ್ರಮವಾಗಿ ಮೊಹಮ್ಮದ್‌ ರಿಝ್ವಾನ್‌ ಹಾಗೂ ಬಾಬರ್‌ ಆಝಮ್‌ (9) ಅವರನ್ನು ಔಟ್‌ ಮಾಡಿದರು. ಆ ಮೂಲಕ ಕೇವಲ 24 ರನ್‌ಗಳಿಗೆ ಪಾಕಿಸ್ತಾನ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡಿತು.



49 ಎಸೆತಗಳಲ್ಲಿ 30 ರನ್‌ ಗಳಿಸಿ ಕೆಲಕಾಲ ವಿಂಡೀಸ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ ಸಲ್ಮಾನ್‌ ಅಘಾ ಅವರನ್ನು ಗುಡಕೇಶ್‌ ಮೋಟಿ ಅವರು ಔಟ್‌ ಮಾಡಿದರು. ಮೊಹಮ್ಮದ್‌ ನವಾಝ್‌ ಅವರು 23 ರನ್‌ ಗಳಿಸಿ ಕೊನೆಯವರೆಗೂ ಕ್ರೀಸ್‌ನಲ್ಲಿದ್ದರು. ಆದರೆ, ಮತ್ತೊಂದು ತುದಿಯಲ್ಲಿ ಪಾಕ್‌ ಬ್ಯಾಟ್ಸ್‌ಮನ್‌ ಪೆವಿಲಿಯನ್‌ಗೆ ಪೆರೆಡ್‌ ನಡೆಸಿದರು. ಅಂತಿಮವಾಗಿ ಪಾಕ್‌ ಸೋಲು ಒಪ್ಪಿಕೊಂಡಿತು. ಜೇಡನ್‌ ಸೀಲ್ಸ್‌ 6 ವಿಕೆಟ್‌ ಸಾಧನೆ ಮಾಡಿದರು.