ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಭಾರತವೇ ಆಳುತ್ತಿದೆ(India rule ICC) ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕ್ರಿಸ್ ಬ್ರಾಡ್(Chris Broad) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ದಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ, ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಭಾರತಕ್ಕೆ ವಿನಾಯಿತಿ ನೀಡುವಂತೆ ಅಧಿಕಾರದಲ್ಲಿರುವ ಕೆಲವರು ತಮ್ಮನ್ನು ಕೇಳಿಕೊಂಡಿದ್ದರು ಎಂದು ಬ್ರಾಡ್ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಕ್ರಿಕೆಟ್‌ನ ಅತ್ಯಂತ ಗೌರವಾನ್ವಿತ ಅಧಿಕಾರಿಗಳಲ್ಲಿ ಒಬ್ಬರಾದ ಬ್ರಾಡ್, 2024 ರಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದರು. ಆಗ ಐಸಿಸಿ ತಮಗೆ ಮುಂದುವರಿಯಲು ಅವಕಾಶ ನಿರಾಕರಿಸಿದೆ ಎಂದು ಬ್ರಾಡ್ ಆರೋಪಿಸಿದ್ದರು. ತಮ್ಮ ಇತ್ತೀಚಿನ ಸಂದರ್ಶನದಲ್ಲಿ, ತಂಡವು ನಿಗದಿತ ಸಮಯಕ್ಕಿಂತ 3-4 ಓವರ್‌ಗಳು ತಡವಾಗಿ ಬೌಲಿಂಗ್ ಮಾಡಿದರೂ ಭಾರತಕ್ಕೆ ಓವರ್-ರೇಟ್ ದಂಡವನ್ನು ನೀಡದಂತೆ ಒಮ್ಮೆ ಕೇಳಲಾಗಿತ್ತು ಎಂದು ಬ್ರಾಡ್ ಆರೋಪಿಸಿದ್ದಾರೆ.
"ಐಸಿಸಿಯಲ್ಲಿ ಬಹಳಷ್ಟು ರಾಜಕೀಯವಿದೆ. ಕ್ರಿಕೆಟ್ ಹಿನ್ನೆಲೆಯಿಂದ ಬಂದ ಕಾರಣ, ವಿನ್ಸ್ ವ್ಯಾನ್ ಡೆರ್ ಬಿಜ್ಲ್ (ಐಸಿಸಿ ಅಂಪೈರ್‌ಗಳ ವ್ಯವಸ್ಥಾಪಕ) ಅವರು ನಮಗೆ ಬೆಂಬಲ ನೀಡಿದ್ದರು ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಹೋದ ನಂತರ, ನಿರ್ವಹಣೆ ತುಂಬಾ ದುರ್ಬಲವಾಯಿತು. ಬಿಸಿಸಿಐ ಈಗ ಐಸಿಸಿಯನ್ನು ಹಲವು ವಿಧಗಳಲ್ಲಿ ನಡೆಸಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ.
"ಪಂದ್ಯದ ಕೊನೆಯಲ್ಲಿ ಭಾರತ ಮೂರು, ನಾಲ್ಕು ಓವರ್‌ಗಳು ಬಾಕಿ ಇದ್ದ ಕಾರಣ ದಂಡ ವಿಧಿಸಲಾಯಿತು. ನನಗೆ ಒಂದು ಫೋನ್ ಕರೆ ಬಂತು. ಮುಂದಿನ ಪಂದ್ಯದಲ್ಲೂ ಅದೇ ಆಯಿತು. ಆಗ ಸೌರವ್ ಗಂಗೂಲಿ ಯಾವುದೇ ಪ್ರಶ್ನೆ ಕೇಳಲಿಲ್ಲ. ಮತ್ತು ನಾನು ಫೋನ್ ಮಾಡಿ, 'ನಾನು ಈಗ ಏನು ಮಾಡಬೇಕೆಂದು ನೀವು ಬಯಸುತ್ತೀರಿ?' ಎಂದು ಕೇಳಿದ್ದೆ" ಎಂದು ಬ್ರಾಡ್ ಸಂದರ್ಶನದಲ್ಲಿ ಹೇಳಿದರು.
ಇದನ್ನೂ ಓದಿ IND vs ENG: ಐಸಿಸಿ ನಿಯಮ ಉಲ್ಲಂಘಿಸಿದ ಮೊಹಮ್ಮದ್ ಸಿರಾಜ್‌ಗೆ ದಂಡ ವಿಧಿಸಿದ ಐಸಿಸಿ!
2023 ರಲ್ಲಿ ಆಶಸ್ ಸಮಯದಲ್ಲಿ ಡೇವಿಡ್ ವಾರ್ನರ್ ಅವರ ಕುರಿತಾದ ಮೀಮ್ ಅನ್ನು ಹಂಚಿಕೊಂಡ ನಂತರ ಸ್ಟುವರ್ಟ್ ಬ್ರಾಡ್ ಅವರ ತಂದೆ ಕ್ರಿಸ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಖಂಡಿಸಿದೆ ಎಂದು ವರದಿಯಾಗಿದೆ. ಆದರೆ ಐಸಿಸಿ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಇಚ್ಛಿಸದಿರಲು ಆಶಸ್ ಘಟನೆಯೇ ಪ್ರಮುಖ ಕಾರಣವೇ ಎಂಬುದು ಎಂದಿಗೂ ದೃಢಪಟ್ಟಿಲ್ಲ ಎಂದರು.