ನವದೆಹಲಿ: ಆಗಸ್ಟ್ 2026 ರಲ್ಲಿ ನಡೆಯಲಿರುವ ಪ್ರತಿಷ್ಠಿತ ಬ್ಯಾಡ್ಮಿಂಟನ್(Badminton) ವಿಶ್ವ ಚಾಂಪಿಯನ್‌ಶಿಪ್‌ನ(Badminton World Championships 2026) ಆತಿಥೇಯ ನಗರವಾಗಿ ನವದೆಹಲಿಯನ್ನು ಆಯ್ಕೆ ಮಾಡಲಾಗಿದೆ ಎಂದು ಬಿಡಬ್ಲ್ಯೂಎಫ್ ಸೋಮವಾರ (ಸೆಪ್ಟೆಂಬರ್ 1, 2025) ಪ್ರಕಟಿಸಿದೆ. 17 ವರ್ಷಗಳ ನಂತರ ಭಾರತ ಎರಡನೇ ಬಾರಿಗೆ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಭಾರತ ಕೊನೆಯ ಬಾರಿಗೆ 2009ರಲ್ಲಿ ಈ ಟೂರ್ನಿಗೆ ಆತಿಥ್ಯ ವಹಿಸಿತ್ತು. ಅಂದು ಪಂದ್ಯಾವಳಿ ಹೈದರಾಬಾದ್‌ನಲ್ಲಿ ನಡೆದಿತ್ತು.
ಪ್ಯಾರಿಸ್‌ನಲ್ಲಿ ನಡೆದ 2025 ರ ಚಾಂಪಿಯನ್‌ಶಿಪ್‌ಗಳ ಸಮಾರೋಪ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಹಸ್ತಾಂತರದ ಸಮಯದಲ್ಲಿ, ಬಿಡಬ್ಲ್ಯೂಎಫ್ ಅಧ್ಯಕ್ಷ ಖುನ್ಯಿಂಗ್ ಪತಾಮಾ ಲೀಸ್ವಡ್ಟ್ರಾಕುಲ್, ಫೆಡರೇಶನ್ ಫ್ರಾಂಕೈಸ್ ಡಿ ಬ್ಯಾಡ್ಮಿಂಟನ್ ಮುಖ್ಯಸ್ಥ ಫ್ರಾಂಕ್ ಲಾರೆಂಟ್ ಮತ್ತು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಉಪಸ್ಥಿತರಿದ್ದರು. ಪ್ಯಾರಿಸ್‌ನಲ್ಲಿ ಪ್ರದರ್ಶಿಸಲಾದ "ಶ್ರೇಷ್ಠತೆ ಮತ್ತು ಭವ್ಯತೆ"ಯನ್ನು ಭಾರತ ಎತ್ತಿಹಿಡಿಯುತ್ತದೆ ಎಂದು ಮಿಶ್ರಾ ಭರವಸೆ ನೀಡಿದರು.
"ಪ್ಯಾರಿಸ್ ಪ್ರದರ್ಶಿಸಿದ ಶ್ರೇಷ್ಠತೆ ಮತ್ತು ಭವ್ಯತೆಯ ಅದೇ ಮಾನದಂಡಗಳನ್ನು ಎತ್ತಿಹಿಡಿಯಲು ಮತ್ತು ಮುಂದುವರಿಸಲು ಭಾರತವು ಶೇಕಡಾ 100ರಷ್ಟು ಸಿದ್ಧವಾಗಿದೆ. ಬ್ಯಾಡ್ಮಿಂಟನ್ ಕುಟುಂಬವನ್ನು ದೆಹಲಿಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಮಿಶ್ರಾ ಬಿಎಐ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಪ್ಯಾರಿಸ್‌ನಲ್ಲಿ ನಡೆದ 2025 ರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ, ಭಾರತ ಒಂದು ಕಂಚಿನ ಪದಕ ಮಾತ್ರ ಜಯಿಸಿತ್ತು. ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಈ ಪದಕ ಜಯಿಸಿದ್ದರು.
ಇದನ್ನೂ ಓದಿ BWF World Championships: ಕ್ವಾರ್ಟರ್‌ನಲ್ಲಿ ಸಿಂಧುಗೆ ಸೋಲಿನ ಆಘಾತ