BWF World Championships: ಕ್ವಾರ್ಟರ್‌ನಲ್ಲಿ ಸಿಂಧುಗೆ ಸೋಲಿನ ಆಘಾತ
ಗುರುವಾರ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ವಿಶ್ವದ 5ನೇ ಶ್ರೇಯಾಂಕದ ಜೋಡಿಯಾದ ಟಾಂಗ್ ಚುನ್ ಮ್ಯಾನ್ ಮತ್ತು ತ್ಸೆ ಯಿಂಗ್ ಸೂಟ್ ಅವರನ್ನು ಸೋಲಿಸಿ ಭಾರತೀಯ ಜೋಡಿ ಆತ್ಮವಿಶ್ವಾಸದಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಆದರೆ ಇಲ್ಲಿ ಇದೇ ಲಯ ಮುಂದುವರಿಸುವಲ್ಲಿ ವಿಫಲವಾಯಿತು.

-

ಪ್ಯಾರಿಸ್: ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ(BWF World Championships) ಭಾರತಕ್ಕೆ ಶುಕ್ರವಾರ ನಿರಾಸೆ ಉಂಟಾಯಿತು. ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವಳಿ ಒಲಿಂಪಿಕ್ ವಿಜೇತೆ ಪಿ.ವಿ ಸಿಂಧು(PV Sindhu) ಸೋಲು ಕಂಡರೆ, ಮಿಶ್ರ ಡಬಲ್ಸ್‌ನಲ್ಲಿ ಧ್ರುವ್ ಕಪಿಲಾ(Dhruv Kapila) ಮತ್ತು ತನಿಶಾ ಕ್ರಾಸ್ಟೊ(Tanisha Crasto) ಜೋಡಿ ಸೋಲು ಕಾಣುವ ಮೂಲಕ ಭಾರತಕ್ಕೆ ಮೊದಲ ಮಿಶ್ರ ಡಬಲ್ಸ್ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿತು.
ಕಳೆದ ಫ್ರೀ ಕ್ವಾರ್ಟರ್‌ನಲ್ಲಿ ವಿಶ್ವದ 2ನೇ ಶ್ರೇಯಾಂಕದ ವಾಂಗ್ ಝಿ ಯಿ ಅವರನ್ನು ನೇರ ಸೇಟ್‌ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೇರಿದ್ದ 30ರ ಹರೆಯದ ಸಿಂಧು ಮೇಲೆ ಪದಕ ಭರವಸೆ ಇರಿಸಲಾಗಿತ್ತು. ಆದರೆ ಶುಕ್ರವಾರದ ನಡೆದ ಪಂದ್ಯದಲ್ಲಿ ಸಿಂಧು, 9ನೇ ಶ್ರೇಯಾಂಕಿತೆ ಇಂಡೋನೇಷ್ಯಾದ ಪುಟ್ರಿ ಕುಸುಮಾ ವರ್ದಾನಿ ಎದುರು 14-21, 21-13, 16-21 ಸೋಲು ಕಂಡರು.
ಮೊದಲ ಗೇಮ್‌ನಲ್ಲಿ ಸೋಲು ಕಂಡ ಸಿಂಧು, ದ್ವಿತೀಯ ಗೇಮ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದರು. ಮೂರನೇ ಹಾಗೂ ಅಂತಿಮ ಗೇಮ್‌ನ ಆರಂಭಿಕ ಹಂತದಲ್ಲಿಯೂ ಸಿಂಧು ಮುನ್ನಡೆ ಸಾಧಿಸಿದರು. ಈ ವೇಳೆ ಅವರು ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಊಹಿಸಲಾಗಿತ್ತು. ಆದರೆ ಹಿನ್ನಡೆ ಬಳಿಕ ಬಿರುಸಿನ ಸರ್ವ್ ಮೂಲಕ ತಿರುಗಿ ಬಿದ್ದ ವರ್ದಾನಿ ಸತತವಾಗಿ ಅಂಕ ಗಳಿಸುವ ಮೂಲಕ ಪಂದ್ಯವನ್ನು ಗೆದ್ದರು. ವರ್ದಾನಿ ಆರ್ಭಟದ ಮುಂದೆ ಸಿಂಧು ಸಂಪೂರ್ಣವಾಗಿ ಮಂಕಾದರು. 2021ರ ನಂತರ ಸಿಂಧು ಈ ಕೂಟದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಐತಿಹಾಸಿಕ ಪದಕ ಮಿಸ್
ಮಿಶ್ರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿಳಿದಿದ್ದ ಧ್ರುವ್ ಕಪಿಲಾ ಮತ್ತು ತನಿಶಾ ವಿಶ್ವದ 4ನೇ ಶ್ರೇಯಾಂಕಿತ ಮಲೇಷ್ಯಾದ ಜೋಡಿ ಚೆನ್ ಟಾಂಗ್ ಜೀ ಮತ್ತು ತೋ ಈವೀ ವಿರುದ್ಧ 37 ನಿಮಿಷಗಳ ಹೋರಾಟದಲ್ಲಿ 15-21, 13-21 ಅಂತರದಲ್ಲಿ ಸೋಲು ಕಂಡರು. ಇದರಿಂದಾಗಿ ಕನಿಷ್ಠ ಕಂಚಿನ ಪದಕವನ್ನು ಗೆಲ್ಲುವ ಅವಕಾಶ ಕೂಡ ಕೈತಪ್ಪಿತು. ಮಲೇಷ್ಯಾದ ಜೋಡಿ ಸೆಮಿಫೈನಲ್‌ಗೆ ಮುನ್ನಡೆಯುವ ಮೂಲಕ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿತು.
ಗುರುವಾರ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ವಿಶ್ವದ 5ನೇ ಶ್ರೇಯಾಂಕದ ಜೋಡಿಯಾದ ಟಾಂಗ್ ಚುನ್ ಮ್ಯಾನ್ ಮತ್ತು ತ್ಸೆ ಯಿಂಗ್ ಸೂಟ್ ಅವರನ್ನು ಸೋಲಿಸಿ ಭಾರತೀಯ ಜೋಡಿ ಆತ್ಮವಿಶ್ವಾಸದಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಆದರೆ ಇಲ್ಲಿ ಇದೇ ಲಯ ಮುಂದುವರಿಸುವಲ್ಲಿ ವಿಫಲವಾಯಿತು.
ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಕಣಕ್ಕೆ!