ನವದೆಹಲಿ: ಬುಧವಾರದ ರೋಚಕ ಐಪಿಎಲ್(IPl 2025) ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಈ ಗೆಲುವಿನೊಂದಿಗೆ ಐಪಿಎಲ್‌ನಲ್ಲಿ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ಸೂಪರ್ ಓವರ್ ಗೆಲುವು ಸಾಧಿಸಿದ ಮೊದಲ ತಂಡ ಎಂಬ ದಾಖಲೆ ನಿರ್ಮಿಸಿದೆ. ಇದು ಡೆಲ್ಲಿಯ ನಾಲ್ಕನೇ ಸೂಪರ್ ಓವರ್ ಗೆಲುವಾಗಿದೆ. ಐಪಿಎಲ್ ಇತಿಹಾಸದಲ್ಲಿ ಐದು ಟೈ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ದಾಖಲೆಯೂ ಕ್ಯಾಪಿಟಲ್ಸ್ ಹೆಸರಿಗೆ ಸೇರ್ಪಡೆಯಾಗಿದೆ. ಮೂರು ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್‌ಗೆ 188 ರನ್ ಬಾರಿಸಿದರೆ, ರಾಜಸ್ಥಾನ್ ಆರಂಭದಿಂದಲೇ ಅಬ್ಬರಿಸುತ್ತ ಹೋದರೂ ಅಂತಿಮವಾಗಿ 4 ವಿಕೆಟಿಗೆ 188 ರನ್ ಗಳಿಸಿ ಪಂದ್ಯ ಟೈ ಗೊಂಡಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ 11 ರನ್ಗಳಿಸಿತು. 12 ರನ್ಗಳ ಸೂಪರ್ ಓವರ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 4 ಎಸೆತಗಳಲ್ಲಿ 13 ರನ್ಗಳಿಸಿ ಗೆಲುವು ಸಾಧಿಸಿತು. ಡೆಲ್ಲಿ ಪರ ರಾಹುಲ್ 7, ಟ್ರಿಸ್ಟಾನ್ ಸ್ಟಬ್ಸ್ 6 ರನ್ಗಳಿಸಿದರು.
ರಾಜಸ್ಥಾನ್ ಪರ ಅತ್ಯುತ್ತಮ ಬ್ಯಾಟ್ ಮಾಡಿದ ಯಶಸ್ವಿ ಜೈಸ್ವಾಲ್ 37 ಎಸೆತಗಳಲ್ಲಿ 51 ರನ್ ಹಾಗೂ ನಿತೀಶ್ ರಾಣಾ 28 ಎಸೆತಗಳಲ್ಲಿ 51 ರನ್ ಸಿಡಿಸಿದರು. ಇವರಿಬ್ಬರ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್ ತಂಡ ಸುಲಭವಾಗಿ ಗೆಲ್ಲುವ ಹಾದಿಯಲ್ಲಿತ್ತು. ಆದರೆ ಉಭಯ ಆಟಗಾರರ ವಿಕೆಟ್ ಪತನದ ಬಳಿಕ ತಂಡಕ್ಕೆ ತಂಡ ಹಿನ್ನಡೆ ಅನುಭವಿಸಿತು.
ಇದನ್ನೂ ಓದಿ IPL 2025: ಐಪಿಎಲ್ ಮೇಲೆ ಮತ್ತೆ ಫಿಕ್ಸಿಂಗ್ ಕರಿನೆರಳು; ಎಚ್ಚರಿಕೆ ನೀಡಿದ ಬಿಸಿಸಿಐ
ಅಂತಿಮ ಎರಡು ಓವರ್‌ಗಳಲ್ಲಿ ರಾಜಸ್ಥಾನ್ ಗೆಲುವಿಗೆ 23 ರನ್ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಧ್ರುವ್ ಜುರೆಲ್ ಹಾಗೂ ಶಿಮ್ರಾನ್ ಹೆಟ್‌ಮೈರ್ ಸೇರಿ 14 ರನ್ ಗಳಿಸಿದರು. ಅಂತಿಮ ಓವರ್‌ನಲ್ಲಿ 9 ರನ್ ಅಗತ್ಯವಿತ್ತು. ಈ ವೇಳೆ ಮಿಚೆಲ್ ಸ್ಟಾರ್ಕ್ 8 ರನ್ ನೀಡಿ ಧ್ರುವ್ ಜುರೆಲ್ ಅವರನ್ನು ಔಟ್ ಮಾಡಿದರು. ರಾಜಸ್ಥಾನ್ 20 ಓವರ್‌ಗಳಿಗೆ 4 ವಿಕೆಟ್ ಕಳೆದುಕೊಂಡು 188 ರನ್ ಗಳಿಸುವ ಮೂಲಕ ಪಂದ್ಯವನ್ನು ಟೈ ಮಾಡಿಕೊಂಡಿತು.
ಅತ್ಯಧಿಕ ಸೂಪರ್ ಓವರ್ ಗೆಲುವು ಸಾಧಿಸಿದ ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್- 4
ಪಂಜಾಬ್ ಕಿಂಗ್ಸ್- 3
ಮುಂಬೈ ಇಂಡಿಯನ್ಸ್-2
ರಾಜಸ್ಥಾನ್ ರಾಯಲ್ಸ್-2
ಆರ್‌ಸಿಬಿ- 2