ಚಾಂಗ್‌ಝೌ (ಚೀನಾ): ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ(Satwik-Chirag) ಅವರು BWF ವಿಶ್ವ ಚಾಂಪಿಯನ್‌ಶಿಪ್(BWF World Championships) ಕ್ವಾರ್ಟರ್ ಫೈನಲ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕವೊಂದನ್ನು ಖಚಿತಪಡಿಸಿದ್ದಾರೆ.
ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಸಾತ್ವಿಕ್-ಚಿರಾಗ್ ಜೋಡಿ, ಎರಡನೇ ಶ್ರೇಯಾಂಕದ, ಮಲೇಷ್ಯಾದ ಆರನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ಅವರನ್ನು 21-12, 21-19 ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಉತ್ತಮ ಗುಣಮಟ್ಟದ ಪ್ರದರ್ಶನ ನೀಡಿ 2025 ರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು. ಈ ಪಂದ್ಯ ಕೇವಲ 43 ನಿಮಿಷಗಳಲ್ಲಿ ಮುಕ್ತಾಯಕಂಡಿತು.
ಆರಂಭದಿಂದಲೇ ಸಾತ್ವಿಕ್ ಮತ್ತು ಚಿರಾಗ್ ಆಕ್ರಮಣಕಾರಿ ಆಟವಾಡುವ ಮೂಲಕ ಪಂದ್ಯವನ್ನು ಗೆದ್ದು ಹಳೆಯ ಸೇಡೊಂದನ್ನು ತೀರಿಸಿಕೊಂಡರು. ಒಂದು ವರ್ಷದ ಹಿಂದೆ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತೀಯ ಜೋಡಿಯ ಚೊಚ್ಚಲ ಪದಕವನ್ನು ಇದೇ ಮಲೇಷ್ಯಾದ ಜೋಡಿ ಭಗ್ನಗೊಳಿಸಿತ್ತು. ಈ ಸೇಡನ್ನು ಭಾರತೀಯ ಜೋಡಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತೀರಿಸಿಕೊಂಡಿದೆ.
ಇದು ಸಾತ್ವಿಕ್ ಮತ್ತು ಚಿರಾಗ್ ಅವರ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪದಕವಾಗಿದ್ದು, 2022 ರಲ್ಲಿ ಅವರು ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕ ಜಯಿಸಿದ್ದರು. ಈ ಬಾರಿ ಚಿನ್ನ ಗೆಲ್ಲಲಿ ಎಂಬುದು ಭಾರತೀಯ ಅಭಿಮಾನಿಗಳ ಹಾರೈಕೆ. ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು 11ನೇ ಶ್ರೇಯಾಂಕದ ಚೀನಾದ ಚೆನ್ ಬೊ ಯಾಂಗ್ ಮತ್ತು ಲಿಯು ಯಿ ಜೋಡಿಯನ್ನು ಎದುರಿಸಲಿದೆ.
ಈ ಎರಡೂ ಜೋಡಿಗಳು ಕೊನೆಯ ಬಾರಿಗೆ 2024 ರ ಥೈಲ್ಯಾಂಡ್ ಓಪನ್‌ನಲ್ಲಿ ಭೇಟಿಯಾದ್ದವು. ಅಲ್ಲಿ ಭಾರತೀಯ ಜೋಡಿ ನೇರ ಗೇಮ್‌ಗಳ ಗೆಲುವು ಸಾಧಿಸಿದ್ದರು. ಹೀಗಾಗಿ ಪಂದ್ಯದಲ್ಲಿ ಭಾರತೀಯ ಜೋಡಿ ನೆಚ್ಚಿನದಾಗಿ ಕಂಡುಬಂದಿದೆ.
ಇದನ್ನೂ ಓದಿ BWF World Championships: ಕ್ವಾರ್ಟರ್‌ನಲ್ಲಿ ಸಿಂಧುಗೆ ಸೋಲಿನ ಆಘಾತ