ಜನನ ಪ್ರಮಾಣಪತ್ರ ತಿರುಚಿದ ಪ್ರಕರಣ; ಲಕ್ಷ್ಯ ಸೇನ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
"ಮೇಲ್ಮನವಿ ಸಲ್ಲಿಸಿದವರು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿದ್ದು, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಬಿಡಬ್ಲ್ಯೂಎಫ್ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪದಕಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ" ಎಂದು ನ್ಯಾಯಾಲಯ ಹೇಳಿದೆ.


ನವದೆಹಲಿ: ಜನನ ಪ್ರಮಾಣಪತ್ರ ನಕಲಿ ಪ್ರಕರಣದಲ್ಲಿ(birth certificate forgery) ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್(Lakshya Sen) ಹಾಗೂ ಅವರ ಕುಟುಂಬ ಸದಸ್ಯರು ಮತ್ತು ತರಬೇತುದಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಸುಪ್ರೀಂ ಕೋರ್ಟ್(Supreme Court) ರದ್ದುಗೊಳಿಸಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೂರುದಾರ ಎಂ.ಜಿ. ನಾಗರಾಜ್ ಅವರು ವಂಚನೆ ಕೃತ್ಯದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ್ ಕುಮಾರ್ ಅವರ ಪೀಠ, ಸೇನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಮುಂದುವರಿಸುವುದು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಹೇಳಿದೆ. ತನಿಖೆಯನ್ನು ಪುನಃ ತೆರೆಯಲು ಅರ್ಹವಾದ ಯಾವುದೇ ಹೊಸ ಪುರಾವೆಗಳನ್ನು ತಳ್ಳಿಹಾಕಿದ ಕಾರಣ, ಸಮರ್ಥ ಅಧಿಕಾರಿಗಳಿಂದ ಪರಿಶೀಲಿಸಲ್ಪಟ್ಟ ಮತ್ತು ನಿರಾಕರಿಸಲ್ಪಟ್ಟ ಆರೋಪಗಳನ್ನೇ ಈಗ ಪುನರುಜ್ಜೀವನಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ಪಂದ್ಯಗಳಲ್ಲಿ ಭಾಗವಹಿಸಲು ಮತ್ತು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ ಸೇನ್ ಸಹೋದರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅದಕ್ಕೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಹೀಗಾಗಿ ಅವರು ಸುಪ್ರೀಂ ಮೆಟ್ಟಿಲೇರಿದ್ದರು.
"ಮೇಲ್ಮನವಿ ಸಲ್ಲಿಸಿದವರು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿದ್ದು, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಬಿಡಬ್ಲ್ಯೂಎಫ್ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪದಕಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ" ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ IND vs ENG: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ತಮ್ಮ ನೆಚ್ಚಿನ ಇನಿಂಗ್ಸ್ ಹೆಸರಿಸಿದ ಶುಭಮನ್ ಗಿಲ್!
"ಕಳಂಕವಿಲ್ಲದ ದಾಖಲೆಯನ್ನು ಕಾಯ್ದುಕೊಂಡಿರುವ ಮತ್ತು ನಿರಂತರ ಶ್ರೇಷ್ಠತೆಯ ಮೂಲಕ ದೇಶಕ್ಕೆ ಗೌರವವನ್ನು ತಂದಿರುವ ಅಂತಹ ವ್ಯಕ್ತಿಗಳನ್ನು ಪ್ರಾಥಮಿಕ ಸಾಕ್ಷ್ಯಗಳ ಅನುಪಸ್ಥಿತಿಯಲ್ಲಿ ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವುದು ನ್ಯಾಯದ ಗುರಿಗಳನ್ನು ಪೂರೈಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕ್ರಿಮಿನಲ್ ಕಾನೂನನ್ನು ಅನ್ವಯಿಸುವುದು ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಇದನ್ನು ಈ ನ್ಯಾಯಾಲಯವು ಸಹಿಸುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.