ದುಬೈ: ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಸಾಧಿಸಿದ ನಂತರ ಮಹಿಳಾ ಏಕದಿನ(Women’s ODI ranking) ಕ್ರಿಕೆಟ್‌ನಲ್ಲಿ ನಂ.1 ಬ್ಯಾಟ್ಸ್‌ಮನ್ ಆಗಿ ತಮ್ಮ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ. ನೂತನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.
29 ವರ್ಷದ ಎಡಗೈ ಬ್ಯಾಟ್ಸ್‌ಮನ್ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ 109 ಮತ್ತು ಬಾಂಗ್ಲಾದೇಶ ವಿರುದ್ಧ ಔಟಾಗದೆ 34 ರನ್ ಗಳಿಸಿ 828 ರೇಟಿಂಗ್‌ಗೆ ಏರಿದರು. ಇಂಗ್ಲೆಂಡ್ ವಿರುದ್ಧ ಅಜೇಯ ಶತಕದ ನಂತರ ಆರು ಸ್ಥಾನಗಳ ಜಿಗಿತ ಕಂಡ ಆಸ್ಟ್ರೇಲಿಯಾದ ಆಶ್ ಗಾರ್ಡ್ನರ್ (731) ಎರಡನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಡ್(716) ಎರಡು ಸ್ಥಾನಗಳ ಜಿಗಿತದೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ.
ಇಂಗ್ಲೆಂಡ್ ನಾಯಕಿ ನಾಟ್ ಶಿವರ್ ಬ್ರಂಟ್ ಮತ್ತು ಆಸ್ಟ್ರೇಲಿಯಾದ ಬೆಥ್ ಮೂನಿ ತಲಾ ಎರಡು ಸ್ಥಾನ ಕುಸಿತ ಕಂಡು ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಅಲಾನಾ ಕಿಂಗ್ ಅವರು ಐದು ಸ್ಥಾನಗಳ ಪ್ರಗತಿ ಸಾಧಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ಅವರು ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಕಿತ್ತು ಮಿಂಚಿದ್ದರು. ಈ ಸಾಧನೆ ಅವರ ಶ್ರೇಯಾಂಕ ಪ್ರಗತಿಗೆ ಕಾರಣವಾಯಿತು. ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್(747) ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಭಾರತದ ದೀಪ್ತಿ ಶರ್ಮ(655) 5ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ INDW vs NZW: 14ನೇ ಒಡಿಐ ಶತಕ ಸಿಡಿಸಿ ಮಹತ್ವದ ದಾಖಲೆ ಬರೆದ ಸ್ಮೃತಿ ಮಂಧಾನಾ!
ಆಲ್‌ರೌಂಡರ್‌ಗಳ ಯಾದಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಆಲ್‌ರೌಂಡರ್ ಆಶ್ ಗಾರ್ಡ್ನರ್ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಮರಿಜಾನೆ ಕಾಪ್ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿಂಡೀಸ್‌ನ ಹೀಲಿ ಮ್ಯಾಥ್ಯೂಸ್ ಮೂರನೇ, ಅನ್ನಾಬೆಲ್ ಸದರ್ಲ್ಯಾಂಡ್ ನಾಲ್ಕನೇ ಸ್ಥಾನಿಯಾಗಿದ್ದಾರೆ.