ನವದೆಹಲಿ: ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಲಿರುವ 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಸೋಮವಾರ ಪ್ರಕಟಿಸಿದೆ. ಇದರನ್ವಯ ಚಾಂಪಿಯನ್ ತಂಡ 39.5 ಕೋಟಿ ರೂ. (4.48 ಮಿಲಿಯನ್) ಬಹುಮಾನ ಪಡೆಯಲಿದ್ದರೆ, ರನ್ನರ್ಅಪ್ ತಂಡ 19.77 ಕೋಟಿ ರೂ. (3.5 ಮಿಲಿಯನ್) ಗಳಿಸಲಿದೆ. 2023ರ ಪುರುಷರ ಏಕದಿನ ವಿಶ್ವಕಪ್‌ನಿಂದಲೂ ಅಧಿಕ ಮೊತ್ತವಾಗಿದೆ. ಒಟ್ಟಾರೆ 122.5 ಕೋಟಿ ರೂ. ಬಹುಮಾನ ಮೊತ್ತ ಹಂಚಿಕೆಯಾಗಲಿದೆ. ಇದು ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ ದಾಖಲೆಯ ಪ್ರಶಸ್ತಿ ಮೊತ್ತವಾಗಿದೆ.
ಸೆಮಿಫೈನಲ್ನಲ್ಲಿ ಸೋತ 2 ತಂಡಗಳು ತಲಾ 9.88 ಕೋಟಿ ರೂ. ಪಡೆಯಲಿವೆ. 5 ಮತ್ತು 6ನೇ ಸ್ಥಾನ ಪಡೆದ ತಂಡಕ್ಕೆ 6 ಕೋಟಿ ರೂ., 7 ಮತ್ತು 8ನೇ ಸ್ಥಾನ ಪಡೆದ ತಂಡಕ್ಕೆ 2.5 ಕೋಟಿ ರೂ. ಸಿಗಲಿದೆ. ಯಾವುದೇ ತಂಡ ಪಂದ್ಯ ಗೆದ್ದರೂ ಅಥವಾ ಗೆಲ್ಲದಿದ್ದರೂ, ಪ್ರತಿ ತಂಡಕ್ಕೂ ಕನಿಷ್ಠ 2.5 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಲೀಗ್ ಹಂತದ ಪ್ರತಿ ಪಂದ್ಯದಲ್ಲಿ ಗೆಲುವು ಕಾಣುವ ತಂಡ ತಲಾ 34 ಸಾವಿರ ಡಾಲರ್ ಸಿಗಲಿದೆ.
ವಿಶ್ವಕಪ್‌ಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ನೀಡಲಿವೆ. 8 ತಂಡಗಳು ಸೆಣಸಲಿರುವ ವಿಶ್ವಕಪ್‌ನ ಬಹುತೇಕ ಪಂದ್ಯಗಳು ಭಾರತದ ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಪಾಕಿಸ್ತಾನದ ಪಂದ್ಯಗಳು ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗುತ್ತಿದೆ.
"ಈ ಘೋಷಣೆಯು ಮಹಿಳಾ ಕ್ರಿಕೆಟ್‌ನ ಪ್ರಯಾಣದಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲನ್ನು ಸೂಚಿಸುತ್ತದೆ. ಬಹುಮಾನದ ಮೊತ್ತದಲ್ಲಿನ ನಾಲ್ಕು ಪಟ್ಟು ಹೆಚ್ಚಳವು ಮಹಿಳಾ ಕ್ರಿಕೆಟ್‌ಗೆ ಒಂದು ಹೆಗ್ಗುರುತಿನ ಕ್ಷಣವಾಗಿದೆ ಮತ್ತು ಅದರ ದೀರ್ಘಕಾಲೀನ ಬೆಳವಣಿಗೆಗೆ ನಮ್ಮ ಸ್ಪಷ್ಟ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ ಮಹಿಳಾ ವಿಶ್ವಕಪ್: ತರಬೇತಿ ಶಿಬಿರಕ್ಕಾಗಿ 20 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ