ಮುಂಬೈ, ನ. 21: ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ (Yuzvendra Chahal) ರಾಜಕೀಯ ಪ್ರವೇಶಿಸುವ ಮೂಲಕ ತಮ್ಮ 2ನೇ ಇನ್ನಿಂಗ್ಸ್ ಆರಂಭಿಸಿದ್ದು, ಅಧಿಕೃತವಾಗಿ ಬಿಜೆಪಿಗೆ ಸೇರಿದ್ದಾರೆ. ಪಕ್ಷದ ಇತರ ಹಿಂದುಳಿದ ವರ್ಗಗಳ (OBC) ವಿಭಾಗವಾದ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಗೆ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಶನಿವಾರ (ನವೆಂಬರ್ 21) ನೇಮಿಸಲಾಗಿದೆ. "ನನ್ನನ್ನು ಬಿಜೆಪಿ ಕುಟುಂಬಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮರ್ ಪಾಲ್ ಮೌರ್ಯ ಅವರಿಗೆ ಧನ್ಯವಾದಗಳು" ಎಂದು ಚಹಲ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಲ್ ಈ ಹಿಂದೆ ರಾಜ್ಯಸಭಾ ಸಂಸದ ಮೌರ್ಯ ಅವರನ್ನು ಭೇಟಿಯಾಗಿದ್ದರು. ಚಹಲ್ ದೆಹಲಿಯನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ. ಇತರ ಇಬ್ಬರು ವಿಶೇಷ ಆಹ್ವಾನಿತರಲ್ಲಿ ಒಡಿಶಾದ ಪ್ರೊಫೆಸರ್ ಅದ್ವೈತ್ ಚರಣ್ ಗಣನಾಯಕ್ ಮತ್ತು ಉತ್ತರ ಪ್ರದೇಶದ ವಕೀಲೆ ಸೀಮಾ ಸಮೃದ್ಧಿ ಕುಶ್ವಾಹ ಸೇರಿದ್ದಾರೆ.
ಯುಜ್ವೇಂದ್ರ ಚಹಲ್ ಅವರ ಎಕ್ಸ್ ಪೋಸ್ಟ್:
ಇದರ ಜತೆಗೆ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಗೆ 37 ಸದಸ್ಯರನ್ನು ಹೆಸರಿಸಿದೆ ಹಾಗೂ 7 ರಾಷ್ಟ್ರೀಯ ಉಪಾಧ್ಯಕ್ಷರು, ಮೂವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು 7 ರಾಷ್ಟ್ರೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅನುಮೋದಿಸಿದ ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಪಕ್ಷ ತಿಳಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ನೇಮಕಾತಿಗಳನ್ನು ಮಾಡಲಾಗಿದೆ.
ʻವಿಚ್ಛೇದನದ ಬಳಿಕ ಪ್ಯಾನಿಕ್ ಅಟ್ಯಾಕ್ ಆಗಿತ್ತುʼ: ಯುಜ್ವೇಂದ್ರ ಚಹಲ್ ಶಾಕಿಂಗ್ ಹೇಳಿಕೆ!
ಚಹಲ್ ಕ್ರಿಕೆಟ್ ಹಿನ್ನೆಲೆ
ಹರಿಯಾಣದಲ್ಲಿ 1990ರಲ್ಲಿ ಜನಿಸಿದ ಚಹಲ್ 2016ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಅವರು 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್‌ಗಳನ್ನು ಹಾಗೂ 80 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ 25 ರನ್‌ಗಳಿಗೆ 6 ವಿಕೆಟ್ ಕಬಳಿಸಿ ಗಮನ ಸೆಳೆದರು. ಜತೆಗೆ ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2019ರ ಏಕದಿನ ವಿಶ್ವಕಪ್‌ನಲ್ಲಿ 8 ಪಂದ್ಯಗಳಲ್ಲಿ 12 ವಿಕೆಟ್ ಪಡೆದರು. ಅಲ್ಲದೆ 2024ರ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದಲ್ಲಿ ಇದ್ದರು. ಚಹಲ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಪರ ಆಡಿದ್ದಾರೆ. 2023ರಲ್ಲಿ ಅವರು ಡ್ವೇಯ್ನ್ ಬ್ರಾವೋ ಅವರನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 2024ರಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಕೆಟ್‌ನಲ್ಲಿ ಸಿಕ್ಕ ಯಶಸ್ಸು ಅವರಿಗೆ ರಾಜಕೀಯದಲ್ಲೂ ಸಿಗುತ್ತ ಎನ್ನುವುದನು ಕಾದು ನೋಡಬೇಕಿದೆ.