ಬೆಂಗಳೂರು, ಮಾ. 26: ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ʼʼವಿಪಕ್ಷ ನಾಯಕರು, ಮಾಧ್ಯಮದವರು ಬೇಕಾದಷ್ಟು ಬಾರಿ ನನ್ನನ್ನು ಟೀಕಿಸಿದ್ದಾರೆ. ನನ್ನ ಮನೆ ಮೇಲೆ ರೇಡ್ ಆದಾಗ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲೂ ನನ್ನನ್ನು ಮಾತಿನ ಮೂಲಕ ಚಚ್ಚಿದ್ದಾರೆ. ಆದರೆ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆʼʼ ಎಂದು ಹೇಳಿದರು. ʼʼಬೆಂಗಳೂರಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ತುಂಬಾ ಆಸಕ್ತಿಯಿಂದ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಹಿಂದೆ ನಾನು ಇಂಧನ ಸಚಿವನಾಗಿದ್ದೆ. ನನಗೆ ಆ ಜವಾಬ್ದಾರಿ ಸಾಕಷ್ಟು ತೃಪ್ತಿ ನೀಡಿದೆʼʼ ಎಂದರು.