ಹಾವೇರಿ, ಜೂ. 4: ಹಾವೇರಿಯಲ್ಲಿ ಉಚಿತ ಸೋಯಾಬಿನ್ ಡೆಮೋ ಬಿತ್ತನೆ ಬೀಜ ವಿತರಣೆಗೆ ಆಗ್ರಹಿಸಿ, ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಹನುಮಂತಪ್ಪ ಮಾತನಾಡಿ, ʼʼಗೋದಾಮಿನಲ್ಲಿ ಬಿತ್ತನೆ ಬೀಜ ಸಂಗ್ರಹವಿದೆ. ಆದರೆ ಬೀಜ ಖಾಲಿಯಾಗಿದೆ ಎಂದು ಹೇಳುತ್ತಿದ್ದಾರೆ. ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ನೀಡಿದ್ದೇವೆ. ಆದರೂ ಬೀಜ ಸ್ಟಾಕ್ ಇಲ್ಲ ಎಂದು ಹೇಳುತ್ತಿದ್ದಾರೆʼʼ ಎಂದು ಆರೋಪಿಸಿದರು. ಮತ್ತೋರ್ವ ರೈತ ಮಾತನಾಡಿ, ʼʼಉಚಿತ ಬಿತ್ತನೆ ಬೀಜ ಪಡೆಯಲು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೇವೆ. ಆದರೆ ಗೋದಾಮಿನಲ್ಲಿ ಸ್ಟಾಕ್ ಇದ್ದರೂ ನೀಡುತ್ತಿಲ್ಲ. ಕೂಡಲೇ ವಿತರಣೆಗೆ ಮುಂದಾಗಬೇಕುʼʼ ಎಂದು ಆಗ್ರಹಿಸಿದ್ದಾರೆ.