ಇಟಾನಗರ್, ಜ. 17: ಅರುಣಾಚಲ ಪ್ರದೇಶಕ್ಕೆ ತೆರಳಿದ ಇಬ್ಬರು ಕೇರಳ ಮೂಲದ ಪ್ರವಾಸಿಗರು ಹೆಪ್ಪುಗಟ್ಟಿದ ಸರೋವರದಲ್ಲಿ ಮುಳುಗಿದ್ದಾರೆ. ಮೂಲಗಳ ಪ್ರಕಾರ ಇಬ್ಬರೂ ಸಾವನ್ನಪ್ಪಿದ್ದು, ಸದ್ಯ 1 ಮೃತದೇಹ ಲಭ್ಯವಾಗಿದೆ. ಮತ್ತೊಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ತವಾಂಗ್ ಜಿಲ್ಲೆಯ ಸೆಲಾ ಸರೋವರದಲ್ಲಿ (Sela Lake) ಈ ಘಟನೆ ನಡೆದಿದೆ. ಸದ್ಯ ಪ್ರವಾಸಿಗರು ಸರೋವರದಲ್ಲಿ ಮುಳುಗುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ರಕ್ತ ಹೆಪ್ಪುಗಟ್ಟಿಸುವ ದೃಶ್ಯ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಸಂತ್ರಸ್ತರನ್ನು ಕೇರಳದ ದಿನು (26) ಮತ್ತು ಮಹಾದೇವ್ (24) ಎಂದು ಗುರುತಿಸಲಾಗಿದೆ. 7 ಮಂದಿಯ ಪ್ರವಾಸಿಗರ ಗುಂಪು ಸರೋವರ ಭೇಟಿಗಾಗಿ ತೆರಳಿದಾಗ ಅನಾಹುತ ಸಂಭವಿಸಿದೆ. ಗುವಾಹಟಿ ಮೂಲಕ ಇವರು ತವಾಂಗ್ ತಲುಪಿದ್ದರು.
ವೈರಲ್ ಆಗುತ್ತಿರುವ ವಿಡಿಯೊ ಇಲ್ಲಿದೆ:
ಘಟನೆ ವಿವರ
ಶುಕ್ರವಾರ (ಜನವರಿ 16) ಈ ದುರ್ಘಟನೆ ನಡೆದಿದ್ದು, ಈಗಲೂ ನಾಪತ್ತೆಯಾಗಿರುವ ಮಹಾದೇವ್‌ಗಾಗಿ ಹುಟುಕಾಟ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಡಿ.ಡಬ್ಲ್ಯು. ಥೊಂಗಾನ್ ಮಾಹಿತಿ ನೀಡಿ, ʼʼಸಂತ್ರಸ್ತರನ್ನು ಕೇರಳದ ದಿನು ಮತ್ತು ಮಹಾದೇವ್ ಎಂದು ಗುರುತಿಸಲಾಗಿದೆ. ಇವರು 7 ಜನರನ್ನು ಒಳಗೊಂಡ ಪ್ರವಾಸಿಗರ ತಂಡದ ಭಾಗವಾಗಿದ್ದರುʼʼ ಎಂದು ತಿಳಿಸಿದ್ದಾರೆ.
ʼʼಶುಕ್ರವಾರ ಸಂಜೆ ಘಟನೆ ನಡೆದಿದೆ. ಪ್ರವಾಸಿಗರ ಪೈಕಿ ಓರ್ವ ಹೆಪ್ಪುಗಟ್ಟಿದ ಸರೋವರಕ್ಕೆ ಬಿದ್ದು ಮುಳಗಲು ಆರಂಭಿಸಿದ. ಈ ವೇಳೆ ಆತನನ್ನು ಕಾಪಾಡಲು ದಿನು ಮತ್ತು ಮಹಾದೇವ್ ಸರೋವರದ ಬಳಿ ತೆರಳಿದರು. ಅದಾಗ್ಯೂ ಮೊದಲು ಬಿದ್ದಿದ್ದ ವ್ಯಕ್ತಿ ಸುರಕ್ಷಿತವಾಗಿ ಹೊರ ಬಂದ. ಆತನನ್ನು ಕಾಪಾಡಲು ಸರೋವರಕ್ಕೆ ಇಳಿದ ದಿನು ಮತ್ತು ಮಹಾದೇವ್ ಐಸ್ ನೀರಿನಲ್ಲಿ ಮುಳುಗಿದರುʼʼ ಎಂದು ವಿವರಿಸಿದ್ದಾರೆ.
ತಂದೆಯ ಎದುರೇ ಕೊಳದಲ್ಲಿ ಮುಳುಗಿ ಇಬ್ಬರು ಮಕ್ಕಳು ಜಲಸಮಾಧಿ
ʼʼಈ ಬಗ್ಗೆ ಅಪರಾಹ್ನ 3 ಗಂಟೆ ಸುಮಾರಿಗೆ ನಮಗೆ ಮಾಹಿತಿ ಲಭಿಸಿತು. ಬಳಿಕ ಜಿಲ್ಲಾ ಪೊಲೀಸ್, ಕೇಂದ್ರ ಮೀಸಲು ಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಫೋರ್ಸ್ (SDRF) ಜಂಟಿ ಕಾರ್ಯಾಚರಣೆ ನಡೆಸಿತುʼʼ ಎಂದು ಥೊಂಗಾನ್ ಮಾಹಿತಿ ನೀಡಿದ್ದಾರೆ. ʼʼಕೆಟ್ಟ ಹವಾಮಾನ ಮತ್ತು ಕಡಿಮೆ ಗೋಚರತೆಯ ಕಾರಣದಿಂದ ಕಾರ್ಯಾಚರಣೆಗೆ ಸಾಕಷ್ಟು ಸವಾಲು ಎದುರಾಯಿತು. ಹೀಗಾಗಿ ಓರ್ವ ಪ್ರವಾಸಿಗನ ಮೃತದೇಹವಷ್ಟೇ ಪತ್ತೆಹಚ್ಚಲು ಸಾಧ್ಯವಾಯಿತು. ಶನಿವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಪುನರಾರಂಭಿಸಲಾಯಿತುʼʼ ಎಂದು ತಿಳಿಸಿದ್ದಾರೆ.
ಎಚ್ಚರಿಕೆ ಕಡೆಗಣಿಸಿದ ಪ್ರವಾಸಿಗರು
ಹೆಪ್ಪುಗಟ್ಟಿದ ನೀರಿನ ಮೇಲೆ ನಡೆಯಬೇಡಿ ಎಂದು ಸೇಲಾ ಸರೋವರ ಸೇರಿದಂತೆ ಹಲವು ಪ್ರವಾಸಿ ತಾಣದಲ್ಲಿ ಮುನ್ನೆಚ್ಚರಿಕೆ ಫಲಕ ಅಳವಡಿಸಲಾಗಿದೆ. ಅದಾಗ್ಯೂ ಪ್ರವಾಸಿಗರು ಇದನ್ನು ನಿರ್ಲಕ್ಷಿಸಿ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಪ್ಪುಗಟ್ಟಿದ ನೀರಿನ ತಾಣಗಳು ಅಪಾಯಕಾರಿ ಎಂದು ಡಿಸೆಂಬರ್‌ನಲ್ಲೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸಮುದ್ರ ಮಟ್ಟಕ್ಕಿಂತ ಸುಮಾರು 13,000 ಅಡಿ ಎತ್ತರದಲ್ಲಿರುವ ಸೆಲಾ ಸರೋವರವು ಜನಪ್ರಿಯ ಪ್ರವಾಸಿ ತಾಣ ಎನಿಸಿಕೊಂಡಿದೆ. ಚಳಿಗಾಲದಲ್ಲಿ ತೀವ್ರ ಶೀತ ಮತ್ತು ದುರ್ಬಲವಾದ ಮಂಜುಗಡ್ಡೆಯ ಹೊದಿಕೆಯಿಂದಾಗಿ ಅಪಾಯಕಾರಿಯಾಗಿಯೂ ಬದಲಾಗುತ್ತದೆ.