ಶಿಮ್ಲಾ, ನ. 26: ಪ್ರೀತಿ ಮತ್ತು ಹೊಸ ಬದುಕಿನ ಪಯಣಕ್ಕೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಹಿಮಾಚಲ ಪ್ರದೇಶದ ವೃದ್ಧಾಶ್ರಮವೊಂದರಲ್ಲಿ ನಡೆದ ಅಪರೂಪದ ವಿವಾಹವು ಮತ್ತೊಮ್ಮೆ ಸಾಬೀತುಪಡಿಸಿದೆ. ಕುಟುಂಬಸ್ಥರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಆಶ್ರಮದಲ್ಲಿ ಆಶ್ರಯ ಪಡೆದಿದ್ದ 75 ವರ್ಷದ ವೃದ್ಧ ಮತ್ತು 63 ವರ್ಷದ ವೃದ್ಧೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಳಿವಯಸ್ಸಿನಲ್ಲಿ ಪರಸ್ಪರ ಆಸರೆಯಾಗಿದ್ದಾರೆ.
ಬಿಲಾಸ್ಪುರ (Bilaspur) ಜಿಲ್ಲೆಯ ಘಾಘಸ್ನಲ್ಲಿರುವ ಅಪ್ನಾ ಘರ್ ವೃದ್ಧಾಶ್ರಮದಲ್ಲಿ ವಾಸವಿದ್ದ ಈ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿದ್ದು, ಮುಂದಿನ ಜೀವನಕ್ಕೆ ಜತೆಯಾಗಿ ಹೆಜ್ಜೆ ಹಾಕಲು ಪರಸ್ಪರ ಒಪ್ಪಿಗೆಯ ಮೇರೆಗೆ ಮದುವೆಯಾಗಲು ನಿರ್ಧರಿಸಿದರು ಎನ್ನಲಾಗಿದೆ. ಆಶ್ರಮದ ಸಿಬ್ಬಂದಿ ಹಾಗೂ ಇತರ ನಿವಾಸಿಗಳ ಸಮ್ಮುಖದಲ್ಲಿ ಸರಳ ಹಾಗೂ ಸಂಪ್ರದಾಯಬದ್ಧವಾಗಿ ಈ ವಿವಾಹ ನೆರವೇರಿದ್ದು, ಈ ಜೋಡಿಯ ಹೊಸ ಬದುಕಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.
ವಿವಾಹದ ವಿಡಿಯೊ ನೋಡಿ:
ಒಂಟಿತನದಿಂದ ಹೊಸ ಬದುಕಿನತ್ತ ಪಯಣ
ಕುಟುಂಬದವರಿಂದ ದೂರವಾದ ಬಳಿಕ ಈ ಇಬ್ಬರೂ ಹಿರಿಯ ನಾಗರಿಕರು ಹಿಮಾಚಲ ಪ್ರದೇಶದ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಒಂದೇ ಸೂರಿನಡಿ ವಾಸವಿದ್ದ ಇವರ ನಡುವೆ ಕ್ರಮೇಣ ಆತ್ಮೀಯತೆ ಮತ್ತು ಪರಸ್ಪರ ಕಾಳಜಿ ಬೆಳೆಯಿತು. ಇಳಿವಯಸ್ಸಿನ ಒಂಟಿತನವನ್ನು ದೂರ ಮಾಡಿ, ಮುಂದಿನ ಜೀವನಕ್ಕೆ ಜತೆಯಾಗಿ ಹೆಜ್ಜೆ ಹಾಕಲು ನಿರ್ಧರಿಸಿದ ಇವರಿಬ್ಬರು ತಮ್ಮ ಮನದ ಇಂಗಿತವನ್ನು ಆಶ್ರಮದ ಸಿಬ್ಬಂದಿ ಬಳಿ ಹಂಚಿಕೊಂಡರು.
ಇವರಿಬ್ಬರ ಪರಸ್ಪರ ಒಪ್ಪಿಗೆ ಮತ್ತು ನಿರ್ಧಾರವನ್ನು ಅರಿತು ಆಶ್ರಮದ ಸಿಬ್ಬಂದಿ ಮತ್ತು ನಿವಾಸಿಗಳೇ ಮುಂದೆ ನಿಂತು ಕುಟುಂಬಸ್ಥರಂತೆ ಮದುವೆಯ ಸಿದ್ಧತೆಗಳನ್ನು ಮಾಡಿದರು. ಆಶ್ರಮದ ಆವರಣದಲ್ಲೇ ಸಂಪ್ರದಾಯಬದ್ಧವಾಗಿ ಹಾಗೂ ಸರಳವಾಗಿ ನೆರವೇರಿದ ಈ ವಿವಾಹ ಸಮಾರಂಭದಲ್ಲಿ ಎಲ್ಲರೂ ನವಜೋಡಿಗೆ ಶುಭ ಹಾರೈಸಿದರು.
ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಬಿಲಾಸ್ಪುರ ಜಿಲ್ಲಾಧಿಕಾರಿ ಕಿರಣ್ ಭದಾನಾ, ಈ ವಿವಾಹ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡಿದೆ ಎಂದು ಹೇಳಿದ್ದಾರೆ. ಅಪ್ನಾ ಘರ್ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಯಸ್ಸಿನ ಮಿತಿ ಇಲ್ಲದೆ ಪ್ರತಿಯೊಬ್ಬರಿಗೂ ಸಂತೃಪ್ತ ಜೀವನ ನಡೆಸುವ ಹಕ್ಕಿದೆ, ವಯಸ್ಸಾದಂತೆ ಜೀವನದ ಸಂತೋಷ ಮತ್ತು ಸಂಗಾತಿಯನ್ನು ಹುಡುಕುವ ಆಸೆಯನ್ನು ಬಿಟ್ಟುಕೊಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಯುವಕನ ಜತೆ ಪ್ರೀತಿ; ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯ ಕಿಡ್ನ್ಯಾಪ್!
ವೃದ್ಧಾಶ್ರಮದಲ್ಲಿ ಹುಟ್ಟಿದ ಪ್ರೀತಿ
ಅಪ್ನಾ ಘರ್ ಸಂಸ್ಥೆಯ ಹಾಗೂ ವಕೀಲ್ ಪ್ರಕಾಶ್ ಚಂದ್ ಬನ್ಸಾಲ್ ಅವರ ಪ್ರಕಾರ, 2022ರಲ್ಲಿ ಸಂಸ್ಥೆಯ ತಂಡ ಕನ್ಹಯ್ಯ ಲಾಲ್ ಅವರನ್ನು ಗುಹೆಯೊಂದರಿಂದ ರಕ್ಷಿಸಿತ್ತು. ಈ ಹಿಂದೆ ಅವರು ಕುಟುಂಬದೊಂದಿಗೆ ವಾಸಿಸುತ್ತಿದ್ದರು, ಆದರೆ ಅವರ ಪತ್ನಿ ಮೃತಪಟ್ಟ ಬಳಿಕ ತಮ್ಮ ಆಸ್ತಿಯನ್ನು ಸಹೋದರರಿಗೆ ನೀಡಿದರು, ಬಳಿಕ ಕುಟುಂಬದವರೇ ಅವರನ್ನು ಮನೆಯಿಂದ ಹೊರಹಾಕಿದ್ದಾರೆ. ಇದರಿಂದಾಗಿ ಅವರು ಗುಹೆಯೊಂದರಲ್ಲಿ ವಾಸಿಸುತ್ತಿದ್ದರು. ಈ ವೇಳೆ ಮಂಡಿ ಜಿಲ್ಲೆಯ ಜಂಜೇಹ್ಲಿ ಪ್ರದೇಶದ ಥುನಾಗ್ ಗ್ರಾಮದವರಾದ ಕನ್ಹಯ್ಯ ಲಾಲ್ ಅವರನ್ನು ರಕ್ಷಿಸಿದ ಬಳಿಕ ವೃದ್ಧಾಶ್ರಮಕ್ಕೆ ಕರೆತರಲಾಗಿತ್ತು.
ಸಬೀನಾ ಮೂಲತಃ ಕೋಲ್ಕತಾದವರು. ಮನೆಯಿಂದ ದೂರವಾಗಿ ಅಲೆದಾಡುತ್ತ ಹಿಮಾಚಲ ಪ್ರದೇಶಕ್ಕೆ ಬಂದಿದ್ದರು. ಅವರನ್ನು ಮೊದಲು ಶಿಮ್ಲಾಗೆ ಕಳುಹಿಸಲಾಗಿತ್ತು, ನಂತರ 2025ರಲ್ಲಿ ಬಿಲಾಸ್ಪುರದ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಯಿತು. ಒಂದೇ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದ ಕನ್ಹಯ್ಯ ಲಾಲ್ ಮತ್ತು ಸಬೀನಾ ನಡುವೆ ಆತ್ಮೀಯತೆ ಬೆಳೆದು ಪ್ರೀತಿಗೆ ತಿರುಗಿತ್ತು. ಜೀವನದ ಉಳಿದ ಸಮಯವನ್ನು ಒಟ್ಟಿಗೆ ಕಳೆಯಲು ಇಚ್ಛಿಸಿದ ಜೋಡಿ ಮದುವೆಯಾಗುವ ನಿರ್ಧಾರ ಮಾಡಿದರು.