ಹೈದರಾಬಾದ್: ಶಂಕರಪಲ್ಲಿಯಿಂದ ಹೈದರಾಬಾದ್‌ಗೆ ಹೋಗುವ ರೈಲ್ವೆ ಹಳಿಯ ಮೇಲೆ ಮಹಿಳೆಯೊಬ್ಬಳು ತನ್ನ ಕಾರನ್ನು ನೇರವಾಗಿ ಚಲಾಯಿಸಿಕೊಂಡು ಬರುವ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ. ರೈಲ್ವೆ ಸಿಬ್ಬಂದಿ ಅವಳನ್ನು ತಡೆಯಲು ಪ್ರಯತ್ನಿಸಿದರೂ, ಅವರ ಮಾತನ್ನು
ಧಿಕ್ಕರಿಸಿ ಹಳಿಯ ಮೇಲೆ ಮುಂದೆ ಸಾಗಿದ್ದಾಳೆ. ಹಾಗಾಗಿ ರೈಲ್ವೆ ಸಿಬ್ಬಂದಿ ಮಹಿಳೆಯನ್ನು ಸ್ವಲ್ಪ ದೂರದವರೆಗೆ ಬೆನ್ನಟ್ಟಿದ್ದಾರೆ. ಕೊನೆಗೆ ಅವಳು ಕಾರನ್ನು ಹಳಿಗಳಿಂದ ದೂರ ತಿರುಗಿಸಿ ನಂತರ ಹತ್ತಿರದ ಮರಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿದ್ದಾಳೆ. ಇದರಿಂದ ಈ ಮಾರ್ಗದಲ್ಲಿ ರೈಲು ಚಲಿಸಲು ಅಡಚಣೆ ಉಂಟಾಗಿದೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಮಹಿಳೆ ರೈಲ್ವೆ ಹಳಿಗಳ ಮೇಲೆ ಕಿಯಾ ಸೋನೆಟ್ ಕಾರನ್ನು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ವರದಿ ಪ್ರಕಾರ, ರೈಲ್ವೆ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಮಹಿಳೆಯ ಕಾರನ್ನು ತಡೆಯಲು ಹಿಂದೆ ಓಡಿದ್ದಾರೆ. ಹಾಗೇ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಬರುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ. ನಂತರ ಮಹಿಳೆಯ ಕಾರು ಮರಕ್ಕೆ ಗುದ್ದಿದ ಕಾರಣ ಕಾರಿನ ಗಾಜುಗಳು ಪುಡಿಪುಡಿಯಾಗಿದೆ. ಈ ಘಟನೆಯಿಂದ ಬೆಂಗಳೂರಿನಿಂದ ಹೈದರಾಬಾದ್‌ಗೆ ಬರುವ ರೈಲುಗಳ ಪ್ರಯಾಣಕ್ಕೆ ತಡೆಯಾಗಿದೆ. ಇದರಿಂದ ಸುಮಾರು 45 ನಿಮಿಷಗಳ ಕಾಲ ರೈಲು ಸೇವೆ ಸ್ಥಗಿತಗೊಂಡಿದೆ.
ವಿಡಿಯೊ ಇಲ್ಲಿದೆ ನೋಡಿ...
ಘಟನೆಯ ನಂತರ ಸ್ಥಳೀಯ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಚಂದನಾ ದೀಪ್ತಿ ಅವರ ಪ್ರಕಾರ, ಮಹಿಳೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಳು ಮತ್ತು ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯ ಡ್ರೈವಿಂಗ್ ಲೈಸೆನ್ಸ್ ಮತ್ತು ಪ್ಯಾನ್ ಕಾರ್ಡ್ ಅನ್ನು ವಶಪಡಿಸಿಕೊಂಡಿದ್ದು, ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಳೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಚಲಿಸುತ್ತಿದ್ದ ಕಾರಿನಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿದ ದಂಪತಿ; ಮುಂದಾಗಿದ್ದೇ ಬೇರೆ
ಹೈದರಾಬಾದ್ ಹೊರವಲಯದಲ್ಲಿರುವ ಶಂಕರ್‌ಪಲ್ಲಿ ಬಳಿ ಈ ಘಟನೆ ನಡೆದಿದ್ದು, ಇದು ಸ್ಥಳೀಯ ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರಲ್ಲಿ ಭೀತಿ ಮೂಡಿಸಿದೆ. ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಮುಂಬರುವ ರೈಲುಗಳನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಡೆಯಲು ತಕ್ಷಣ ಕ್ರಮ ಕೈಗೊಂಡಿದ್ದಾರೆ.