ದೆಹಲಿ, ಜು. 26: ಜುಲೈ 25. ಭಾರತದ ಯುವ ಜನತೆಯ ಪಾಲಿಗೆ ಮತ್ತೊಂದು ಸ್ಮರಣೀಯ ದಿನ. ನಿರಂತರ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ದಿನ ಅದು. ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP), ಯುವ ಜನತೆ 36 ದಿನ ನಡೆಸಿದ ಪ್ರತಿಭಟನೆ ಬಳಿಕ ಪ್ರಧಾನ್ ಹುದ್ದೆಯಿಂದ ಕೆಳಗಿಳಿದರು. ಸದ್ಯ ಜಂತರ್ ಮಂತರ್‌ನಿಂದ ಪ್ರತಿಭಟನಾಕಾರರು ತೆರಳಿದ್ದಾರೆ. ಈ ಮಧ್ಯೆ ಮಾಧ್ಯಮ ಪ್ರತಿನಿಧಿಯೊಬ್ಬರ ವಿಡಿಯೊ ವೈರಲ್ ಆಗಿದೆ. ಝೀ ನ್ಯೂಸ್‌ನ ಜರ್ನಲಿಸ್ಟ್ ಕಪಿಲ್ ರಾವುತ್ ಲೈವ್‌ನಲ್ಲಿ ವರದಿ ಮಾಡುತ್ತಿದ್ದಾಗ ಪ್ರತಿಭಟನಾಕಾರರು ಅಡ್ಡಿ ಪಡಿಸಿದರೂ ಯಾವುದೇ ಅಸಮಾಧಾನ ವ್ಯಕ್ತಪಡಿಸದೆ ಮಳೆಯಲ್ಲಿ ಅವರು ನಿಂತಿರುವ ದೃಶ್ಯ ಇದಾಗಿದ್ದು, ಅವರ ತಾಳ್ಮೆ ನೆಟ್ಟಿಗರ ಗಮನ ಸೆಳೆದಿದೆ. ಸದ್ಯ ತಮ್ಮ ವರ್ತನೆಗೆ ಪ್ರತಿಭಟನಾಕಾರರು ಕ್ಷಮೆ ಕೋರಿದ್ದಾರೆ.
ಜೆನ್ ಝೀಗಳ ಶಬ್ಧ ಸಹಿತ ಹೋರಾಟದ ನಡುವೆ ಕಪಿಲ್ ರಾವುತ್ ಅವರ ಈ ನಿಶ್ಯಬ್ಧ ಹೋರಾಟ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ಮುಂಬೈಯ ದಾಬರ್‌ನ ಶಿವಾಜಿ ಪಾರ್ಕ್‌ನಲ್ಲಿ ಕಪಿಲ್ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ ಅವರನ್ನು ಸುತ್ತುವರಿದ ಒಂದಷ್ಟು ಮಂದಿ ಅಡ್ಡಿಪಡಿಸಿದ್ದರು.
ವೈರಲ್ ವಿಡಿಯೊ:
ಪ್ರತಿಭಟನೆಯನ್ನು ಪ್ರಸಾರ ಮಾಡುತ್ತಿದ್ದ ಎಲ್ಲ ಮಾಧ್ಯಮಗಳನ್ನು ಹೋರಾಟಗಾರರು ಲೂಸರ್ಸ್ ಎಂದು ಕರೆದಿದ್ದರು. ಹೀಗೆ ಶಾಂತಿ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ ಹಿಂಸೆಯ ರೂಪ ತಾಳಿತು. ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದು, ಸಾರ್ವಜನಿಕ ಸೊತ್ತುಗಳನ್ನು ನಾಶಪಡಿಸುತ್ತಿರುವ ದೃಶ್ಯ ಹೊರ ಬೀಳುತ್ತಿದ್ದಂತೆ ಪ್ರತಿಭಟನಾಕಾರರು ಮಾಧ್ಯಮ ಪ್ರತಿನಿಧಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಅವರು ಕಪಿಲ್ ಅವರನ್ನು ಸುತ್ತುವರಿದು ವರದಿ ಮಾಡಲು ಅಡ್ಡಿಪಡಿಸಿದರು. ವರದಿಗಾರರಿಗೆ ಅವರ ಕರ್ತವ್ಯ ನಿರ್ವಹಿಸಲು ಬಿಡದೆ ಅಡ್ಡಿಪಡಿಸಿದ ಪ್ರತಿಭಟನಾಕಾರರ ವರ್ತನೆ ಸಾರ್ತ್ರಿಕ ಟೀಕೆಗೆ ಗುರಿಯಾಯಿತು. ಜುಲೈ 18ರಂದು ನಡೆದ ಈ ಘಟನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಕಪಿಲ್ ಬಳಿ ಕ್ಷಮೆ ಕೋರಿದ ಹೋರಾಟಗಾರರು:
ಕ್ಷಮೆ ಕೋರಿದ ಹೋರಾಟಗಾರರು
ತಮ್ಮ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಹೋರಾಟಗಾರರ ಪೈಕಿ ಕೆಲವರು ಕಪಿಲ್ ಬಳಿ ಕ್ಷಮೆ ಕೋರಿದರು. ಕಪಿಲ್ ಕೂಡ ಅವರ ವರ್ತನೆಯನ್ನು ಕ್ಷಮಿಸುವ ಮೂಲಕ ಮತ್ತೊಮ್ಮೆ ಹೀರೋ ಎನಿಸಿಕೊಂಡರು. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಕಪಿಲ್, ವಿವಾದ ಧನಾತ್ಮಕವಾಗಿ ಬಗೆಹರಿದಿದೆ ಎಂದು ತಿಳಿಸಿದರು. ಕೆಲವರು ನೇರವಾಗಿ ಭೇಟಿಯಾಗಿ ಕ್ಷಮೆ ಕೋರಿದರೆ ಇನ್ನು ಕೆಲವರು ಕರೆ ಮಾಡಿ ತಮ್ಮ ತಪ್ಪಿ ಪ್ರಾಯಶ್ಚಿತಪಟ್ಟರು ಎಂದು ತಿಳಿಸಿದರು. ತಮಗೆ ಅವರ ವರ್ತನೆಯಿಂದ ಯಾವುದೇ ರೀತಿಯಲ್ಲಿ ನೋವಾಗಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 67,000 ರೂ. ಮೌಲ್ಯದ ಪಿಜ್ಜಾ ವಿತರಿಸಿದ ಯುವಕ
ʼʼಎಲ್ಲರನ್ನು ಕ್ಷಮಿಸಿದ್ದೇನೆ. ಅವರೆಲ್ಲರು ನನ್ನನ್ನು ಸಾರ್ವಜನಿಕವಾಗಿ ಅವಮಾನಿಸಿದರೂ ನನಗೆ ಯಾವುದೇ ರೀತಿಯಲ್ಲಿ ನೋವಾಗಿಲ್ಲ. ಅವರ ನೋವು ನನಗೆ ಅರ್ಥವಾಗುತ್ತದೆʼʼ ಎಂದು ಕಪಿಲ್ ವಿವರಿಸಿದರು. ʼʼಆದರೆ ಈ ಘಟನೆ ನನ್ನ ಮನೆಯವರ ಮೇಲೆ ಆಳವದ ಪರಿಣಾಮ ಬೀರಿತ್ತು. ಈ ವಿಡಿಯೊ ನೋಡಿ ಮಗಳು ತುಂಬ ನೊಂದುಕೊಂಡಿದ್ದಳು. ಬಳಿಕ ವಿದ್ಯಾರ್ಥಿಗಳು ಕ್ಷಮೆ ಕೋರಿದ್ದರಿಂದ ಅವಳು ಸಹಿತ ಮನೆಯವರೆಲ್ಲರೂ ನಿರಾಳವಾಗಿದ್ದಾರೆʼʼ ಎಂದು ತಿಳಿಸಿದ್ದಾರೆ. ಸದ್ಯ ಕಪಿಲ್ ಅವರ ಈ ಉದಾರ ನಡೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.