Viral Video: ಮೋಜಿಗಾಗಿ ಆನೆ ಬಾಲ ಎಳೆದು, ಕಲ್ಲೆಸೆದ ಜನ; ವಿಡಿಯೊ ವೈರಲ್, ಕಿಡಿಕಾರಿದ ನೆಟ್ಟಿಗರು
Man Pulling Elephant's Tail: ಜನರ ಗುಂಪೊಂದು ಕಾಡಾನೆಗೆ ಕಿರುಕುಳ ನೀಡುತ್ತಿರುವ ಆತಂಕಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ಆನೆಯು ಶಾಂತವಾಗಿ ನಿಂತಿತ್ತು. ಈ ವೇಳೆ ಯುವಕನೊಬ್ಬ ಕಾಡಾನೆ ಬಳಿಗೆ ಬಂದು ಹಿಂದಿನಿಂದ ಅದರ ಬಾಲವನ್ನು ಎಳೆದು ಕೆರಳಿಸಿದ್ದಾನೆ.

-

ಕೋಲ್ಕತ್ತಾ: ಜನರ ಗುಂಪೊಂದು ಕಾಡಾನೆಯನ್ನು ಮನರಂಜನೆಗಾಗಿ ಕಿರುಕುಳ ನೀಡುತ್ತಿರುವ ಆತಂಕಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದ (West Bengal) ಮೇದಿನಿಪುರದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರ ಗುಂಪೊಂದು ಕಾಡಾನೆಗೆ ಕಲ್ಲೆಸೆಯುವುದು, ಕೂಗುವುದು ಮತ್ತು ಆನೆಯ ಬಾಲವನ್ನು ಎಳೆಯುವುದನ್ನು ವಿಡಿಯೊದಲ್ಲಿ ಕಾಣಬಹುದು. ಇತರರು ಈ ಘಟನೆಯನ್ನು ನೋಡಿ, ನಗುವುದು ಮತ್ತು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿಕೊಳ್ಳುವುದನ್ನು ಗಮನಿಸಬಹುದು.
ರಸ್ತೆ ಬದಿಯಲ್ಲಿ ಆನೆಯು ಶಾಂತವಾಗಿ ನಿಂತಿತ್ತು. ಈ ವೇಳೆ ಯುವಕನೊಬ್ಬ ಕಾಡಾನೆ ಬಳಿಗೆ ಬಂದು ಹಿಂದಿನಿಂದ ಅದರ ಬಾಲವನ್ನು ಎಳೆದು ಆನೆಯನ್ನು ಕೆರಳಿಸಿದ್ದಾನೆ. ಇದರಿಂದ ಬೆಚ್ಚಿಬಿದ್ದು, ಕಿರಿಕಿರಿಗೊಂಡ ಆನೆ ತಿರುಗಿ ಆ ವ್ಯಕ್ತಿಯ ಕಡೆಗೆ ದಾಳಿ ಮಾಡಲು ಮುಂದಾಗಿದೆ. ಆದರೆ ಆ ವ್ಯಕ್ತಿಯು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಆನೆಯನ್ನು ನೋಡಲು ಜಮಾಯಿಸಿದ್ದ ಅನೇಕ ಮಂದಿ ಆನೆಯ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ಕಂಡುಬಂದಿದೆ. ಇದು ಆನೆಯನ್ನು ಮತ್ತಷ್ಟು ಕೆರಳಿಸಿದೆ.
ನೆರೆದಿದ್ದ ಜನರು ನಗುತ್ತಾ ಮತ್ತು ಹರ್ಷೋದ್ಗಾರ ಮಾಡುತ್ತಾ ಅಪಾಯಕಾರಿ ಪರಿಸ್ಥಿತಿಯನ್ನು ಮನರಂಜನೆಯಾಗಿ ಪರಿಗಣಿಸುತ್ತಿರುವುದನ್ನು ಕಾಣಬಹುದು. ಮೇದಿನಿಪುರ ಜಿಲ್ಲೆಯ ಮಾನವ ವಸತಿಗಳ ಬಳಿ ಆಹಾರ ಹುಡುಕುತ್ತ ಆನೆಗಳ ಹಿಂಡು ದಾರಿ ತಪ್ಪಿದಾಗ ಈ ಘಟನೆ ಸಂಭವಿಸಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಈ ವಿಡಿಯೋವನ್ನು @streetdogsofbombay ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇಲ್ಲಿ ನಿಜವಾಗಿಯೂ ಕಾಡು ಯಾರದ್ದು? ದೈತ್ಯ ಪ್ರಾಣಿ ಯಾವುದು? ಪ್ರಾಣಿಗಳಂತೆ ಕಡೆಯಾಗಿ ವರ್ತಿಸುವ ಮನುಷ್ಯರಿರವರು ಎಂದು ಬರೆದಿದ್ದಾರೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅಷ್ಟೂ ಮಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅನೇಕ ಬಳಕೆದಾರರು ಇದನ್ನು ವನ್ಯಜೀವಿಗಳ ಬಗ್ಗೆ ಮಾನವನ ಹಸ್ತಕ್ಷೇಪದ ನಾಚಿಕೆಗೇಡಿನ ಕೃತ್ಯ ಎಂದು ಕರೆದಿದ್ದಾರೆ.
ಇದನ್ನೂ ಓದಿ: Viral Video: ಅವನು ನನ್ನ ಪಕ್ಕದಲ್ಲಿ ಮಲಗಲು ಯತ್ನಿಸುತ್ತಿದ್ದ- ರೈಲಿನಲ್ಲಾದ ಭಯಾನಕ ಅನುಭವ ಬಿಟ್ಟಿಟ್ಟ ಯುವತಿ
ಆನೆ ಬಂದು ಅವರನ್ನು ತುಳಿದರೆ ನಾನು ಕಣ್ಣೀರು ಸುರಿಸುವುದಿಲ್ಲ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಯಾವುದೇ ಕಾಡು ಪ್ರಾಣಿಗಳನ್ನು ಈ ರೀತಿ ತೊಂದರೆಗೊಳಿಸುವುದು ಕಾನೂನುಬಾಹಿರ ಎಂದು ಸ್ಪಷ್ಟವಾಗಿ ಹೇಳುತ್ತದೆ. ಅಂತಹ ಸಂದರ್ಭಗಳಲ್ಲಿ ಕಠಿಣ ಶಿಕ್ಷೆಯನ್ನು ಕಾನೂನು ಒದಗಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಅರಣ್ಯ ಅಧಿಕಾರಿ ಎಲ್ಲಿದ್ದೀರಾ? ನಿದ್ರಿಸುತ್ತಿದ್ದೀರಾ? ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ಈ ಜನರಿಗೆ ಆನೆಯ ನೆನಪುಗಳ ಬಗ್ಗೆ ತಿಳಿದಿಲ್ಲದಿರಬಹುದು. ಕೆಟ್ಟ ನೆನಪುಗಳನ್ನು ಆನೆಗಳು ಅಷ್ಟು ಬೇಗ ಮರೆಯುವುದಿಲ್ಲ. ಭವಿಷ್ಯದಲ್ಲಿ ಆ ಆನೆ ಅದೇ ಮನುಷ್ಯನ ಸಂಪರ್ಕಕ್ಕೆ ಬಂದರೆ ಅದು ಎಂದಿಗೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.