ಜೈಪುರ, ಮಾ. 21: ಈ ಬಾರಿಯ ಈದ್ ಉಲ್-ಫಿತರ್ (Eid ul-Fitr) ಆಚರಣೆ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರೆ ಹಿಂದೂಗಳು ಅವರ ಮೇಲೆ ಹೂ ಮಳೆ ಸುರಿಸಿ ಅವರ ಸಂಭ್ರಮದಲ್ಲಿ ತಾವೂ ಭಾಗಿಯಾದರು. ಆ ಮೂಲಕ ಭಾರತದ ನಿಜವಾದ ಅಂತಃಸತ್ವ ಕೋಮು ಸೌಹಾರ್ದತೆಯಲ್ಲಿ ಅಡಗಿದೆ ಎನ್ನುವ ಸಂದೇಶ ಸಾರಿದರು. ರಾಜಸ್ಥಾನದ ಜೈಪುರದಲ್ಲಿ ಈ ಅಪರೂಪದ ದೃಶ್ಯ ಕಂಡುಬಂದಿದ್ದು, ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Viral Video) ಹರಿದಾಡುತ್ತಿದೆ.
ಜೈಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಈದ್ ಉಲ್-ಫಿತರ್‌ನ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಹಿಂದೂಗಳು ಅವರ ಮೇಲೆ ಹೂವಿನ ಪಕಳೆ ಎಸೆಯುವ ಮೂಲಕ ಗಮನ ಸೆಳೆದರು. ಹಿಂದೂ-ಮುಸ್ಲಿಂ ಏಕತಾ ಸಮಿತಿಯ ನೇತೃತ್ವದಲ್ಲಿ ಈ ಅಪರೂಪದ ಸಂಗಮ ನಡೆಯಿತು. ವಿಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಬಹುತೇಕರು ಮೆಚ್ಚುಗೆ ಸೂಚಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ʼʼಪ್ರತಿಯೊಬ್ಬರಿಗೂ ಈದ್ ಶುಭಾಶಯಗಳು. ನಾವು ಹಿಂದೂ-ಮುಸ್ಲಿಂ ಏಕತಾ ಸಮಿತಿಯ ಸದಸ್ಯರು. ನಮ್ಮ ನಡುವಿನ ಸೌಹಾರ್ದತೆ ಮುಂದುವರಿಯಲಿದೆ. ಕೆಲವರು 2 ಧರ್ಮದ ಮಧ್ಯೆ ಬೇಧ ಭಾವ ಸೃಷ್ಟಿಸಲು ಸಮಸ್ಯೆ ಹುಟ್ಟುಹಾಕಲು ಪ್ರಯತ್ನಿಸುತ್ತಾರೆ. ಇದು ಸರಿಯಲ್ಲ. ರಾಮ ಇಲ್ಲದೆ ರಂಜಾನ್ ಇಲ್ಲ. ಅದೇ ರೀತಿ ಈದ್ ಇಲ್ಲದೆ ದೀಪಾವಳಿ ಇಲ್ಲ. ಈ ಮೂಲಕ ನಾವೆಲ್ಲ ಒಂದೇ ಎನ್ನುವ ಅದ್ಭುತ ಸಂದೇಶ ಸಾರುತ್ತಿದ್ದೇವೆʼʼ ಎಂದು ರಾಜೇಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಮೊಸಳೆ ಬಾಯಿಗೆ ಸಿಕ್ಕ ಸಹಚರನನ್ನು ಕಾಪಾಡಲು ನದಿಗೆ ಹಾರಿದ ಮಂಗಗಳು
ನೆಟ್ಟಿಗರಿಂದ ಮೆಚ್ಚುಗೆ
ವಿಡಿಯೊ ವೀಕ್ಷಿಸಿದ ಅನೇಕರು ಹಿಂದೂ-ಮುಸ್ಲಿಂ ಏಕತಾ ಸಮಿತಿಯ ಕಾರ್ಯವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಇದು ಹಿಂದೂ ಧರ್ಮದ, ಭಾರತದ ಹೆಚ್ಚುಗಾರಿಕೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಕಾರ್ಯ ಹೆಚ್ಚಾಗಬೇಕು ಎಂದು ಹಲವರು ಸಲಹೆ ನೀಡಿದ್ದಾರೆ. ʼʼಇದು ಭಾರತದ ಹೆಮ್ಮೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ತಾವು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ಪವನ್ ಖೇರ ಈ ವಿಡಿಯೊಕ್ಕೆ ಪ್ರತಿಕ್ರಿಯಿಸಿ, ʼʼಇದು ನನ್ನ ರಾಜಸ್ಥಾನ. ಇಂತಹ ಕಾರ್ಯಗಳಿಂದಲೇ ನಾನು ರಾಜಸ್ಥಾನದವನು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆʼʼ ಎಂದಿದ್ದಾರೆ. ʼʼಹಲವು ವರ್ಷಗಳಿಂದ ದೇಶ ಕಾಪಾಡಿಕೊಂಡು ಬಂದಿರುವ ಕೋಮು ಸೌಹಾರ್ದತೆ, 2 ಧರ್ಮಗಳ ನಡುವಿನ ಸಹೋದರತ್ವವನ್ನು ಇದು ಪ್ರತಿಫಲಿಸುತ್ತದೆʼʼ ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ʼʼಹಿಂದೂ ಮತ್ತು ಮುಸ್ಲಿಮರ ಒಗ್ಗಟ್ಟನ್ನು ನೋಡಲು ಸಂತಸ ಮತ್ತು ಹೆಮ್ಮೆಯಾಗುತ್ತದೆ. ಅದಾಗ್ಯೂ ಇದನ್ನು ಜೀರ್ಣಿಕೊಳ್ಳುವುದು ಕೆಲವರು ಕಷ್ಟವಾಗಲಿದೆ. ಅನೇಕ ಹಿಂದೂಗಳು ಮತ್ತು ಮುಸ್ಲಿಮರು ಎರಡೂ ಧರ್ಮಗಳ ಬಗ್ಗೆಗೌರವ ಹೊಂದಿದ್ದಾರೆ. ಎಲ್ಲೋ ಒಂದಿಬ್ಬರು ಕಾರಣದಿಂದ ಸಮಸ್ಯೆಯಾಗುತ್ತಿದೆʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಸದ್ಯ ಭಾರಿ ಚರ್ಚೆಗೆ ಕಾರಣವಾಗಿದ್ದು, ಧನಾತ್ಮಕ ಬದಲಾವಣೆಗೆ ಸಾಕ್ಷಿ ಎನಿಸಿಕೊಂಡಿದೆ. ಇಂತಹ ಘಟನೆ ಎಲ್ಲ ಕಡೆ ಹೆಚ್ಚಾಗಲಿ ಎಂದು ಹಲವರು ಆಶಯ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.