ಲಖನೌ, ನ. 16: ಆಂಬ್ಯುಲೆನ್ಸ್ ಬಂದಾಗ ದಾರಿ ಬಿಟ್ಟು ಕೊಡಬೇಕು ಎನ್ನುವ ನಿಯಮವಿದೆ. ಅದಕ್ಕಿಂತಲೂ ಹೆಚ್ಚಾಗಿ ಅದು ನಮ್ಮ ಕರ್ತವ್ಯ ಕೂಡ ಹೌದು. ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವುದನ್ನು ಪ್ರತಿಯೊಬ್ಬರೂ ಖಚಿತಪಡಿಸಿಕೊಳ್ಳಬೇಕಿದೆ. ಆದರೆ ಇಲ್ಲೊಂದು ಕಡೆ ಯುವಕರು ಅಮಾನವೀಯವಾಗಿ ವರ್ತಿಸಿದ್ದು, ಆಂಬ್ಯುಲೆನ್ಸ್ ಕಾಯುತ್ತಿದ್ದರೂ ದಾರಿ ಬಿಟ್ಟುಕೊಡದೆ ರಸ್ತೆ ಮಧ್ಯೆ ಥಾರ್ ನಿಲ್ಲಿಸಿ ಅದರ ಮೇಲೆ ಹತ್ತಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ (Viral Video) ಆಗಿದೆ.
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಬಾಬುಗಢ್ ಎಂಬಲ್ಲಿ ಈ ಘಟನೆ ನಡೆದಿದೆ. ಯುವಕರ ಗುಂಪೊಂದು ರಸ್ತೆಯನ್ನು ಬ್ಲಾಕ್ ಮಾಡಿ ಥಾರ್‌ನ ರೂಫ್ ಮೇಲೆ ಹತ್ತಿ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಜತೆಗೆ 2 ಆಂಬ್ಯುಲೆನ್ಸ್ ಸರದಿಯಲ್ಲಿ ಕಾಯುತ್ತಿರುವುದನ್ನು ಕೂಡ ದೃಶ್ಯದಲ್ಲಿ ಕಾಣಬಹುದು. ದಾರಿ ಬಿಟ್ಟುಕೊಡುವಂತೆ ಮನವಿ ಮಾಡಿದರೂ ಯುವಕರು ಅದನ್ನು ಕಿವಿಗೆ ಹಾಕಿಕೊಳ್ಳದೇ ಉದ್ಧಟತನ ಮೆರೆದಿದ್ದಾರೆ. ಸದ್ಯ ಈ ಯುವಕರ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಥಾರ್ ರೂಫ್ ಹತ್ತಿ ಯುವಕರ ಡ್ಯಾನ್ಸ್:
2 ಆಂಬ್ಯುಲೆನ್ಸ್ ಪೈಕಿ ಒಂದರಲ್ಲಿ ರೋಗಿ ಇದ್ದರು ಎನ್ನಲಾಗಿದೆ. ನಿರಂತರ ಸೈರನ್ ಮೊಳಗಿಸುತ್ತಿದ್ದರೂ ಈ ಯುವಕರು ಕ್ಯಾರೇ ಎಂದಿಲ್ಲ. ರಸ್ತೆ ಬ್ಲಾಕ್ ಮಾಡಿ ಡ್ಯಾನ್ಸ್ ಮಾಡುವುದನ್ನು ಮುಂದುವರಿಸಿದ್ದಾರೆ. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕರ ವರ್ತನೆಗೆ ಕಿಡಿಕಾರಿದ್ದಾರೆ.
ಬ್ಲಿಂಕ್‌ಇಟ್ ಉಚಿತ ಆಂಬ್ಯುಲೆನ್ಸ್ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ
ನೆಟ್ಟಿಗರು ಗರಂ
ತುರ್ತು ಚಿಕಿತ್ಸೆಗಾಗಿ ತೆರಳುತ್ತಿದ್ದ ರೋಗಿ ಇದ್ದ ಆಂಬ್ಯುಲೆನ್ಸ್ ದಾರಿ ಬಿಟ್ಟು ಕೊಡದೇ ಇರುವ ಅಮಾನವೀಯ ನಡೆಯನ್ನು ಅನೇಕರು ಪ್ರಶ್ನಿಸಿದ್ದಾರೆ. ಹೀಗೆ ವರ್ತಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಅಲ್ಲೇ ಅವರನ್ನು ರಸ್ತೆಗೆ ಎಳೆದು ಬುದ್ಧಿ ಕಲಿಸಬೇಕಿತ್ತು ಎಂದು ಹಲವರು ಹೇಳಿದ್ದಾರೆ. ವಾಹನವನ್ನು ಸೀಝ್ ಮಾಡಿ ಲೈಸನ್ಸ್ ರದ್ದುಪಡಿಸಬೇಕೆನ್ನುವ ಆಗ್ರಹವೂ ಕೇಳಿ ಬಂದಿದೆ. ಒಟ್ಟಿನಲ್ಲಿ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟಿ ಹಾಕಿದ್ದಂತು ಸುಳ್ಳಲ್ಲ.
ಹಿಂದೆಯೂ ಅಗಿತ್ತು
ಈ ರೀತಿಯ ಅಮಾನುಷ ಘಟನೆ ಹಿಂದೆಯೂ ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ದೃಶ್ಯ ಕಂಡು ಬಂದಿತ್ತು. ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ವ್ಹೀಲಿಂಗ್ ಮಾಡಿ ಪುಂಡಾಟ ತೋರಿದ್ದ ಆರು ಮಂದಿಯನ್ನು ಯಶವಂತಪುರ ಸಂಚಾರ ಪೊಲೀಸರು ಜುಲೈಯಲ್ಲಿ ವಶಕ್ಕೆ ಪಡೆದುಕೊಂಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದರು.
ಆಂಬ್ಯುಲೆನ್ಸ್ ಕೊರತೆ; ಸುಡು ಬಿಸಿಲಿನಲ್ಲೇ ಬಾಲಕನನ್ನು ಆಸ್ಪತ್ರೆಗೆ ಸ್ಟ್ರೆಚರ್‌ನಲ್ಲಿ ಸಾಗಿಸಿದ ಕುಟುಂಬಸ್ಥರು
ಅಚ್ಚರಿ ಎಂದರೆ ಬಂಧಿತರಲ್ಲಿ ಅಪ್ರಾಪ್ತ ವಯಸ್ಕರೂ ಇದ್ದರು. ಜುಲೈ 4ರಂದು ಮಧ್ಯರಾತ್ರಿ 2.30ರ ಸುಮಾರಿಗೆ ಗೊರಗುಂಟೆಪಾಳ್ಯದಿಂದ ಯಶವಂತಪುರಕ್ಕೆ ಮೂರು ಬೈಕ್‌ಗಳಲ್ಲಿ ಆರೋಪಿಗಳು ವ್ಹೀಲಿಂಗ್ ಮಾಡಿ ವಾಹನ ಚಲಾಯಿಸಿದ್ದರು. ಹಿಂದೆ ಬರುತ್ತಿದ್ದ ಆಂಬ್ಯುಲೆನ್ಸ್ ದಾರಿ ಬಿಡದೇ ಮೊಂಡಾಟ ತೋರಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸಂಚಾರ ಪೊಲೀಸರು ವಾಹನ ಸವಾರರನ್ನ ಪತ್ತೆ ಹಚ್ಚಿದ್ದರು.
ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.