ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲ; ನೇಗಿಲು ತಾವೇ ಹೊತ್ತು ಗದ್ದೆ ಉಳುಮೆಗೆ ಇಳಿದ ವೃದ್ಧ ದಂಪತಿ: ಅನ್ನದಾತರ ಸ್ಥಿತಿ ಕಂಡು ಮರುಗಿದ ದೇಶ

Viral Video: ಎತ್ತುಗಳನ್ನು ಕೊಂಡುಕೊಳ್ಳಲು, ಕನಿಷ್ಠ ಟ್ರ್ಯಾಕ್ಟರ್‌ಗೆ ಬಾಡಿಗೆ ಪಾವತಿಸಲು ಹಣವಿಲ್ಲದೆ ವೃದ್ಧ ದಂಪತಿ ತಾವೇ ನೇಗಿಲು ಹೊತ್ತುಕೊಂಡು ಗದ್ದೆ ಉಳುಮೆಗೆ ಇಳಿದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಹಲವರ ಕಣ್ಣಂಚು ಒದ್ದೆ ಮಾಡಿದೆ.

ನೇಗಿಲು ತಾವೇ ಹೊತ್ತು ಗದ್ದೆ ಉಳುಮೆಗೆ ಇಳಿದ ವೃದ್ಧ ದಂಪತಿ

Profile Ramesh B Jul 2, 2025 7:34 PM

ಮುಂಬೈ: ಭಾರತ ಕೃಷಿ ಪ್ರಧಾನ ದೇಶ; ರೈತರೇ ನಮ್ಮ ಬೆನ್ನೆಲುಬು ಎನ್ನುವ ಮಾತನ್ನು ಕೇಳಿಕೊಂಡು ಬೆಳೆದವರು ನಾವೆಲ್ಲ. ಆದರೆ ಬೇಸರದ ವಿಚಾರ ಎಂದರೆ ಕೃಷಿಕರಿಗೆ ಸಿಗಬೇಕಾದ ಪ್ರಾಧಾನ್ಯತೆಯಾಗಲೀ, ಮನ್ನಣೆಯಾಗಲೀ ಇನ್ನೂ ಲಭಿಸಿಲ್ಲ. ಇಡೀ ದೇಶದ ಹೊಟ್ಟೆ ತುಂಬಿಸುವ ಅದೇಷ್ಟೋ ಅನ್ನದಾತರು ಹಸಿವಿನಿಂದ ಬಳಲುತ್ತಿದ್ದಾರೆ, ಜೀವನ ನಡೆಸಲು ಪರದಾಡುತ್ತಿದ್ದಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ಎನ್ನುವಂತಿದೆ ಈ ವಿಡಿಯೊ. ಎತ್ತುಗಳನ್ನು ಕೊಂಡುಕೊಳ್ಳಲು, ಕನಿಷ್ಠ ಟ್ರ್ಯಾಕ್ಟರ್‌ಗೆ ಬಾಡಿಗೆ ಪಾವತಿಸಲು ಹಣವಿಲ್ಲದೆ ವೃದ್ಧ ದಂಪತಿ ತಾವೇ ನೇಗಿಲು ಹೊತ್ತುಕೊಂಡು ಗದ್ದೆ ಉಳುಮೆಗೆ ಇಳಿದಿದ್ದಾರೆ. 75 ವರ್ಷದ ಪತಿಯ ಹೆಗಲಿಗೆ ನೊಗ ಕಟ್ಟಿ 65 ವರ್ಷದ ಪತ್ನಿ ನೇಗಿಲು ಬಳಸಿ ಗದ್ದೆ ಉತ್ತಿದ್ದಾರೆ. ಸದ್ಯ ಈ ವಿಡಿಯೊ (Viral Video) ದೇಶದ ಕೃಷಿಕರ ಸ್ಥಿತಿಗೆ ಕನ್ನಡಿ ಹಿಡಿದಿದ್ದು, ಹಲವರ ಮನಸ್ಸು ಮಿಡಿದಿದೆ.

ಮಹಾರಾಷ್ಟ್ರದ ಲಾತೂರ್‌ನಲ್ಲಿ ಕಂಡುಬಂದ ಈ ಹೃದಯಸ್ಪರ್ಶಿ ದೃಶ್ಯ ಹಲವರ ಕಣ್ಣಂಚು ಒದ್ದೆ ಮಾಡಿದೆ. ಜತೆಗೆ ಕೃಷಿ ಚಟುವಟಿಕೆಗೆ ಸೂಕ್ತ ಸೌಕರ್ಯವಿಲ್ಲದೆ ಪರದಾಡುವ ರೈತರ ಬಗ್ಗೆ ಚಿಂತನೆ ನಡೆಸುವಂತೆ ಮಾಡಿದೆ.

ವೈರಲ್‌ ವಿಡಿಯೊ ನೋಡಿ:



ಈ ಸುದ್ದಿಯನ್ನೂ ಓದಿ: Viral Video: ದೇವಸ್ಥಾನದಲ್ಲೇ ನಮಾಜ್‌ ಮಾಡಿದ ಮುಸ್ಲಿಂ ವ್ಯಕ್ತಿ; ಶಾಕಿಂಗ್‌ ವಿಡಿಯೊ ವೈರಲ್‌

ವಿಡಿಯೊದಲ್ಲಿ ಏನಿದೆ?

ಲಾತೂರ್ ಜಿಲ್ಲೆಯ ಹಡೋಲ್ಟಿ ಗ್ರಾಮದ ಅಂಬಾದಾಸ್ ಪವಾರ್ ಅವರಿಗೆ 2.5 ಎಕ್ರೆ ಕೃಷಿ ಭೂಮಿ ಇದೆ. ಆದರೆ ಭೂಮಿಯನ್ನು ಉಳುಮೆ ಮಾಡಲು ಎತ್ತು ಅಥವಾ ಟ್ರ್ಯಾಕ್ಟರ್ ಸಹಾಯ ಪಡೆಯಲು ಅವರ ಬಳಿ ಹಣವಿಲ್ಲ. ಜತೆಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಕೃಷಿ ಮಾಡದೆ ಬೇರೆ ದಾರಿ ಇಲ್ಲ.

ಕೊನೆಗೆ ಬೇರೆ ಆಯ್ಕೆ ಇಲ್ಲದೆ ಅಂಬಾದಾಸ್ ಪವಾರ್ ಪತ್ನಿ ಮುಕ್ತಾಭಾಯಿ ಜತೆ ಸೇರಿ ತಾವೇ ಭೂಮಿ ಉಳುಮೆ ಮಾಡಲು ಮುಂದಾಗಿದ್ದಾರೆ. ಕೆಲವು ವರ್ಷಗಳಿಂದ ಇವರು ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರಂತೆ. ಅವರ ಪುತ್ರ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ವೃದ್ಧ ದಂಪತಿಯೇ ಎಲ್ಲ ಕೃಷಿ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಸದ್ಯ ಇವರ ಮನೆಯಲ್ಲಿ ಸೊಸೆ ಮತ್ತು ಮೊಮ್ಮಕ್ಕಳಿದ್ದು ಅವರು ಇತರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದ್ದೊಬ್ಬ ಮಗಳ ಮದುವೆಯಾಗಿದೆ.

ʼʼ2 ವರ್ಷ ಸುರಿದ ಭಾರಿ ಮಳೆಯಿಂದಾಗಿ ಬೆಳೆಗಳೆಲ್ಲ ನಾಶವಾದ ಕಾರಣ ಸಾಲ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತುʼʼ ಎಂದು ಅಂಬಾದಾಸ್ ಪವಾರ್ ತಿಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ವೃದ್ಧ ದಂಪತಿ ಭೂಮಿಯನ್ನು ಹದ ಮಾಡುವಾಗ ದಣಿದಂತೆ ಕಂಡಿದ್ದಾರೆ. "ನನಗೆ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ. ಉಳುಮೆ ಮಾಡುವಾಗ ನನ್ನ ತೋಳುಗಳು ನಡುಗುತ್ತವೆ, ನನ್ನ ಕಾಲುಗಳು ಬಾಗುತ್ತವೆ ಮತ್ತು ನನ್ನ ಕುತ್ತಿಗೆ ಕೆಲವೊಮ್ಮೆ ದಣಿದಿರುತ್ತದೆ. ಆದರೆ ಕೆಲಸ ಮಾಡುವುದು ಬಿಟ್ಟು ಜೀವನವು ನಮಗೆ ಬೇರೆ ಆಯ್ಕೆಯನ್ನು ನೀಡಿಲ್ಲ" ಎಂದು ಅಂಬಾದಾಸ್ ಪವಾರ್ ವಿಷಾದದಿಂದ ಹೇಳುತ್ತಾರೆ.

ಈ ವಿಡಿಯೊ ಕೃಷಿ ವೆಚ್ಚಗಳ ಹೆಚ್ಚಳ, ಹವಾಮಾನದ ಬದಲಾವಣೆಯಿಂದ ಸಣ್ಣ ರೈತರ ಮೇಲೆ ಬೀರುವ ಪರಿಣಾಮದ ಮೇಲಿನ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬರುವಂತೆ ಮಾಡಿದೆ. ವಿಡಿಯೊ ನೋಡಿ ಹಲವರು ಮರುಗಿದ್ದಾರೆ.