ನವದೆಹಲಿ: ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಸೋಮವಾರ (ಅಕ್ಟೋಬರ್ 6) ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಮೃತ ದುರ್ದೈವಿಯನ್ನು ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ. ವಿಡಿಯೊದಲ್ಲಿ, ಕುಮಾರ್ ಬೆಳಿಗ್ಗೆ 9:22 ರ ಸುಮಾರಿಗೆ ನ್ಯಾಯಾಲಯಕ್ಕೆ ಕರ್ತವ್ಯಕ್ಕೆ ಆಗಮಿಸಿದ್ದನ್ನು ಕಾಣಬಹುದು. ಸಹೋದ್ಯೋಗಿಗಳನ್ನು ಸ್ವಾಗತಿಸಿದ ನಂತರ, ಅವರು ಎಸ್ಕಲೇಟರ್ ಕಡೆಗೆ ಹೋದರು. ಆದರೆ, ಈ ವೇಳೆ ಅವರು ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದರು.
ಕುಸಿದು ಬಿದ್ದ ರಾಜೇಶ್ ಕುಮಾರ್ ಅವರನ್ನು ಗಮನಿಸಿದ ಸಹೋದ್ಯೋಗಿಗಳು ಕೂಡಲೇ ಅವರ ಕಡೆಗೆ ಧಾವಿಸಿ ಅವರನ್ನು ಕರೆದುಕೊಂಡು ಹೋಗುವುದನ್ನು ವಿಡಿಯೊದಲ್ಲಿ ನೋಡಬಹುದು. ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಹೃದಯಾಘಾತದಿಂದ ರಾಜೇಶ್ ಕುಮಾರ್ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಪಿಟಿಐ ವರದಿಯ ಪ್ರಕಾರ, ಕುಮಾರ್ ಅವರನ್ನು ನ್ಯಾಯಾಲಯದ ಭದ್ರತಾ ಮತ್ತು ತಪಾಸಣಾ ವಿಭಾಗದಲ್ಲಿ ನೇಮಿಸಲಾಗಿತ್ತು.
ವಿಡಿಯೊ ವೀಕ್ಷಿಸಿ:
ವ್ಯಾಯಾಮ ಮಾಡುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಸಾವು
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುವ ಘಟನೆಗಳು ಹೆಚ್ಚಾಗಿವೆ. ಹೃದಯಾಘಾತದಿಂದ ಜನರು ಕುಸಿದು ಬೀಳುತ್ತಿರುವ ಹಲವಾರು ಭಯಾನಕ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ವರ್ಷದ ಜುಲೈನಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಹರಿಯಾಣದ ಫರಿದಾಬಾದ್‌ನಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ವ್ಯಕ್ತಿಯೊಬ್ಬರು ಹಠಾತ್ತನೆ ಕುಸಿದು ಬಿದ್ದರು.
ಇದನ್ನೂ ಓದಿ: Heart Attack: ಎನ್‌ಸಿಸಿ ದೈಹಿಕ ಪರೀಕ್ಷೆ ವೇಳೆ ಹೃದಯಾಘಾತ; ಧಾರವಾಡದ ಐಐಟಿ ವಿದ್ಯಾರ್ಥಿ ಸಾವು
ಮೃತರನ್ನು ಪಂಕಜ್ ಶರ್ಮಾ ಎಂದು ಗುರುತಿಸಲಾಗಿದೆ. ಬಲ್ಲಭಗಢದ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾದಾಗ ಶರ್ಮಾ ಸುಮಾರು 170 ಕೆಜಿ ತೂಕವಿದ್ದರು. ಅವರು ತಮ್ಮ ಸ್ನೇಹಿತ ರೋಹಿತ್ ಜೊತೆ ಜಿಮ್‌ಗೆ ಹೋಗಿದ್ದರು. ಈ ದುರಂತ ಘಟನೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೇನಾಧಿಕಾರಿಯೊಬ್ಬರು ಕಾರ್‌ನಲ್ಲಿ ಕುಳಿತಂತೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿತ್ತು. ಮಾಹಿತಿಯ ಪ್ರಕಾರ, ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಮೇಜರ್ ಬಿ. ವಿಜಯ್ ಕುಮಾರ್ ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸದರ್ ಬಜಾರ್‌ನಲ್ಲಿರುವ ಇಂಡಿಯನ್ ಕಾಫಿ ಹೌಸ್ ಬಳಿ ತಮ್ಮ ಕಾರಿನಲ್ಲಿ ಪತ್ತೆಯಾಗಿದ್ದಾರೆ. ಬಹಳ ಸಮಯದಿಂದ ಕಾರು ನಿಲ್ಲಿಸಿದ್ದನ್ನು ನೋಡಿದ ದಾರಿಹೋಕರು ಅವರನ್ನು ಗಮನಿಸಿದ್ದಾರೆ. ಬಾಗಿಲು ತೆಗೆದು ನೋಡಿದರೆ ಮೇಜರ್ ಮೃತಪಟ್ಟಿರುವುದು ತಿಳಿದು ಬಂದಿತ್ತು.