Viral Video: ಜೆನ್ ಝೀ ಅಂದ್ರೆ ಸುಮ್ನೆ ಅಲ್ಲ; ಉಸಿರುಗಟ್ಟುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಬಾಲಕಿ
Timely Action By Teen Waitress: ಉಸಿರುಗಟ್ಟುತ್ತಿದ ವ್ಯಕ್ತಿಯನ್ನು ತನ್ನ ಸಮಯಪ್ರಜ್ಞೆಯಿಂದ ಪ್ರೌಢಶಾಲಾ ವಿದ್ಯಾರ್ಥಿನಿ ಹಾಗೂ ಪರಿಚಾರಿಕೆಯಾಗಿರುವ ಹದಿಹರೆಯದ ಹುಡುಗಿಯೊಬ್ಬಳು ರಕ್ಷಿಸಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

-

ವಾಷಿಂಗ್ಟನ್: ರೆಸ್ಟೋರೆಂಟ್‌ವೊಂದರಲ್ಲಿ (Restaurant) ಉಸಿರುಗಟ್ಟುತ್ತಿದ ವ್ಯಕ್ತಿಯನ್ನು ತನ್ನ ಸಮಯಪ್ರಜ್ಞೆಯಿಂದ ಪ್ರೌಢಶಾಲಾ ವಿದ್ಯಾರ್ಥಿನಿ ಹಾಗೂ ಪರಿಚಾರಿಕೆಯಾಗಿರುವ ಹದಿಹರೆಯದ ಹುಡುಗಿಯೊಬ್ಬಳು ರಕ್ಷಿಸಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ. ಅಮೆರಿಕದ ಲೂಸಿಯಾನದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯದ ವಿಡಿಯೊ ವೈರಲ್ (Viral Video) ಆದ ನಂತರ ವಿದ್ಯಾರ್ಥಿನಿಯನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. ಮಾಸ್ ಬ್ಲಫ್‌ನಲ್ಲಿರುವ ಬುಡಾಟನ್ ಏಷ್ಯನ್ ಕ್ಯುಸಿನ್‌ನಲ್ಲಿ ಈ ಘಟನೆ ಸಂಭವಿಸಿದೆ. ಅಲ್ಲಿ ವಿದ್ಯಾರ್ಥಿನಿ-ಉದ್ಯೋಗಿ ಮ್ಯಾಡಿಸನ್ ಬ್ರೈಡೆಲ್ಸ್ ಎಂಬಾಕೆ ಉಸಿರುಗಟ್ಟುತ್ತಿದ್ದ ವ್ಯಕ್ತಿಯ ಮೇಲೆ ಹೈಮ್ಲಿಚ್ ವಿಧಾನವನ್ನು (Heimlich Maneuver) ಪ್ರದರ್ಶಿಸಿ ಜೀವವನ್ನು ಉಳಿಸಿದ್ದಾಳೆ.
ವೈರಲ್ ಆಗಿರುವ ವಿಡಿಯೊದ ಆರಂಭದಲ್ಲಿ ಮ್ಯಾಡಿಸನ್ ಹ್ಯಾಲೋವೀನ್ ಅಲಂಕಾರಗಳನ್ನು ನೇತುಹಾಕುವಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಈ ವೇಳೆ ಗ್ರಾಹಕರೊಬ್ಬರು ಉಸಿರಾಡಲು ಕಷ್ಟಪಡುತ್ತಿರುವುದನ್ನು ಅವಳು ಗಮನಿಸಿದಳು. ಯಾವುದೇ ಹಿಂಜರಿಕೆಯಿಲ್ಲದೆ ಕೂಡಲೇ ಆತನ ಪಕ್ಕಕ್ಕೆ ಧಾವಿಸಿದ ಬ್ರೈಡೆಲ್ಸ್, ಹೈಮ್ಲಿಚ್ ಕುಶಲತೆಯನ್ನು ಪ್ರದರ್ಶಿಸಿದಳು. ಕೆಲವೇ ಕ್ಷಣಗಳಲ್ಲಿ, ಆ ವ್ಯಕ್ತಿ ಚೇತರಿಸಿಕೊಂಡಿದ್ದಾನೆ.
ಸಿಬ್ಬಂದಿ ಮತ್ತು ಉಳಿದ ಗ್ರಾಹಕರು ಆಶ್ಚರ್ಯದಿಂದ ನೋಡುತ್ತಿದ್ದರೂ, ಏನೂ ಆಗಿಲ್ಲ ಎಂಬಂತೆ ಮ್ಯಾಡಿಸನ್ ಸ್ವಲ್ಪ ಸಮಯದ ನಂತರ ಹೊರಟುಹೋಗಿದ್ದಾಳೆ. ಬ್ರೈಡೆಲ್ಸ್‌ನ ಈ ಸಮಯಪ್ರಜ್ಞೆ ವೈರಲ್ ಆಗಿದ್ದು, ಆಕೆಯ ಧೈರ್ಯ ಮತ್ತು ಹೃದಯವೈಶಾಲ್ಯತೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ನಾನು ನನ್ನನ್ನು ಹೀರೋ ಎಂದು ಭಾವಿಸುವುದಿಲ್ಲ ಎಂದು ಬ್ರೈಡೆಲ್ಸ್ ತಿಳಿಸಿದ್ದಾರೆ. ನಾನು ಯಾರಿಗಾದರೂ ಹಾಗೆ ಮಾಡುತ್ತಿದ್ದೆ ಎಂದು ವಿನಯಪೂರ್ವಕವಾಗಿ ಹೇಳಿದ್ದಾರೆ.
ವಿಡಿಯೊ ವೀಕ್ಷಿಸಿ:
ಆಕೆ ಏನೂ ಆಗೇ ಇಲ್ಲದಂತೆ ಹೊರಟು ಹೋದಳು. ಬಹಳ ಒಳ್ಳೆಯ ಹುಡುಗಿ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಸಮಯಪ್ರಜ್ಞೆ ಮೆರೆದು ಗ್ರಾಹಕನ ಜೀವ ಉಳಿಸಿದ್ದಕ್ಕಾಗಿ ಅಭಿನಂದನೆಗಳು ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ. ವ್ಯಕ್ತಿ ಕೂಡ ಆಕೆಯ ಚಿಕಿತ್ಸೆ ವೇಳೆ ಸಹಕರಿಸಿದ್ದಾನೆ. ಇಬ್ಬರೂ ಅತ್ಯುತ್ತಮರು ಎಂದು ಮಗದೊಬ್ಬ ಬಳಕೆದಾರ ಹೇಳಿದ್ದಾರೆ. ಆಕೆ ಆತನ ಜೀವ ಉಳಿಸಿದಳು. ದೇವರು ಅವಳನ್ನು ಆಶೀರ್ವದಿಸಲಿ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Viral Video: ಬಾಳಾ ಠಾಕ್ರೆ ತಂದೆಯ ಪುಸ್ತಕವನ್ನು ಎಸೆದ ದಾದಿಯರು ಎಸೆದ ನರ್ಸ್‌ಗಳು; ವಿಡಿಯೊ ವೈರಲ್, ಹೊಸ ವಿವಾದ
ಹೈಮ್ಲಿಚ್ ವಿಧಾನ ಎಂದರೇನು? ಅದನ್ನು ಯಾವಾಗ ಮಾಡಬೇಕು?
ಹೈಮ್ಲಿಚ್ ವಿಧಾನವು ಉಸಿರಾಟದ ಮಾರ್ಗದಲ್ಲಿ ತಡೆ ಬಿದ್ದಿರುವಾಗ, ಆ ವ್ಯಕ್ತಿಯ ಹೊಟ್ಟೆ ಮೇಲೆ ಒತ್ತಡ ಹಾಕಿ ತಡೆ ಇರುವ ವಸ್ತುವನ್ನು ಹೊರತೆಗೆಯುವ ಪ್ರಥಮ ಚಿಕಿತ್ಸೆ ವಿಧಾನವಾಗಿದೆ. ಈ ವಿಧಾನವನ್ನು ಸಾಮಾನ್ಯವಾಗಿ ಮೂಲಭೂತ ಜೀವ ರಕ್ಷಣೆ (Basic Life Support) ಮತ್ತು ಉನ್ನತ ಹೃದಯ ಸಂಬಂಧಿ ಜೀವ ರಕ್ಷಣೆ ತರಗತಿಗಳಲ್ಲಿ (Advanced Cardiac Life Support) ಕಲಿಸಲಾಗುತ್ತದೆ.