ಲಂಡನ್: ಇಂಗ್ಲೆಂಡ್ ರಾಜಮನೆತನದ ಸಸೆಕ್ಸ್‌ನ ಡಚೆಸ್ ಮೇಘನ್ ಮಾರ್ಕೆಲ್ (Meghan Markle) ತಮ್ಮ ಮಗಳು ಲಿಲಿಬೆಟ್‌ನ (Lilibet) ಜನ್ಮದಿನದ ಆಚರಣೆಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಗರ್ಭಿಣಿಯಾಗಿದ್ದಾಗ ತಾವು ಮತ್ತು ಪ್ರಿನ್ಸ್ ಹ್ಯಾರಿ (Prince Harry) ಡ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಲಿಲಿಬೆಟ್‌ನ ನಾಲ್ಕನೇ ಜನ್ಮದಿನಕ್ಕೆ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ, ಮೇಘನ್ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲಿ ‘ಟ್ವೆರ್ಕಿಂಗ್’ ಮಾಡುತ್ತಿದ್ದರೆ, ಹ್ಯಾರಿ ಹೂಡಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ.
‘ದಿ ಬೇಬಿ ಮಾಮ್ಮಾ ಡ್ಯಾನ್ಸ್’ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ಈ ವಿಡಿಯೋ ನಾಲ್ಕು ವರ್ಷಗಳ ಹಿಂದಿನದು ಎಂದು ಮೇಘನ್ ಬರೆದಿದ್ದಾರೆ. “ನಮ್ಮ ಇಬ್ಬರೂ ಮಕ್ಕಳು ಒಂದು ವಾರ ತಡವಾಗಿ ಜನಿಸಿದರು. ಖಾರದ ಆಹಾರ, ಓಡಾಟ, ಮತ್ತು ಆಕ್ಯುಪಂಕ್ಚರ್ ಕೆಲಸ ಮಾಡದಿದ್ದಾಗ, ಕೊನೆಗೆ ಒಂದೇ ಒಂದು ಮಾರ್ಗ ಉಳಿಯಿತು!” ಎಂದು ಕ್ಯಾಪ್ಷನ್‌ನಲ್ಲಿ ತಿಳಿಸಿದ್ದಾರೆ. ಲಿಲಿಬೆಟ್‌ನ ನವಜಾತ ಶಿಶುವಿನ ಫೋಟೋ ಮತ್ತು ನೀರಿನ ಬಳಿ ಒಟ್ಟಿಗಿರುವ ಚಿತ್ರವನ್ನೂ ಆಕೆ ಹಂಚಿಕೊಂಡಿದ್ದಾರೆ. “ನಮ್ಮ ಸುಂದರ ಬಾಲಕಿಗೆ ಜನ್ಮದಿನದ ಶುಭಾಶಯ! ನಾಲ್ಕು ವರ್ಷಗಳ ಹಿಂದೆ ಆಕೆ ನಮ್ಮ ಲೈಫ್ ಅಲ್ಲಿ ಬಂದಳು, ಪ್ರತಿ ದಿನವೂ ಸಂತೋಷ ತುಂಬಿದೆ” ಎಂದು ಬರೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟೀಕೆ
ಈ ಖಾಸಗಿ ಕ್ಷಣವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇವರನ್ನು ಇನ್ನಷ್ಟು ದ್ವೇಷಿಸಲು ಸಾಧ್ಯವಿಲ್ಲ ಎಂದುಕೊಂಡಿದ್ದೆ ಎಂದು ಒಬ್ಬರು ಬರೆದಿದ್ದು, “ಇವರಿಬ್ಬರೂ ಸಂಪೂರ್ಣ ಮೂರ್ಖರು. ಇದನ್ನು ಏಕೆ ಪೋಸ್ಟ್ ಮಾಡಬೇಕಿತ್ತು? ಖಾಸಗಿಯಾಗಿಡಿ!” ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಗರ್ಭಾವಸ್ಥೆಯ ಸತ್ಯತೆಯ ಬಗ್ಗೆ ಸಂದೇಹ
ಕೆಲವರು ಮೇಘನ್‌ರ ಗರ್ಭಾವಸ್ಥೆಯ ಸತ್ಯತೆಯನ್ನೇ ಪ್ರಶ್ನಿಸಿದ್ದಾರೆ. “ನಿಜವಾಗಿ ಗರ್ಭಿಣಿಯಂತೆ ಅನ್ನಿಸುತ್ತಿಲ್ಲ . 9 ತಿಂಗಳ ಗರ್ಭಿಣಿಯಾಗಿ ಯಾರಾದರೂ ಡ್ಯಾನ್ಸ್ ಮಾಡುತ್ತಾರೆಯೇ?” ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ.ಅದು ನಿಜವಾದ ಗರ್ಭಿಣಿಯ ಹೊಟ್ಟೆ ಅಲ್ಲ. ಅವರು ಹಾಗೆ ತಿರುಗಾಡುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರ ಸಂದೇಹ ವ್ಯಕ್ತಪಡಿಸಿದ್ದಾನೆ.