ಬೆಂಗಳೂರು, ನ.14: ಕೈತುಂಬಾ ಸಂಬಳ ಬರುವ ಐಟಿ (IT job) ಕೆಲಸಗಳನ್ನು ಬಿಟ್ಟು ಸ್ವಂತ ಉದ್ಯಮ ಆರಂಭಿಸುವುದು ಅನೇಕರ ಕನಸಾಗಿರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಬೆಂಗಳೂರಿನ ದಂಪತಿಯೊಬ್ಬರು ತಮ್ಮ ಐಟಿ ಉದ್ಯೋಗಗಳಿಗೆ ರಾಜೀನಾಮೆ ನೀಡಿ, ಆಹಾರ ಕ್ಷೇತ್ರದಲ್ಲಿ (Food Business) ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉದ್ಯಮ ಆರಂಭಿಸಿದ ಕೇವಲ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ 55,000ಕ್ಕೂ ಹೆಚ್ಚು ಊಟಗಳನ್ನು (Meals) ಗ್ರಾಹಕರಿಗೆ ತಲುಪಿಸುವ ಮೂಲಕ 56 ಲಕ್ಷ ರೂಪಾಯಿ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ದಿನಪೂರ್ತಿ ಕೆಲಸ ಮಾಡಿದ ನಂತರ, ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುವುದು ದಂಪತಿಗಳಿಗೆ ಕಷ್ಟಕರವೆನಿಸಿತ್ತು. ಹೊರಗಿನಿಂದ ಊಟವನ್ನು ಆರ್ಡರ್ ಮಾಡುವುದು ಸುಲಭದ ಆಯ್ಕೆಯಾಗಿದ್ದರೂ, ಅವರು ಆರೋಗ್ಯಕರ, ಕೈಗೆಟಕುವ ದರದ ಮತ್ತು ಮನೆಯಲ್ಲಿ ತಯಾರಿಸಿದ ಊಟವನ್ನು ಬಯಸಿದ್ದರು. ತಮ್ಮ ಅಗತ್ಯಕ್ಕೆ ತಕ್ಕಂತೆ ಊಟ ಸಿಗದಿದ್ದಾಗ ಅಂತಹ ಒಂದು ಸೇವೆಯನ್ನು ತಾವೇ ಪ್ರಾರಂಭಿಸಲು ನಿರ್ಧರಿಸಿದರು. ಇಂದಿನ ವೇಗದ ಜೀವನಶೈಲಿಯಲ್ಲಿ ಮನೆಯ ಅಡುಗೆಯ ರುಚಿ ಮತ್ತು ಗುಣಮಟ್ಟದ ಆಹಾರಕ್ಕೆ ಇರುವ ಬೇಡಿಕೆಯನ್ನು ಸರಿಯಾಗಿ ಗುರುತಿಸಿದ ಈ ದಂಪತಿ, ತಮ್ಮ ಉದ್ಯಮವನ್ನು ಅತ್ಯಂತ ಯೋಜನಾಬದ್ಧವಾಗಿ ಕಟ್ಟಿದ್ದಾರೆ. ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಶುರುವಾದ ಇವರ ಪ್ರಯತ್ನ, ಗ್ರಾಹಕರ ಉತ್ತಮ ಪ್ರತಿಕ್ರಿಯೆ ಮತ್ತು ಗುಣಮಟ್ಟದ ಸೇವೆಯಿಂದಾಗಿ ಅಲ್ಪಾವಧಿಯಲ್ಲೇ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.
ಸಣ್ಣ ಬಂಡವಾಳದಿಂದ ಆರಂಭವಾದ ಉದ್ಯಮ
ದಿಯಾ ಮತ್ತು ಆದಿತ್ಯ ಬೆಂಗಳೂರಿನ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಪೊರೇಟ್ ವಲಯದಲ್ಲಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ನಂತರ, ತಮ್ಮ ಉದ್ಯೋಗದ ಜೊತೆಗೆ ಸರಿಯಾದ ಆಹಾರ ಕ್ರಮವನ್ನು ಪಾಲಿಸುವುದು ಅವರಿಗೆ ಕಷ್ಟವಾಗಿತ್ತು. ಕೆಲಸದ ಒತ್ತಡದಿಂದಾಗಿ ಅಡುಗೆ ಮಾಡಲು ಸಮಯ ಸಿಗದೆ, ಆನ್ಲೈನ್ ಮೂಲಕ ಒಳ್ಳೆಯ ಮನೆ ಊಟವೂ ಸಿಗದೆ ಪರದಾಡಿದ್ದೆವು ಎಂದು ಆದಿತ್ಯ ಹೇಳುತ್ತಾರೆ. ಇದರಿಂದ ಬೇಸತ್ತ ದಂಪತಿ ತಾವೇ ಒಂದು ಉತ್ತಮ ಮನೆ ಊಟದ ಸೇವೆಯನ್ನು ಶುರುಮಾಡಲು ನಿರ್ಧರಿಸಿದ್ದಾರೆ.
ಇವರು ಸೆಪ್ಟೆಂಬರ್ 2024 ರಲ್ಲಿ 15 ಲಕ್ಷ ರೂಪಾಯಿಗಳ ಹೂಡಿಕೆಯೊಂದಿಗೆ ವೆಲ್ಫೆಡ್ ಅನ್ನು ಪ್ರಾರಂಭಿಸಿದರು. ಮೆನುವಿನಲ್ಲಿ ದಾಲ್ ಆಲೂ ಗೋಭಿ, ಜೋಳ ರೊಟ್ಟಿ, ಚಿಕನ್ ಮತ್ತು ಚೋಲೆ ಚಾಟ್ನಂತಹ ಸಾಕಷ್ಟು ಆಯ್ಕೆಗಳನ್ನು ಇಟ್ಟಿದ್ದಾರೆ. ಇದು ಪನೀರ್, ತೋಫು, ಸೋಯಾ ಮತ್ತು ಚಿಕನ್ನಂತಹ ಪ್ರೋಟೀನ್ ಮೂಲಗಳಿರುವ ಆಹಾರವನ್ನು ಸೇರಿಸಿದ್ದಾರೆ. ಮೆನುವಿನಲ್ಲಿ ಇತರ ಆಯ್ಕೆಗಳನ್ನು ಹುಡುಕುವ ಗ್ರಾಹಕರಿಗೆ ಬಿರಿಯಾನಿಗಳು ಮತ್ತು ಇಂಡೋ-ಚೈನೀಸ್ ತಿಂಡಿಗಳು ಕೂಡ ಲಭ್ಯವಿದೆ. ದಂಪತಿಗಳು ಊಟದ ಪ್ಯಾಕೇಜಿಂಗ್ಗೆ ಪ್ಲಾಸ್ಟಿಕ್ ಅಥವಾ ಇತರೆ ಬಿಸಾಡಬಹುದಾದ ಬಾಕ್ಸ್ಗಳ ಬದಲಿಗೆ ಮರುಬಳಕೆ ಮಾಡಬಹುದಾದ ಊಟದ ಬಾಕ್ಸ್ಗಳನ್ನು ಆಯ್ಕೆ ಮಾಡಿದರು.
ವೆಲ್ಫೆಡ್ ಪ್ರಸ್ತುತ ಮೂರು ಚಂದಾದಾರಿಕೆ ಯೋಜನೆಗಳನ್ನು ನೀಡುತ್ತದೆ. ಇದರ ಮೂರು ದಿನಗಳ ಪ್ರಾಯೋಗಿಕ ಯೋಜನೆಗೆ ಪ್ರತಿ ಊಟಕ್ಕೆ ರೂ. 289 ವೆಚ್ಚವಾಗುತ್ತದೆ. ಎರಡು ವಾರಗಳ ಚಂದಾದಾರಿಕೆಗೆ ಪ್ರತಿ ಊಟಕ್ಕೆ ರೂ. 279 ವೆಚ್ಚವಾಗುತ್ತದೆ, ಆದರೆ ಮಾಸಿಕ ಯೋಜನೆಗೆ ಪ್ರತಿ ಊಟಕ್ಕೆ ರೂ. 269 ಬೆಲೆಯಿದೆ.
ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕಚ್ಚಿಕೊಂಡು ರಸ್ತೆಯಲ್ಲಿ ಓಡಿದ ಬೀದಿ ನಾಯಿ! ಎದೆ ಝಲ್ಲೆನಿಸುವ ವಿಡಿಯೊ ವೈರಲ್
ಯಶಸ್ಸಿನ ಹಿಂದಿರುವ ಗುಟ್ಟು
ಸಾಫ್ಟ್ವೇರ್ ಕ್ಷೇತ್ರದಲ್ಲಿದ್ದ ತಮ್ಮ ತಾಂತ್ರಿಕ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಆಹಾರ ಉದ್ಯಮದಲ್ಲಿ ಅಳವಡಿಸಿಕೊಂಡಿರುವುದು ಇವರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ, ರುಚಿ ಹಾಗೂ ಸಮಯಕ್ಕೆ ಸರಿಯಾಗಿ ವಿತರಣೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ, ಗ್ರಾಹಕರಿಂದ ನಿರಂತರ ಬೇಡಿಕೆ ಬರಲಾರಂಭಿಸಿತು. ಕೇವಲ ಒಂಬತ್ತು ತಿಂಗಳಲ್ಲಿ 55 ಸಾವಿರ ಊಟಗಳನ್ನು ಪೂರೈಸಿ 56 ಲಕ್ಷ ರೂ. ಆದಾಯ ಗಳಿಸಿರುವ ಇವರ ಸಾಧನೆಯ ಕಥೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ದಂಪತಿಯ ಸಾಧನೆ ಮತ್ತು ಶ್ರಮಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸ್ವಂತ ಉದ್ಯಮ ಆರಂಭಿಸಲು ಬಯಸುವ ಯುವಜನತೆಗೆ ಇವರ ಯಶಸ್ಸು ದೊಡ್ಡ ಸ್ಫೂರ್ತಿಯಾಗಿದೆ.