ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಸ್ಟ್ರೇಲಿಯಾದಲ್ಲಿ ಮತ್ತೆ ಜನಾಂಗೀಯ ದ್ವೇಷದ ಕಿಡಿ: ಊಟ ಮಾಡುತ್ತಿದ್ದ ಭಾರತೀಯರ ಮೇಲೆ ಮೊಟ್ಟೆ ಎಸೆದು ದಾಳಿ! ವಿಡಿಯೋ ನೋಡಿ

Viral: ಆಸ್ಟ್ರೇಲಿಯಾದ ರಸ್ತೆಬದಿಯ ಫುಡ್ ಟ್ರಕ್ ಬಳಿ ಕುಟುಂಬ ಸಮೇತ ಆಹಾರ ಸೇವಿಸುತ್ತಿದ್ದ ಭಾರತೀಯರ ಗುಂಪಿನ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದು ದಾಳಿ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಘಟನೆಯ ದೃಶ್ಯವನ್ನು ಮಹಿಳೆಯೊಬ್ಬರು ಸೆರೆಹಿಡಿದಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ. ವಿದೇಶದಲ್ಲಿ ಭಾರತೀಯರ ವಿರುದ್ಧ ನಡೆಯುತ್ತಿರುವ ಜನಾಂಗೀಯ ದ್ವೇಷದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅನಿವಾಸಿ ಭಾರತೀಯರ ಸುರಕ್ಷತೆಯ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಮೊಟ್ಟೆ ಎಸೆದು ದಾಳಿ ವಿಡಿಯೋ ವೈರಲ್‌

ಮೆಲ್ಬೋರ್ನ್ (ಆಸ್ಟ್ರೇಲಿಯಾ) ನ.23: ಆಸ್ಟ್ರೇಲಿಯಾದಲ್ಲಿ ಮೆಲ್ಬೋರ್ನ್ ನಗರದಲ್ಲಿ (Australia) ಭಾರತೀಯ ಮೂಲದವರ ಗುಂಪೊಂದನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಮೊಟ್ಟೆ ಎಸೆದಿರುವ ಘಟನೆ ವರದಿಯಾಗಿದೆ. ರಸ್ತೆಬದಿಯ ಫುಡ್ ಟ್ರಕ್ ಬಳಿ ಮಹಿಳೆಯರು ಮತ್ತು ವೃದ್ಧರನ್ನೊಳಗೊಂಡ ಭಾರತೀಯ ಕುಟುಂಬವೊಂದು ತಮ್ಮ ಪಾಡಿಗೆ ತಾವು ಕುಳಿತು ಊಟ ಮಾಡುತ್ತಿದ್ದಾಗ ಈ ಅನಿರೀಕ್ಷಿತ ದಾಳಿ ನಡೆದಿದೆ. ಘಟನೆಯ ವಿಡಿಯೋವನ್ನು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು (Viral Video) ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಅಂಜಲಿ ಶರ್ಮಾ ಎಂಬುವವರು ಈ ಘಟನೆಯನ್ನು ಕಣ್ಣಾರೆ ಕಂಡು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಕುಟುಂಬವೊಂದು ಫುಡ್‌ ಟ್ರಕ್‌ ಬಳಿ ನಿಂತು ಊಟ ಮಾಡುತ್ತಿದ್ದ ವೇಳೆ, ಪಿಕ್‌ಅಪ್ ವಾಹನದಲ್ಲಿ ಬಂದ ಕೆಲವು ಕಿಡಿಗೇಡಿಗಳು ಏಕಾಏಕಿ ಅವರ ಮೇಲೆ ಮೊಟ್ಟೆಗಳನ್ನು ಎಸೆದು, ವಾಹನ ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಡಿಯೋ ನೋಡಿ:



"ನನಗೆ ನಿಜಕ್ಕೂ ತುಂಬಾ ಬೇಸರವಾಯಿತು"

ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಅಂಜಲಿ ಶರ್ಮಾ, "ಅದನ್ನು ನೋಡಿ ನನಗೆ ನಿಜಕ್ಕೂ ತುಂಬಾ ಬೇಸರವಾಯಿತು. ಆ ಗುಂಪಿನಲ್ಲಿ ಸಾಕಷ್ಟು ಮಹಿಳೆಯರು ಮತ್ತು ವಯಸ್ಸಾದವರು ಇದ್ದರು. ಅವರು ಯಾರಿಗೂ ತೊಂದರೆ ಕೊಡದೆ ಸುಮ್ಮನೆ ಊಟ ಮಾಡುತ್ತಿದ್ದರು. ಆದರೆ ಈ ರೀತಿ ಅವಮಾನ ಅಥವಾ ಕಿರುಕುಳ ನೀಡಿರುವುದು ಎಷ್ಟು ಸರಿ" ಎಂದು ಬರೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಅನೇಕರು ಈ ಕೃತ್ಯವನ್ನು ಜನಾಂಗೀಯ ದ್ವೇಷ ಎಂದು ತೀವ್ರವಾಗಿ ಖಂಡಿಸಿದ್ದು, ವೃದ್ಧರು ಮತ್ತು ಕುಟುಂಬಸ್ಥರ ಮೇಲೆ ಇಂತಹ ದಾಳಿ ನಡೆಸುವುದು ಅಮಾನವೀಯ ಎಂದು ಆಕ್ರೋಶ ಹೊರಹಾಕಿದ್ದಾರೆ. ಕಿಡಿಗೇಡಿಗಳ ವಿರುದ್ಧ ಆಸ್ಟ್ರೇಲಿಯಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.