ತಿರುವನಂತಪುರ: ಇತ್ತೀಚಿನ ವರ್ಷಗಳಲ್ಲಿ ಬೀದಿಬದಿ ಆಹಾರ ಉದ್ಯಮವು (street food) ಅನೇಕರಿಗೆ ಬಾಗಿಲು ತೆರೆದಿದೆ. ಇದೀಗ ಕೇರಳ (Kerala) ಮೂಲದ ಡೆನ್ನಿ ಬೇಬಿ ಮತ್ತು ಪಾರ್ವತಿ ಜಯಕುಮಾರ್ ದಂಪತಿಗಳು ಕೂಡ ಇದರಲ್ಲಿ ಯಶಸ್ಸು ಕಂಡಿದ್ದಾರೆ. ತಮ್ಮ ನರ್ಸಿಂಗ್ ಕೆಲಸಗಳನ್ನು ತೊರೆದು ಬೀದಿ ಬದಿ ವ್ಯಾಪಾರಿಗಳಾಗಿದ್ದಾರೆ. ಬಿಸಿ ಬಿಸಿ ಬಜ್ಜಿ, ಚಹಾ, ಕಾಫಿ ಮತ್ತು ಫ್ರೈಗಳನ್ನು ಮಾರಾಟ ಮಾಡುತ್ತಾರೆ. ಕೇವಲ ಒಂದು ತಿಂಗಳ ಹಿಂದೆ, ತಮಗೆ ಬರುತ್ತಿರುವ ವೇತನ ಎಲ್ಲಷ್ಟೂ ಸಾಲುತ್ತಿಲ್ಲ ಎಂದು ಅರಿವಾದ ಈ ದಂಪತಿ, ಬೀದಿ ಬದಿ ಆಹಾರ ಮಾಡಲು ಮುಂದಾದ್ರು.
ಕೇರಳದ ಆಲಪ್ಪುಳದ ಚೆರ್ತಲಾದಲ್ಲಿರುವ ಎಕ್ಸ್-ರೇ ಜಂಕ್ಷನ್‌ನಲ್ಲಿ ಒಂದು ಸಣ್ಣ ಆಹಾರ ಬಂಡಿಯನ್ನು ಈ ದಂಪತಿ ಸ್ಥಾಪಿಸಿದರು. ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಅಧ್ಯಯನಗಳಲ್ಲಿ ಡಿಪ್ಲೊಮಾ ಪಡೆದಿದ್ದರೂ, ಇಬ್ಬರೂ ಅತೃಪ್ತರಾಗಿದ್ದರು. ಯಾಕೆಂದರೆ ತಿಂಗಳಿಗೆ ಕೇವಲ 5,000 ರೂ. ಮಾತ್ರ ಗಳಿಸುತ್ತಿದ್ದರು. ಹೀಗಾಗಿ ಅವರು ವಿಭಿನ್ನ ಕೆಲಸ ಮಾಡಲು ಮುಂದಾದರು. ಇದೀಗ ತಮ್ಮದೇ ಆದ ಆಹಾರ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇವರ ಸ್ಟೋರಿ ಇದೀಗ ಸಾಮಾಜಿಕ ಮಾಧ್ಯದಲ್ಲಿ ವೈರಲ್ (Viral News) ಆಗಿದೆ.
ಜೀವನ ಬದಲಾಗಿದ್ದು ಹೇಗೆ?
“ತಳ್ಳ ಬಂಡಿಯನ್ನು ಖರೀದಿಸಿ ಕೇವಲ ಒಂದು ತಿಂಗಳಾಗಿದೆ. ನಮ್ಮ ಮನೆ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ನಾವು ಮಧ್ಯಾಹ್ನ 3 ಗಂಟೆಗೆ ತೆರೆದು ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತೇವೆ. ಹತ್ತಿರದ ಅಂಗಡಿಯವರು, ಕಾರ್ಮಿಕರು ಮತ್ತು ಗ್ರಾಹಕರು ಸಹ ನಮಗೆ ದೊಡ್ಡ ಬೆಂಬಲ ನೀಡಿದ್ದಾರೆ. ಕಾರ್ಟ್ ಸ್ಥಾಪಿಸಲು ನಮಗೆ ಸಹಾಯ ಮಾಡಿದವರು ಅವರೇ. ಹತ್ತಿರದಲ್ಲಿ ಪಾನೀಯ ಮಳಿಗೆ ಇದೆ. ಹಾಗಂತ ನಾವು ಇಲ್ಲಿ ಯಾವುದೇ ತೊಂದರೆಯನ್ನು ಎದುರಿಸಿಲ್ಲ” ಎಂದು ಪಾರ್ವತಿ ಹೇಳಿದರು.
ಈ ಹಿಂದೆ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ, ನಮಗೆ ಬರುತ್ತಿದ್ದ ಸಂಬಳ ಏನಕ್ಕೂ ಸಾಲುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಯೊಂದರಲ್ಲಿ ತಿಂಗಳಿಗೆ ಕೇವಲ ರೂ.5000ಗೆ ಕೆಲಸ ಮಾಡುತ್ತಿದ್ದೆವು. ದಿನಗೂಲಿ ಕಾರ್ಮಿಕ ಕೂಡ ಇದಕ್ಕಿಂತ ಹೆಚ್ಚು ದುಡಿಯುತ್ತಾರೆ. ಅವರು ಪ್ರತಿದಿನಕ್ಕೆ 1000 ರೂ.ಗಳಷ್ಟು ದುಡಿಯುತ್ತಾರೆ. ಹೀಗಾಗಿ ಆಸ್ಪತ್ರೆ ಕೆಲಸವನ್ನು ತೊರೆಯಲು ನಿರ್ಧರಿಸಿದ್ದಾಗಿ ಡೆನ್ನಿ ಬೇಬಿ ತಿಳಿಸಿದರು.
ಎದುರಿಸಿದ ಸವಾಲುಗಳು
ತಮ್ಮ ಕೆಲಸವನ್ನು ತೊರೆದ ನಂತರ ಈ ದಂಪತಿ ಆಹಾರ ಬಂಡಿಯಿಂದ ಪ್ರತಿದಿನ 2000 ದಿಂದ 3000 ರೂ.ಗಳಷ್ಟು ದುಡಿಯುತ್ತಾರೆ. ಸ್ಥಳೀಯರು ತಮಗೆ ತುಂಬಾ ಸಹಾಯ ಮಾಡುತ್ತಾರೆ ಎಂದು ಪಾರ್ವತಿ ತಿಳಿಸಿದರು. ಅಲ್ಲದೆ ಫುಡ್ ಕಾರ್ಟ್ ಅನ್ನು ತಮ್ಮ ಸ್ನೇಹಿತರಿಂದ 50,000 ರೂ.ಗಳಿಗೆ ಖರೀದಿಸಿದ್ದಾರೆ. ಆದರೆ, ಮೊದಮೊದಲಿಗೆ ಅಡುಗೆ ತಯಾರಿಸುವಾಗ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಸ್ಥಳೀಯರು, ಅಡುಗೆ ಸಲಹೆ, ರೆಸಿಪಿ ಇತ್ಯಾದಿ ಬಗ್ಗೆ ಸಲಹೆ ನೀಡಿದ್ರು. ನಿಧಾನವಾಗಿ ಅಡುಗೆಯಲ್ಲಿ ಸುಧಾರಿಸಿ, ಇದೀಗ ಚೆನ್ನಾಗಿ ಅಡುಗೆ ಮಾಡಲು ಕಲಿತಿದ್ದಾಗಿ ತಿಳಿಸಿದ್ದಾರೆ.
ಪ್ರಸ್ತುತ ಮೆನು ಗ್ರಾಹಕರಲ್ಲಿ ಜನಪ್ರಿಯವಾಗಿದ್ದರೂ, ದೋಸೆಯಂತಹ ಖಾದ್ಯಗಳನ್ನು ಮಾಡಲು ಬಯಸಿದ್ದಾಗಿ ಹೇಳಿದರು. ಆದರೆ, ಅದನ್ನು ತಯಾರಿಸಲು ಹೆಚ್ಚಿನ ಸಹಾಯ ಬೇಕಾಗುತ್ತದೆ. ಇದೀಗ ಆಹಾರ ಬಂಡಿ ಪ್ರಾರಂಭವಾಗಿ ಕೇವಲ 1 ತಿಂಗಳು ಆಗಿದೆಯಷ್ಟೇ. ಹೈವೇ ರಸ್ತೆ ಕೂಡ ನಿರ್ಮಾಣವಾಗುತ್ತಿದೆ. ಇದರಿಂದ ತಮ್ಮ ಆಹಾರಬಂಡಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಬಹುದು. ಇದೀಗ ಮಳೆಗಾಲ ಮುಗಿಯುತ್ತಾ ಬಂದಿದ್ದು, ಇನ್ನೂ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆಯಿದೆ ಎಂದು ದಂಪತಿ ತಿಳಿಸಿದ್ದಾರೆ.
ದಂಪತಿಯ ಲವ್ ಸ್ಟೋರಿ
ಡೆನ್ನಿ ಬೇಬಿ ಮತ್ತು ಪಾರ್ವತಿ ಜಯಕುಮಾರ್ ಅವರು ಕೊಟ್ಟಾಯಂನಲ್ಲಿ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದಾಗ ಪರಸ್ಪರ ಪರಿಚಯವಾಯಿತು. ಅಧ್ಯಯನ ಮುಗಿದ ಕೂಡಲೇ ಮದುವೆಯಾಗಲು ನಿರ್ಧರಿಸಿದರು. ಡೆನ್ನಿ ತಮ್ಮ ಉದ್ಯೋಗವನ್ನು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಾರಂಭಿಸಿದರು. ಪಾರ್ವತಿ ಈ ವೇಳೆಗೆ ಮಲಪ್ಪುರಂನಲ್ಲಿ ತರಬೇತಿ ಪಡೆಯುತ್ತಿದ್ದರು. ಬಳಿಕ ತೆಲಂಗಾಣಕ್ಕೆ ತನ್ನ ಪತಿಯಿದ್ದಲ್ಲಿಗೆ ಪ್ರಯಾಣಿಸಿದರು. ಮೊದಲಿಗೆ ಇಬ್ಬರ ಕುಟುಂಬಸ್ಥರೂ ಇವರ ಮದುವೆಗೆ ಸಹಕಾರ ತೋರಿರಲಿಲ್ಲ. ನಿಧಾನವಾಗಿ ಇವರಿಬ್ಬರ ಸಂಬಂಧವನ್ನು ಸ್ವೀಕರಿಸಿದ್ದಾರೆ.