ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Self Harming: ಮುದ್ದಿನ ಬೆಕ್ಕು ಸತ್ತಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ 35 ವರ್ಷದ ಪೂಜಾ ಎಂಬ ಮಹಿಳೆ ತಾನು ಸಾಕಿದ ಪ್ರೀತಿಯ ಬೆಕ್ಕಿನ ಸಾವನ್ನು ಸಹಿಸಲಾಗದೇ ಅದು ಸತ್ತ ಮೂರನೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಕ್ಕು ಸತ್ತ ನಂತರ ಮೂರು ದಿನಗಳವರೆಗೆ ಅದರ ದೇಹವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದ ಪೂಜಾ ಕೊನೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮುದ್ದಿನ ಬೆಕ್ಕು ಸತ್ತಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Profile pavithra Mar 3, 2025 6:27 PM

ಲಖನೌ: ಕೆಲವರಿಗೆ ನಾಯಿ, ಬೆಕ್ಕುಗಳೆಂದರೆ ಪಂಚಪ್ರಾಣ. ಮಗುವಿಗಿಂತಲೂ ಹೆಚ್ಚಾಗಿ ಅವುಗಳನ್ನು ಪ್ರೀತಿಸುತ್ತಾರೆ. ಆ ಪ್ರಾಣಿಗಳು ಕೂಡ ತನ್ನನ್ನು ಸಾಕಿದ ಮಾಲೀಕನಿಗಾಗಿ ಜೀವ ಬಿಡಲು ಸಹ ಹಿಂದೆ-ಮುಂದೆ ನೋಡುವುದಿಲ್ಲ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಇತ್ತೀಚೆಗೆ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಇಲ್ಲಿನ 35 ವರ್ಷದ ಮಹಿಳೆಯೊಬ್ಬಳು ತಾನು ಸಾಕಿದ ಪ್ರೀತಿಯ ಬೆಕ್ಕಿನ ಸಾವನ್ನು ಸಹಿಸಿಕೊಳ್ಳಲಾಗದೆ ಅದು ಸತ್ತ ಮೂರನೇ ದಿನಕ್ಕೆ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಬೆಕ್ಕು ಸತ್ತ ಮೂರು ದಿನಗಳವರೆಗೂ ಆಕೆ ಅದನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಳು. ಕೊನೆಗೆ ಆಕೆಯೂ ಸಾವಿಗೆ ಶರಣಾಗಿದ್ದಾಳೆ.

ಹಸನ್ಪುರ ಪಟ್ಟಣದ ರಾಹ್ರಾ ರಸ್ತೆಯಲ್ಲಿರುವ ಶಿವ ದೇವಾಲಯದ ಬಳಿ ವಾಸಿಸುತ್ತಿದ್ದ ಪೂಜಾ ಒಂದು ಬೆಕ್ಕಿನ ಮರಿಯನ್ನು ಪ್ರೀತಿಯಿಂದ ಸಾಕಿದ್ದಳು. ಆದರೆ ಇತ್ತೀಚೆಗೆ ಅದು ಇದ್ದಕ್ಕಿದ್ದಂತೆ ಸಾವನ್ನಪ್ಪಿದೆ. ಈ ಘಟನೆಯನ್ನು ಸಹಿಸಲಾಗದ ಪೂಜಾ ಕೂಡ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬ ಸದಸ್ಯರ ಪ್ರಕಾರ, ಪೂಜಾ ಬೆಕ್ಕು ಸತ್ತ ನಂತರ ಮೂರು ದಿನಗಳವರೆಗೆ ಅದರ ದೇಹವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಳು.

ಪೂಜಾ ಹೆಚ್ಚಿನ ಸಮಯವನ್ನು ಅವಳ ಬೆಕ್ಕಿನ ಜತೆಯಲ್ಲಿಯೇ ಕಳೆಯುತ್ತಿದ್ದಳು ಎಂದು ಸಂಬಂಧಿಕರು ಬಹಿರಂಗಪಡಿಸಿದ್ದಾರೆ. ಅವಳು ಯಾವಾಗಲೂ ಬೆಕ್ಕಿನೊಂದಿಗೆ ತಿನ್ನುವುದು, ಕುಡಿಯುವುದು ಮಾಡುತ್ತಿದ್ದಳು. ಜತೆಗೆ ಅದರೊಂದಿಗೇ ಮಲಗುತ್ತಿದ್ದಳಂತೆ. ಬೆಕ್ಕು ಇಲ್ಲದ ತನ್ನ ಜೀವನವನ್ನು ಊಹಿಸಲು ಸಾಧ್ಯವಾಗದೇ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಅಧಿಕಾರಿಗಳು ಮೃತ ದೇಹವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಶುರುಮಾಡಿದ್ದಾರೆ.

ಹುಲಿಯ ದಾಳಿಯಿಂದ ಮಾಲೀಕನನ್ನು ರಕ್ಷಿಸಿ ಪ್ರಾಣ ತೆತ್ತ ಶ್ವಾನ

ಪ್ರಾಣಿ ಹಾಗೂ ಮನುಷ್ಯರ ನಡುವಿನ ಅನೋನ್ಯ ಸಂಬಂಧಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಮತ್ತೊಂದು ಘಟನೆ ವರದಿಯಾಗಿತ್ತು. ಮಧ್ಯ ಪ್ರದೇಶದ ಬಾಂಧವಗಡ್ ರಾಷ್ಟ್ರೀಯ ಉದ್ಯಾನವನದ ಬಳಿಯ ಭರ್ಹತ್ ಗ್ರಾಮದಲ್ಲಿ ಬೆಂಥೋ ಎಂಬ ಜರ್ಮನ್ ಶೆಫರ್ಡ್ ನಾಯಿಯೊಂದು ಹುಲಿಯ ದಾಳಿಯಿಂದ ತನ್ನ ಮಾಲೀಕ ರೈತ ಶಿವಂನನ್ನು ಕಾಪಾಡಿ ಪ್ರಾಣ ತ್ಯಾಗ ಮಾಡಿತ್ತು. ನಾಯಿಯ ಈ ನಿಸ್ವಾರ್ಥ ಕಾರ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ಶ್ವಾನ ಪ್ರಿಯರ ಕಣ್ಣಲ್ಲಿ ನೀರು ತರಿಸಿದೆ.

ಈ ಸುದ್ದಿಯನ್ನೂ ಓದಿ:Self Harming: ಮುದ್ದಿನ ನಾಯಿ ಸತ್ತಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಅದೂ ಅಲ್ಲದೇ ಇತ್ತೀಚೆಗೆ ಮುದ್ದಿನ ಸಾಕು ನಾಯಿಯೊಂದು ಸತ್ತಿದ್ದಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವಪುರದಲ್ಲಿ ನಡೆದಿತ್ತು. ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಅನಾರೋಗ್ಯದಿಂದ ಸಾವನ್ನಪ್ಪಿದ ತನ್ನ ಪ್ರೀತಿಯ ಜಮರ್ನ್ ಶೆಫರ್ಡ್ ನಾಯಿಯನ್ನು ನೋಡಿ ರಾಜಶೇಖ‌ರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಮಾದಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.