ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಇದಪ್ಪ ಮಾನವೀಯತೆ ಅಂದ್ರೆ; ಗಾಯಗೊಂಡ ಮಹಿಳೆಯನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಕಾನ್ಸ್‌ಟೇಬಲ್‌

ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಟ್ರಾಫಿಕ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರು ತಮ್ಮ ಬೆನ್ನಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಸದ್ಯ ಈ ವಿಚಾರ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪೊಲೀಸ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭೋಪಾಲ್‌: ಪೊಲೀಸರೆಂದರೆ ನಮ್ಮ ರಕ್ಷಣೆಗೆ ಇರುವವರು, ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುವವರು ಎನ್ನುವ ಮಾತಿದೆ. ಸದ್ಯ ವೈರಲ್‌ ಆಗಿರುವ ಘಟನೆ (Viral News) ಈ ಮಾತಿಗೆ ಸ್ಪಷ್ಟ ಉದಾಹರಣೆ ಎನಿಸಿಕೊಂಡಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಟ್ರಾಫಿಕ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರು ತಮ್ಮ ಬೆನ್ನಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಈ ವಿಚಾರ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪೊಲೀಸ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಧ್ಯ ಪ್ರದೇಶದ (Madhya Pradesh) ಜಬಲಾಪುರದಲ್ಲಿ ಈ ಘಟನೆ ನಡೆದಿದೆ.

ನವರಾತ್ರಿ ಪ್ರಯುಕ್ತ ಜಬಲಾಪುರದ ಜಾನಕಿ ರಾಮನ್‌ ಕಾಲೇಜಿನ ಬಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆಯೊಬ್ಬರ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಅವರು ನಡೆದಾಡುವ ಸ್ಥಿತಿಯಲ್ಲಿರಲಿಲ್ಲ. ಈ ವೇಳೆ ಅಲ್ಲೇ ಇದ್ದ ಟ್ರಾಫಿಕ್‌ ಕಾನ್ಸ್‌ಟೇಬಲ್‌ ಕೂಡಲೇ ಅವರನ್ನು ತಮ್ಮ ಬೆನ್ನಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ವೈರಲ್‌ ವಿಡಿಯಿ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Shashi Tharoor: ಶಶಿ ತರೂರ್‌ಗೆ ಸ್ವಿಗ್ಗಿಯಿಂದ ಭರ್ಜರಿ ಸರ್ಪ್ರೈಸ್‌! ಪೋಸ್ಟ್‌ ಫುಲ್‌ ವೈರಲ್‌

ಟ್ರಾಫಿಕ್‌ ನಿರ್ವಹಣೆಗಾಗಿ ಸ್ಥಳದಲ್ಲಿ ನಿಯೋಜಿತರಾಗಿದ್ದ ಕಾನ್ಸ್‌ಟೇಬಲ್‌ ಜಿತೇಂದ್ರ ದುಬೆ ಅವರ ಈ ಮಾನವೀಯ ಕಾರ್ಯಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೊ ವೈರಲ್‌ ಆಗಿದೆ.

ಈ ಘಟನೆ ಭಾನುವಾರ (ಸೆಪ್ಟೆಂಬರ್‌ 28) ನಡೆದಿದೆ. ಗಾರ್ಬಾ ನೃತ್ಯದಲ್ಲಿ ಭಾಗವಹಿಸಿ ಮಹಿಳೆ ಸ್ಕೂಟರ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿತು. ಕಾಲೇಜು ಕ್ಯಾಂಪಸ್‌ ಬಳಿ ವಾಹನವೊಂದು ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಹೊರಟು ಹೋಗಿತ್ತು. ಡಿಕ್ಕಿಯ ರಭಸಕ್ಕೆ ಮಹಿಳೆ ರಸ್ತೆ ಮೇಲೆ ಬಿದ್ದರು. ಕೂಡಲೇ ಜಿತೇಂದ್ರ ದುಬೆ ಅವರನ್ನು ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಧಾವಿಸಿದರು. ʼʼಇವರು ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಉಂಟಾಗುವ ಜನಸಂದಣಿಯನ್ನು ನಿಯಂತ್ರಿಸಲು ನಿಯೋಜಿತರಾಗಿದ್ದರುʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ʼʼಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಾಗರಿಕರಿಗೆ ನೆರವಾಗಲು ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ. ಅದರಲ್ಲಿಯೂ ಜಿತೇಂದ್ರ ದುಬೆ ಯಾವತ್ತೂ ನಾಗರಿಕರ ನೆರವಿಗೆ ಧಾವಿಸುತ್ತಲೇ ಇರುತ್ತಾರೆ. ಅವರು ಹಿಂದೆಯೂ ಸಮಯೋಚಿತ ನಿರ್ಧಾರದಿಂದ ಅನೇಕರಿಗೆ ನೆರವಾಗಿದ್ದಾರೆ. ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಗಲು ರಾತ್ರಿ ಸ್ಥಳದಲ್ಲಿದ್ದು, ಜನರ ಯೋಗಕ್ಷೇಮ ನೋಡುತ್ತಿದ್ದಾರೆʼʼ ಎಂದು ಅವರು ವಿವರಿಸಿದ್ದಾರೆ. ಸದ್ಯ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.