ಮುಂಬೈ, ಸೆ. 2: ಸಾಕಿ ಬೆಳಸಿದ ಮಕ್ಕಳು ಇಳಿ ವಯಸ್ಸಿನಲ್ಲಿ ಆಸರೆಯಾಗುತ್ತಾರೆ ಎಂಬ ಹೆತ್ತವರ ನಂಬಿಕೆಯನ್ನು ಆಸ್ತಿಯ ದಾಹಕ್ಕೆ ಗಾಳಿಗೆ ತೂರಿ ತಂದೆ ತಾಯಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ತಾಯಿಯ ಹೆಸರಿನಲ್ಲಿದ್ದ ಜಮೀನನ್ನು ತಮ್ಮನ್ನು ಕೆಳದೆ ಮಾರಾಟ ಮಾಡಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಪುತ್ರರು ತಮ್ಮ ವೃದ್ಧ ತಂದೆ-ತಾಯಿಯರನ್ನು ದೊಣ್ಣೆಯಿಂದ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ಪುಣೆ ಜಿಲ್ಲೆಯ ಇಂದಾಪೂರ ತಾಲೂಕಿನ ತರಂಗವಾಡಿ ಗ್ರಾಮದಲ್ಲಿ ನಡೆದಿದೆ. ಆಗಸ್ಟ್ 30ರ ಸಾಯಂಕಾಲ ಈ ಘಟನೆ ಸಂಭವಿಸಿದ್ದು, ಸೆಪ್ಟೆಂಬರ್ 2ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆದ ನಂತರ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
65 ವರ್ಷದ ರೈತ ತುಕಾರಾಮ್ ರಾವತ್ ಮತ್ತು ಅವರ ಅಸ್ವಸ್ಥ ಪತ್ನಿ ಅಂಜನಾ ರಾವತ್ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೇರೆಯಾಗಿ ವಾಸಿಸುತ್ತಿದ್ದ ಅವರ ಇಬ್ಬರು ಗಂಡು ಮಕ್ಕಳು ಕಾರಿನಲ್ಲಿ ಬಂದಿದ್ದಾರೆ. ‘'ತಾಯಿಯ ಹೆಸರಿನಲ್ಲಿದ್ದ ಜಮೀನನ್ನು ನಮಗೆ ತಿಳಿಸದೆ ಏಕೆ ಮಾರಾಟ ಮಾಡಿದಿರಿ?'' ಎಂದು ಆಕ್ರೋಶದಿಂದ ಪ್ರಶ್ನಿಸಿದ ಮಕ್ಕಳು, ತಂದೆ-ತಾಯಿಯೊಂದಿಗೆ ಜಗಳ ಆರಂಭಿಸಿದ್ದಾರೆ. ಮಾತು ಬೆಳೆದು ಕೋಪಗೊಂಡ ಮಕ್ಕಳು ವೃದ್ಧ ಪೋಷಕರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ಹೆತ್ತವರ ಮೇಲೆ ಮಕ್ಕಳಿಂದಲೇ ಹಲ್ಲೆ:
ಹಲ್ಲೆಯಿಂದ ಗಾಯಗೊಂಡ ಪೋಷಕರು
ಹಲ್ಲೆಯಿಂದಾಗಿ ತಂದೆ ತುಕಾರಾಮ್ ಅವರ ಬೆನ್ನು, ಮುಖ, ತೊಡೆ ಮತ್ತು ಹೆಗಲಿಗೆ ತೀವ್ರ ಗಾಯಗಳಾಗಿವೆ. ಪತ್ನಿ ಅಂಜನಾ ಅವರ ಬಲ ಮುಂಗೈ ಮತ್ತು ಸೊಂಟದ ಭಾಗಕ್ಕೆ ಗಾಯಗಳಾಗಿವೆ. ಮಾರಾಟ ಮಾಡಿದ ಜಮೀನಿನ ಒಪ್ಪಂದವನ್ನು ರದ್ದುಗೊಳಿಸಿ ಆಸ್ತಿಯನ್ನು ವಾಪಸ್ ಪಡೆಯದಿದ್ದರೆ ಪ್ರಾಣ ತೆಗೆಯುವುದಾಗಿಯೂ ಮಕ್ಕಳು ಬೆದರಿಕೆ ಹಾಕಿದ್ದಾರೆ.
ವಾಯುಸೇನೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಅರೆಸ್ಟ್; ಅಧಿಕಾರಿಯಿಂದಲೂ ನಡೆದಿತ್ತು ಹಲ್ಲೆ
ಸ್ಥಳೀಯರು ತಕ್ಷಣವೇ ಮಧ್ಯ ಪ್ರವೇಶಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ದಂಪತಿಯನ್ನು ಇಂದಾಪೂರ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ತುಕಾರಾಮ್ ರಾವತ್ ನೀಡಿದ ದೂರಿನ ಆಧಾರದ ಮೇಲೆ ಇಂದಾಪೂರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯಡಿ ಇಬ್ಬರು ಆರೋಪಿ ಮಕ್ಕಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.