ಲಖನೌ, ನ. 21: ವೈದ್ಯರು ಎಂದರೆ ರೋಗಿಗಳ ಪ್ರಾಣ ಉಳಿಸುವವರು. ಯಾವುದೇ ಪರಿಸ್ಥಿತಿ ಇರಲಿ ತಕ್ಷಣ ಧಾವಿಸಿ ನೆರವಾಗುತ್ತಾರೆ ಎನ್ನುವ ನಂಬಿಕೆ ಎಲ್ಲರಲ್ಲಿದೆ. ಇದು ನಿಜ ಕೂಡ. ಆದರೆ ಇಲ್ಲೊಬ್ಬ ವೈದ್ಯ ಇದನ್ನೆಲ್ಲ ಮರೆತು ಆಸ್ಪತ್ರೆಯ ವಾರ್ಡ್‌ನಲ್ಲಿ ತನ್ನ ಭಾವಿ ಪತ್ನಿಯೊಂದಿಗೆ ಡ್ಯಾನ್ಸ್ ಮಾಡಿದ್ದಾನೆ. ಉತ್ತರ ಪ್ರದೇಶದ ಶಾಮ್ಲಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video). ಸದ್ಯ ವೈದ್ಯನನ್ನು ವಜಾಗೊಳಿಸಿ ತನಿಖೆಗೆ ಆದೇಶ ಹೊರಡಿಸಲಾಗಿದೆ. ವೈದ್ಯನನ್ನು ಡಾ. ವಕಾರ್ ಸಿದ್ದಿಕಿ (Dr Waqar Siddiqui) ಎಂದು ಗುರುತಿಸಲಾಗಿದೆ.
ಭಾವಿ ಪತ್ನಿಯೊಂದಿಗಿನ ಡಾ. ವಕಾರ್ ಸಿದ್ದಿಕಿಯ ಡ್ಯಾನ್ಸ್ ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಈಗಾಗಲೇ ಆತನಿಗೆ ನೀಡಿರುವ ವಸತಿ ಸೌಕರ್ಯವನ್ನು ಹಿಂಪಡೆದಿದ್ದು, ಅಧಿಕಾರಿಗಳಿಗೆ ವರದಿ ನೀಡಿಲಾಗಿದೆ.
ಡಾ. ವಕಾರ್ ಸಿದ್ದಿಕಿ ಇತ್ತೀಚೆಗೆ 2 ವರ್ಷಗಳ ಒಪ್ಪಂದದ ಮೇಲೆ ನೇಮಕಗೊಂಡಿದ್ದ. ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ನಿಯೋಜನೆಗೊಂಡಿದ್ದ ಆತ ಆಸ್ಪತ್ರೆಯ ಮೇಲಿನ ಮಹಡಿಯ ಕೊಠಡಿಯಲ್ಲಿ ಭಾವಿ ಪತ್ನಿಯೊಂದಿಗೆ ಡ್ಯಾನ್ಸ್ ಮಾಡಿದ್ದಾನೆ. ಈ ವಿಡಿಯೊ ಹೊರಬಿದ್ದ ಬೆನ್ನಲ್ಲೇ ನೆಟ್ಟಿಗರ ಗಮನ ಸೆಳೆಯಿತು.
ಆಸ್ಪತ್ರೆಯಲ್ಲಿ ವೈದ್ಯನ ಡ್ಯಾನ್ಸ್ ವಿಡಿಯೊ:
ಮೆಡಿಕಲ್ ಆಫೀಸರ್ ವೀರೇಂದ್ರ ಸಿಂಗ್ ನೋಟಿಸ್ ಜಾರಿ ಮಾಡಿದ್ದು, ಡಾ. ಸಿದ್ದಿಕಿ ಬಳಿಯಿಂದ ವಿವರಣೆ ಕೋರಿದ್ದಾರೆ. ಒಂದುವೇಳೆ ಸಮರ್ಪಕ ಉತ್ತರ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸದ್ಯ ಆತನನ್ನು ಎಮರ್ಜೆನ್ಸಿ ಸೇವೆಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ವೀರೇಂದ್ರ ಸಿಂಗ್ ಮಾತನಾಡಿ, ʼʼಇಂತಹ ವರ್ತನೆಯನ್ನು ಕ್ಷಮಿಸಲು ಸಾಧ್ಯವಿಲ್ಲ. ಅದರಲ್ಲಿಯೂ ಸರ್ಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಇದನ್ನು ಕ್ಷಮಿಸಲಾಗದು. ಮುಂದೆ ಇಂತಹ ವರ್ತನೆ ಪುನರಾವರ್ತನೆಯಾಗದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆʼʼ ಎಂದಿದ್ದಾರೆ.
ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ನಡುರಸ್ತೆಯಲ್ಲಿ ಪೆಟ್ರೋಲ್ ಸುರಿದ ಯುವಕ; ವಿಡಿಯೊ ವೈರಲ್
ನೆಟ್ಟಿಗರಿಂದ ಆಕ್ರೋಶ
ಸದ್ಯ ಈ ವಿಡಿಯೊ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಸರ್ಕಾರಿ ಸಂಸ್ಥೆಗಳಲ್ಲಿ ಶಿಸ್ತು ಉಲ್ಲಂಘನೆಯಾಗುತ್ತಿರುವ ಬಗ್ಗೆ ಕಳವಳ ಹುಟ್ಟು ಹಾಕಿದೆ. ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಇದರ ಮಧ್ಯೆ ಇಂತಹ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಲವು ಆಸ್ಪತ್ರೆಗಳ ಚಿಕಿತ್ಸೆ ವೇಳೆ ಲೋಪ ಕಂಡು ಬರುತ್ತಿರುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಮಧ್ಯೆ ಇಂತಹ ಘಟನೆ ಬೆಳಕಿಗೆ ಬಂದಿರುವುದು ಮತ್ತಷ್ಟು ಮುಜುಗರಕ್ಕೆ ಈಡು ಮಾಡಿದೆ.
ನೆಟ್ಟಿಗರು ಹೇಳಿದ್ದೇನು?
ʼʼದೇಶದಲ್ಲಿ ಟಿಕ್ ಟಾಕ್ ಬ್ಯಾನ್ ಆದಾಗ ಇಂತಹ ಅಶಿಸ್ತಿನ ವರ್ತನೆ ಕೊನೆಯಾಗಬಹುದು ಎಂದುಕೊಂಡಿದ್ದೆವು. ಆದರೆ ಇದು ತಪ್ಪು ಎನ್ನುವುದು ಸಾಬೀತಾಗಿದೆʼʼ ಎಂದು ಒಬ್ಬರು ಬರೆದಿದ್ದಾರೆ. ʼʼಇದು ಆಸ್ಪತ್ರೆಯ ಅಥವಾ ಬೆಡ್ ರೂಮಾ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ʼʼಉತ್ತರ ಪ್ರದೇಶದ ಆಯೋಗ್ಯ ವ್ಯವಸ್ಥೆ ನಿಜಕ್ಕೂ ಹದಗೆಟ್ಟಿದೆ. ಆಸ್ಪತ್ರೆ ಡ್ಯಾನ್ಸ್ ಫ್ಲೋರ್ ಆಗಿ ಬದಲಾಗಿದೆʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಭಾರಿ ವೈರಲ್ ಆಗಿದೆ.