ವಾಷಿಂಗ್ಟನ್: ಅಮೆರಿಕದ ಸಾಮಾಜಿಕ ಮಾಧ್ಯಮ ಪ್ರಭಾವಿ ಸ್ಟೆಫನಿ ಮ್ಯಾಟೊ ಕೆಲವು ಅಸಾಂಪ್ರದಾಯಿಕ ಮತ್ತು ವಿವಾದಾತ್ಮಕ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಕ್ಕೆ ಹೆಸರುವಾಸಿ. ಹೂಸು ಜಾರು (Fart jars), ಬೆವರು (Sweat) ಇತ್ಯಾದಿ ವಿಚಿತ್ರಗಳನ್ನು ಮಾರಿದ ಬಳಿಕ ಇದೀಗ ಮತ್ತೊಂದು ವಿಚಿತ್ರ ಉದ್ಯಮದೊಂದಿಗೆ ಸುದ್ದಿಯಲ್ಲಿದ್ದಾಳೆ. ಈ ಬಾರಿ, ಹಲ್ಲು ಇಲ್ಲದ ಪುರುಷರಿಗೆ ಆಹಾರವನ್ನು ಅಗಿದು ಕಳುಹಿಸುವ ಮೂಲಕ ಸ್ಟೆಫನಿ ವಾರಕ್ಕೆ $ 50,000 (ಸುಮಾರು 44 ಲಕ್ಷ ರೂ.) ಗಳಿಸುತ್ತಿದ್ದಾಳೆ. ಹೌದು, ಇದು ಅಸಹ್ಯ ಎಂದೆನಿಸಿದರೂ ಸತ್ಯ. ತಾನು ಈ ರೀತಿ ಉತ್ಪನ್ನ ಮಾರಾಟ ಮಾಡುತ್ತಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಮೂಲಕ ತಿಳಿಸಿದ್ದಾಳೆ. ಈ ಉದ್ಯಮವನ್ನು ನಡೆಸುತ್ತಿರುವ ಬಗ್ಗೆ ಸ್ಟೆಫನಿ ಹಂಚಿಕೊಂಡಿದ್ದಾಳೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲ್ಲುರಹಿತ ಪುರುಷರಿಗೆ ಆಹಾರವನ್ನು ಪ್ಯಾಕ್ ಮಾಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ. ಈ ಅಭ್ಯಾಸವನ್ನು ಮಾಮಾ ಬರ್ಡಿಂಗ್ ಎಂದು ಕರೆಯಲಾಗುತ್ತದೆ. ಆಹಾರವನ್ನು ಸ್ವತಃ ಜಗಿಯುವ ಆಕೆ ನಂತರ ಅದನ್ನು ಪ್ಯಾಕ್ ಮಾಡುತ್ತಾಳೆ. ಅಗಿಯಲು ಸಾಧ್ಯವಾಗದ ಜನರಿಗೆ ಇದನ್ನು ಕಳುಹಿಸಲಾಗುತ್ತದೆ ಎಂದು ಸ್ಟೆಫನಿ ಹೇಳಿದ್ದಾಳೆ.
ಗ್ರಾಹಕರು ತಮ್ಮ ನೆಚ್ಚಿನ ತಿಂಡಿಗೆ ಆರ್ಡರ್ ಮಾಡಿದ್ದನ್ನು ಆಕೆ ಹಂಚಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಕೆಲವರು ಗ್ವಾಕಮೋಲ್ ಅನ್ನು ಮಾತ್ರ ತಿನ್ನಲು ಸಾಧ್ಯವಾಗುತ್ತಿದೆ. ಆದ್ದರಿಂದ ಈಗ ಅವರ ಜೀವನದಲ್ಲಿ ಬದಲಾವಣೆ ತರಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ ಎಂದು ಆಕೆ ಚಿಪ್ಸ್ ಮತ್ತು ಗ್ವಾಕಮೋಲ್ ತಯಾರಿಸುತ್ತಾ ಹೇಳಿದಳು.
ವಿಡಿಯೊ ವೀಕ್ಷಿಸಿ
ತನ್ನ ಗ್ರಾಹಕರು ಆಹಾರವನ್ನು ಮಾತ್ರ ಪಡೆಯುವುದಿಲ್ಲ ಎಂದು ಸ್ಟೆಫನಿ ವಿವರಿಸಿದಳು. ಪ್ರತಿ ಆರ್ಡರ್‌ನೊಂದಿಗೆ ಕೈಬರಹದ ಟಿಪ್ಪಣಿ ಬರುತ್ತದೆ. ಆ ಪತ್ರವನ್ನು ಚುಂಬಿಸಿ ಕಳುಹಿಸಲಾಗುತ್ತದೆ. ಅಲ್ಲದೆ ಪ್ಯಾಕೇಜಿಂಗ್‌ನಲ್ಲಿ ತಾನು ಎಷ್ಟು ಜಾಗರೂಕಳಾಗಿದ್ದೇನೆ ಎಂಬುದನ್ನು ಸಹ ಅವಳು ವಿವರಿಸಿದ್ದಾಳೆ. “ನಾನು ಆಹಾರ ಸುರಕ್ಷತೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇನೆ. ಆದ್ದರಿಂದ ನಾನು ಪ್ರತಿ ಪ್ಯಾಕೇಜ್ ಅನ್ನು ಐಸ್ ಪ್ಯಾಕ್‌ನಲ್ಲಿ ಇಡುವುದನ್ನು ಖಚಿತಪಡಿಸಿಕೊಳ್ಳುತ್ತೇನೆ. ಪ್ರತಿ ಪೆಟ್ಟಿಗೆಯ ಮೇಲೆ ಐಸ್ ಪ್ಯಾಕ್ ಇಟ್ಟಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಟಿಕ್ಕರ್ ಅಂಟಿಸಲಾಗುತ್ತದೆ” ಎಂದು ವಿವರಿಸಿದ್ದಾಳೆ.
ಸ್ಟೆಫನಿ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಂತೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಕೆಲವರು ಇದನ್ನು ಅಭಿನಂದಿಸಿದರೆ, ಇನ್ನೂ ಕೆಲವರು ಇದನ್ನು ನಂಬಲು ನಿರಾಕರಿಸಿದರು. ಹಣ ಕೊಟ್ಟು ಅಗಿದಂತಹ ಆಹಾರವನ್ನು ಸೇವಿಸುವ ಬದಲು ದಂತ ಇಂಪ್ಲಾಂಟ್‌ಗಳನ್ನು ಬಳಸಬಹುದು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಹಿಂದಿನ ಸ್ಟೆಫನಿಯ ಪ್ರಯೋಗಗಳು
ಸ್ಟೆಫನಿ ಸ್ವಲ್ಪ ಸಮಯದಿಂದ ವಿಚಿತ್ರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾಳೆ. ಒಮ್ಮೆ ಅವಳ ವಾಸನೆ ಬರುವ ಹೂಸು ಜಾಡಿಗಳನ್ನು ಮಾರಾಟ ಮಾಡುವ ವ್ಯವಹಾರವು ಅವಳಿಗೆ ಸುಮಾರು $ 200,000 (ಸುಮಾರು 1.4 ಕೋಟಿ ರೂ.) ಗಳಿಸಿ ಕೊಟ್ಟಿತ್ತು. ಆದರೆ ಬೆಳಗ್ಗೆ ಅತಿಯಾದ ಪ್ರೋಟೀನ್ ಶೇಕ್‌ಗಳು ಮತ್ತು ಕಪ್ಪು ಬೀನ್ಸ್ ಸೂಪ್ ಸೇವಿಸಿದ ನಂತರ ಅವಳಿಗೆ ಎದೆ ನೋವು ಕಾಣಿಸಿಕೊಂಡಿತು. ನಂತರ ವೈದ್ಯರು ಅತಿಯಾದ ಫಾರ್ಟಿಂಗ್ (ಹೂಸು ಬಿಡುವುದು) ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು ಬಳಿಕ ಅವಳು ಅದನ್ನು ನಿಲ್ಲಿಸಬೇಕಾಯಿತು. 2022ರಲ್ಲಿ ಆಕೆ ತನ್ನ ಬೆವರನ್ನು ಮಾರಿ ದಿನಕ್ಕೆ 5,000 ಡಾಲರ್ (ಸುಮಾರು 4 ಲಕ್ಷ ರೂ.) ವರೆಗೆ ಸಂಪಾದಿಸುತ್ತಿದ್ದಳಂತೆ.