ದೆಹಲಿ: ಹೊಸ ಕಾರು ಖರೀದಿಸಿದ ಖುಷಿಯಲ್ಲಿದ್ದ ಕುಟುಂಬವೊಂದಕ್ಕೆ ಬರಸಿಡಿಲು ಅಪ್ಪಳಿಸಿದ ಘಟನೆ ನಡೆದಿದೆ. ಕಾರು ತೆಗೆದುಕೊಂಡ ಮರುಕ್ಷಣವೇ ಅಪಘಾತಕ್ಕೀಡಾಗಿದೆ. ಹೌದು, 29 ವರ್ಷದ ಮಹಿಳೆ ಮಾನಿ ಪವಾರ್ ಎಂಬವರಿಗೆ ಹೊಚ್ಚ ಹೊಸ ಮಹೀಂದ್ರಾ ಥಾರ್ (Mahindra Thar) ಖರೀದಿಸುವ ಸಂತೋಷ ವಿವರಿಸಲಾಗದಂತಿತ್ತು. ಅದನ್ನು ರಸ್ತೆಯಲ್ಲಿ ಚಲಾಯಿಸುವ ಮೊದಲು, ಅವರು ಶೋ ರೂಂ ಒಳಗೆ ಒಂದು ಸಾಂಪ್ರದಾಯಿಕ ಆಚರಣೆಯನ್ನು ಮಾಡಲು ನಿರ್ಧರಿಸಿದರು. ಈ ಆಚರಣೆಯಲ್ಲಿ ಕಾರಿನ ಟೈರ್ ಅಡಿಯಲ್ಲಿ ನಿಂಬೆಹಣ್ಣು ಇಡುವುದು ಸೇರಿತ್ತು. ಆದರೆ ಮಾನಿ ಪವಾರ್ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ಥಾರ್ ಶೋ ರೂಂನ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ.
ಸೋಮವಾರ (ಸೆ. 8) ಸಂಜೆ, ಮಾನಿ ಪವಾರ್ ದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿರುವ ಮಹೀಂದ್ರಾ ಶೋರೂಮ್‌ಗೆ ಭೇಟಿ ನೀಡಿ 27 ಲಕ್ಷ ರೂಪಾಯಿ ಮೌಲ್ಯದ ತಮ್ಮ ಹೊಸ ಥಾರ್ ಕಾರಿನ ಡೆಲಿವರಿ ಪಡೆದರು. ಶೋರೂಮ್‌ನಿಂದ ಕಾರನ್ನು ಹೊರಗೆ ಓಡಿಸುವ ಮೊದಲು ಪೂಜೆ ಮಾಡಲು ಮಾನಿ ಪವಾರ್ ನಿರ್ಧರಿಸಿದರು. ಶೋರೂಮ್‌ನ ಮೊದಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ಥಾರ್‌ನ ಚಕ್ರದ ಮುಂದೆ ನಿಂಬೆಹಣ್ಣನ್ನು ಇರಿಸಲಾಗಿತ್ತು. ಮಾನಿ ಪವಾರ್ ನಿಧಾನವಾಗಿ ಚಾಲನೆ ಮಾಡಬೇಕಾಗಿತ್ತು. ಆದರೆ ಅವರು ತಪ್ಪಾಗಿ ಆಕ್ಸಿಲರೇಟರ್ ಅನ್ನು ಒತ್ತಿದರು.
ವಿಡಿಯೊ ವೀಕ್ಷಿಸಿ:
ಪವಾರ್ ಮತ್ತು ವಿಕಾಸ್ ಎಂದು ಗುರುತಿಸಲಾದ ಶೋ ರೂಂ ಉದ್ಯೋಗಿಯಿದ್ದ ಕಾರು ಗಾಜನ್ನು ಒಡೆದು, ಅಂಗಡಿಯಿಂದ ಹೊರಗೆ ಹಾರಿ ಪಾದಚಾರಿ ಮಾರ್ಗಕ್ಕೆ ಉರುಳಿದೆ. ಅಪಘಾತದ ನಂತರ ವಿಡಿಯೊದಲ್ಲಿ ಶೋರೂಂನ ಕೆಳಗಿನ ರಸ್ತೆಯಲ್ಲಿ ಮಗುಚಿಬಿದ್ದ ಕಾರು ಕಂಡುಬಂದಿದೆ. ಅಪಘಾತ ಸಂಭವಿಸಿದಾಗ ತಕ್ಷಣವೇ ಏರ್‌ಬ್ಯಾಗ್‌ಗಳು ತೆರೆದುಕೊಂಡವು. ಗಾಯಾಳುಗಳನ್ನು ಕೂಡಲೇ ಸಮೀಪದ ಮಲಿಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರಿಗೂ ಹೆಚ್ಚಿನ ಗಾಯವಾಗಿಲ್ಲ.
ಸೋಮವಾರ ಸಂಜೆ 6.08ರ ಸುಮಾರಿಗೆ, ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ಮಾನಿ ಪವಾರ್ ಎಂಬವರ ಕಾರು ಅಪಘಾತಕ್ಕೀಡಾದ ಸುದ್ದಿ ತಿಳಿಯಿತು. ನಿರ್ಮಾನ್ ವಿಹಾರ್‌ನಲ್ಲಿರುವ ಮಲಿಕ್ ಆಸ್ಪತ್ರೆಯಲ್ಲಿ ಗಾಯಾಳುಗಳು ದಾಖಲಾಗಿದ್ದರು. ವಿಚಾರಣೆಯಲ್ಲಿ, ನಿರ್ಮಾನ್ ವಿಹಾರ್‌ನಲ್ಲಿರುವ ಮಹೀಂದ್ರಾ ಶೋ ರೂಂನಿಂದ ಥಾರ್ ರಾಕ್ಸ್ ಕಾರನ್ನು ಮಾನಿ ಪವಾರ್ ಖರೀದಿಸಿದ್ದಾರೆ ಎಂದು ತಿಳಿದುಬಂತು ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಅಭಿಷೇಕ್ ಧಾನಿಯಾ ಹೇಳಿದ್ದಾರೆ.
ಇದನ್ನೂ ಓದಿ: Viral News: ಮೀಸಲಾತಿ ವ್ಯವಸ್ಥೆಯಿಂದ ತಾರತಮ್ಯ; ಒಲ್ಲದ ಮನಸ್ಸಿನಿಂದ ಭಾರತ ತೊರೆಯುತ್ತಿರುವ ನೋಯ್ಡಾ ಮಹಿಳೆ