ಮುಂಬೈ: ಇತ್ತೀಚಿನ ದಿನಗಳಲ್ಲಿ ಯುವಕರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿ ತಮ್ಮ ಜೀವಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೀಗ ಮಹಾರಾಷ್ಟ್ರದ ಸತಾರಾದ ಸದಾ ವಾಘಾಪುರ ಪ್ರದೇಶದಲ್ಲಿ ಅಂತಹ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರದ ಕರಾಡ್‌ನ ಪಠಾಣ್-ಸದವಘಾಪುರ ರಸ್ತೆಯಲ್ಲಿರುವ ಜನಪ್ರಿಯ ಟೇಬಲ್ ಪಾಯಿಂಟ್‌ನಲ್ಲಿ ಬುಧವಾರ (ಜುಲೈ 9) ಸಂಜೆ ಕಾರೊಂದು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಸ್ಟಂಟ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಅಂಚಿನಿಂದ ಜಾರಿ ಕಮರಿಗೆ ಬಿದ್ದಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.
ಮಾಹಿತಿ ಪ್ರಕಾರ, ಕಾರಿನಲ್ಲಿ ಮೂವರಿದ್ದರು. ಹೊರಗಿದ್ದ ನಾಲ್ಕನೇ ವ್ಯಕ್ತಿ ತನ್ನ ಮೊಬೈಲ್ ಫೋನ್‌ನಲ್ಲಿ ಸಾಹಸವನ್ನು ಚಿತ್ರೀಕರಿಸುತ್ತಿದ್ದ. ಸಾಹಸ ಪ್ರದರ್ಶಿಸುವಾಗ ಚಾಲಕ ಇದ್ದಕ್ಕಿದ್ದಂತೆ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಇದರಿಂದ ಕಾರು ನೇರವಾಗಿ ಕಂದಕಕ್ಕೆ ಉರುಳಿದೆ. ಈ ಆಘಾತಕಾರಿ ಘಟನೆಯನ್ನು ನೋಡಿ ಅನೇಕ ಪ್ರವಾಸಿಗರು ಶಾಕ್ ಆಗಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲಿದ್ದ ಪ್ರವಾಸಿಗರು ಮತ್ತು ಸ್ಥಳೀಯರುನ ಕೂಡಲೆ ನೆರವಿಗೆ ಧಾವಿಸಿ ಕಾರಿನ ಬಾಗಿಲು ಒಡೆದು ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವಕನ ದೇಹ ರಕ್ತಸಿಕ್ತವಾಗಿದ್ದು, ಅವನನ್ನು ತಕ್ಷಣ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಮೂಲಗಳು ತಿಲಿಸಿವೆ. ಗಾಯಗೊಂಡ ವ್ಯಕ್ತಿಯನ್ನು ಘೋಲೇಶ್ವರದ ಸಾಹಿಲ್ ಅನಿಲ್ ಜಾಧವ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗುಜರ್‌ವಾಡಿ ಪ್ರದೇಶದ ಪಟನ್‌ನಿಂದ ಸುಮಾರು 3ರಿಂದ 4 ಕಿ.ಮೀ. ದೂರದಲ್ಲಿರುವ ಟೇಬಲ್ ಪಾಯಿಂಟ್, ಆಳವಾದ ಕಣಿವೆಗಳಿಂದ ಸುತ್ತುವರೆದಿರುವ ಸಮತಟ್ಟಾದ ಭೂಪ್ರದೇಶವಾಗಿದ್ದು, ತಲೆಕೆಳಗಾದ ಜಲಪಾತದ ಕಾರಣಕ್ಕೆ ಜನಪ್ರಿಯ. ಇಲ್ಲಿಗೆ ಫೋಟೊ ಶೂಟ್‌ಗಾಗಿ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.
ಈ ಸುದ್ದಿಯನ್ನೂ ಓದಿ:Viral Video: ಜಲಾವೃತ ಪ್ರದೇಶದಲ್ಲಿ ನಿಂತು ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡ ಪುಟ್ಟ ಬಾಲಕಿ- ಈ ವಿಡಿಯೊ ನೋಡಿ
ಈ ಸ್ಥಳದಲ್ಲಿ ರಕ್ಷಣಾತ್ಮಕ ಬೇಲಿಗಳಂತಹ ಮೂಲಭೂತ ಸುರಕ್ಷತಾ ಸೌಕರ್ಯಗಳಿಲ್ಲ. ಇದು ಅಪಾಯಕಾರಿ ಎನಿಸಿಕೊಂಡಿದೆ. ಹಿಂದಿನ ಅಪಘಾತಗಳ ಹೊರತಾಗಿಯೂ, ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿಲ್ಲ. ಸ್ಥಳೀಯ ನಿವಾಸಿಗಳು ಸುರಕ್ಷತಾ ಬೇಲಿಗಳು ಮತ್ತು ಎಚ್ಚರಿಕೆ ಫಲಕಗಳನ್ನು ತಕ್ಷಣವೇ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ. ಶೀಘ್ರದಲ್ಲೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಇನ್ನೂ ಗಂಭೀರ ದುರಂತಗಳು ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.