ಶ್ರೀನಿವಾಸಮೂರ್ತಿ ಎನ್ ಸುಂಡ್ರಹಳ್ಳಿ
‘ಬಹುದೇಶವಾಸಿ’ ಎಂಬ ಹೆಸರಿನ ಕೃತಿಯ ಮೂಲಕ ಪ್ರಪಂಚದ ಹಲವು ದೇಶಗಳ, ನಾನಾ ವಿಷಯಗಳ ಸುತ್ತ ಬಹಳ ಚಂದವಾಗಿ ಸುತ್ತಿಸುತ್ತಾರೆ, ಲೇಖಕ ಕಿರಣ್ ಉಪಾಧ್ಯಾಯ.
ದೇಶ ಸುತ್ತು, ಕೋಶ ಓದು ಎಂಬ ನಾಣ್ಣುಡಿ ಭಾರತೀಯ ಪರಂಪರೆಯಲ್ಲಿ ಲಗಾಯ್ತಿನಿಂದಲೂ ಚಾಲ್ತಿಯಲ್ಲಿರುವಂತಹುದು. ಇದು ಕೇವಲ ಒಂದು ನಾಣ್ಣುಡಿಯಲ್ಲ, ಬದುಕನ್ನು ಅರಿಯುವ ಎರಡು ಪ್ರಯತ್ನಗಳು. ಸಾಕಷ್ಟು ಜನರಿಗೆ ದೇಶ ಸುತ್ತಲು ಸಾಧ್ಯವಾಗದಿರಬಹುದು, ಆದರೆ ಕೋಶ ವನ್ನಂತೂ ಓದಲು ಸಾಧ್ಯವಿದೆ. ಹಾಗೆ ಓದುವ ಆ ಸುಖವೇ ಬೇರೆ. ಒಬ್ಬ ಲೇಖಕನಾದವನು ದೇಶವನ್ನೂ ಸುತ್ತಬೇಕು, ಕೋಶವನ್ನೂ ಓದಬೇಕು. ಈ ಎರಡೂ ಮಾಡಿದವರಿಗೆ ಜಗತ್ತು ಕೇವಲ ಕಾಣಿಸುವುದಿಲ್ಲ, ಅರ್ಥವಾಗುತ್ತದೆ.
ತಾವು ತಿರುಗಾಡುವ ಮೂಲಕ ಓದುಗರನ್ನೂ ಕೂಡ ತಮ್ಮೊಂದಿಗೆ ತಿರುಗಾಡಿಸುವವರು, ಲೇಖಕ ಕಿರಣ್ ಉಪಾಧ್ಯಾಯ. ಹೊರದೇಶ, ವಿದೇಶ, ಉಭಯ ದೇಶ, ಪರದೇಶ, ದೂರದೇಶ ಎಂದು ಐದು ವರ್ಷಗಳಿಂದ, ವರ್ಷಕ್ಕೊಂದು ಪುಸ್ತಕದ ಮೂಲಕ, ಕನ್ನಡದ ಓದುಗರನ್ನು ತನ್ನೊಂದಿಗೆ ತಿರುಗಾಡಿಸುತ್ತಲೇ ಇರುವ ಇವರು ಈಗ ಬಹುದೇಶಕ್ಕೆ ಕರೆದೊಯ್ಯುವ ಕೆಲಸ ಮಾಡಿದ್ದಾರೆ.
ಹೌದು, ‘ಬಹುದೇಶವಾಸಿ’ ಎಂಬ ಹೆಸರಿನ ಕೃತಿಯ ಮೂಲಕ ಪ್ರಪಂಚದ ಹಲವು ದೇಶಗಳ, ನಾನಾ ವಿಷಯಗಳ ಸುತ್ತ ಬಹಳ ಚಂದವಾಗಿ ಸುತ್ತಿಸುತ್ತಾರೆ. ಪುಸ್ತಕದ ಆರಂಭದ ಎರಡು ಲೇಖನಗಳು ದಾನಕ್ಕೆ ಸಂಬಂಽಸಿದವುಗಳಾಗಿವೆ. ಒಂದು ಅರ್ಥದಾನವಾದರೆ, ಇನ್ನೊಂದು ಮತದಾನ. ಎರಡ ರಿಂದಲೂ ಸಮಾಜಕ್ಕೆ ಆಗುವ ಉಪಯೋಗಗಳ ಬಗ್ಗೆ ಹೇಳುತ್ತಾ, ಒಳ್ಳೆಯ ಉದ್ದೇಶದಿಂದ ದಾನ ಮಾಡಿದರೆ ಅದರಿಂದ ಸಮಾಜಕ್ಕೆ ದುಪ್ಪಟ್ಟು ಉಪಯೋಗಗಳಾಗುತ್ತವೆ ಎಂಬ ಸಂದೇಶವನ್ನು ನೀಡುತ್ತಾರೆ.
ಇದನ್ನೂ ಓದಿ: Kiran Upadhyay Column: ಎಂದೂ ಆರದ ‘ನಂದಾ’ ದೀಪ
ಸಂದರ್ಭಕ್ಕೆ ತಕ್ಕಂತೆ ಸಹಾಯ ಮಾಡುವ ಮತ್ತು ಅವರಿಂದ ಮತ್ತೆ ದಾನ ಮಾಡಿಸುವ ಫರೀದ್, ಭರವಸೆ ಕಳೆದುಕೊಂಡ ಬಡವರ ಬದುಕಿನ ಬಂಧುವಾಗುತ್ತಾರೆ ಎನ್ನುತ್ತಲೇ ದಾನ - ಹಣದ ವ್ಯವಹಾರವಲ್ಲ, ಮನಸ್ಸಿನ ವ್ಯವಹಾರ ಎಂಬುದನ್ನು ಅರ್ಥ ಮಾಡಿಸುತ್ತಾರೆ. ನಮ್ಮೂರಿನ ಪಂಚಾಯಿತಿ ಚುನಾವಣೆ ನಡೆಯುವಾಗ ಬೆಳಿಗ್ಗೆ ಮತದಾನ ಇದ್ದರೂ ರಾತ್ರಿಗೇ ಪ್ರವಾಸ ಹೊರಡು ವವರ ನಡುವೆ ಇವರು ಮತ ಹಾಕಲೆಂದೇ ಮಾತೃ ದೇಶಕ್ಕೆ ದೂರದ ಬಹ್ರೇನ್‌ನಿಂದ ಬಂದು ಮತ ಚಲಾಯಿಸಿ ಹಿಂದಿರುಗುವ ಇವರ ದೇಶದ ಮೇಲಿನ ಕಾಳಜಿ ಎದ್ದು ಕಾಣಿಸುತ್ತದೆ. ಅಲ್ಲದೇ ದೇಶ ದಿಂದ ದೂರ ಇರಬಹುದು ಆದರೆ ದೇಶದ ಜವಾಬ್ದಾರಿಯಿಂದ ದೂರ ಇರಬಾರದು ಎಂಬ ಸಂದೇಶವನ್ನೂ ನೀಡುತ್ತದೆ.
ಹ್ಯುಂಡೈ ಎಂಬ ಉದ್ಯಮ ಸಾಮ್ರಾಜ್ಯ ಕಟ್ಟಿದ ಚುಂಗ್ -ಜು-ಯುಂಗ್, ಬಿಎಂಡಬ್ಲ್ಯು ಸಾಮ್ರಾಜ್ಯ ಕಟ್ಟಿದ ಕಾರ್ಲ್ ಫ್ರೆಡ್ರಿಕ್ ರಾವ್ ಹಾಗೂ ಅಪಘಾತದಲ್ಲಿ ತೀರಿಕೊಂಡ ತಮ್ಮ ಮುದ್ದಿನ ಮಗಳ ಹೆಸರಿನಲ್ಲಿ ನಿರ್ಮಾ ಸಂಸ್ಥೆ, ನಿರ್ಮಾ ವಿಶ್ವವಿದ್ಯಾಲಯ, ನಿರ್ಮಾ ತಾಂತ್ರಿಕ ವಿದ್ಯಾಲಯಗಳನ್ನು ಕಟ್ಟಿದ ಕರ್ಸನ್ ಬಾಯಿ ಪಟೇಲ್, ಭಾರತದ ಅಮೂಲ್ಯ ರತ್ನ ಟಾಟಾ ಇವರ ಉದ್ಯಮಗಾಥೆಗಳನ್ನು ಹೇಳುತ್ತಲೇ ಯುವ ಜನತೆಯಲ್ಲಿ ಸ್ವಯಂ ಉದ್ಯೋಗ ನಿರ್ಮಿಸಿಕೊಳ್ಳುವ ಹಾಗೂ ಸ್ವಂತ ಕಂಪೆನಿ ಗಳನ್ನು ಕಟ್ಟುವ ಕನಸುಗಳನ್ನು ಕೊನರಿಸುತ್ತಾರೆ.
ಬಹುಮಾನ ಬೇಕಾದರೆ ಪ್ರತಿಭೆಯನ್ನು ಹದಗೊಳಿಸಬೇಕು ಎಂದು ಹೇಳುತ್ತಾ ಆತ ಆಟಗಾರ, ಮಾಟಗಾರ, ಮಾತುಗಾರ ಎಂದು ಫೆಡರರ್‌ರ ಆಟದ ಹೋರಾಟವನ್ನು ಕಣ್ಣಿಗೆ ಕಟ್ಟಿಕೊಡುತ್ತಾ ಪರಿಶ್ರಮಕ್ಕೆ ಮಾತ್ರವೇ -ಲಿತಾಂಶ ಉಂಟು ಎಂಬ ವಾಸ್ತವಿಕತೆಯನ್ನು ಜೆನ್‌ಝೀಗಳಿಗೆ ಅರ್ಥ ಮಾಡಿಸುವ ಕೆಲಸವನ್ನು ಇವರ ಲೇಖನಿ ಮಾಡಿದೆ.
ಏಕತಾ ಪ್ರತಿಮೆಗಳಂತಹ ಪ್ರತಿಮೆಗಳು ಹೇಗೆ ಸ್ಥಳೀಯ ಸಾರಿಗೆ ಬೆಳೆಯಲು, ಕೈಮಗ್ಗ ಮತ್ತು ಕರಕುಶಲ ವಸ್ತಗಳಿಗೆ ಮಾರುಕಟ್ಟೆ ದೊರೆಯಲು, ಸ್ಥಳೀಯ ಜನರ ಆಹಾರ ಜನಪ್ರಿಯವಾಗಲು, ಮಾರ್ಗದರ್ಶಕರಿಗೆ ಉದ್ಯೋಗ ಸಿಗಲು, ಸಣ್ಣ ವ್ಯಾಪಾರಿಗಳ ಆದಾಯ ಹೆಚ್ಚಲು, ಆ ಭಾಗದ ಜನರ ಜೀವನ ಮಟ್ಟ ಹೆಚ್ಚಲು ಕಾರಣವಾಗುತ್ತದೆ ಎಂಬುದನ್ನು ಕಟ್ಟಿಕೊಡುತ್ತಾ, ಅಂತಹ ಚಟುವಟಿಕೆ ಯ ಪ್ರಾಮುಖ್ಯತೆ ಯನ್ನು ಎತ್ತಿ ಹಿಡಿಯುತ್ತಾರೆ.
ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಇಂದು ಸಿಂಹಪಾಲು ಕೊಡುಗೆ ಕೊಡುವುದು ಪ್ರವಾಸೋದ್ಯಮ. ಭಾರತದ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿದೇಶಗಳಲ್ಲಿದ್ದಂತೆ ಭಾರತದಲ್ಲಿಯೂ ಹೋಹೋ ಬಸ್ ವ್ಯವಸ್ಥೆ ಎಷ್ಟು ಪೂರಕವಾದುದು ಎಂಬುದನ್ನು ಹೇಳುವ ಮೂಲಕ ಸರಕಾರದ ಕಣ್ಣು ತೆರೆಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಸಂತ್ರಸ್ಥ ಹೆಣ್ಣು ಮಕ್ಕಳ ಬಗ್ಗೆ ಹೆಂಗರುಳಿನಿಂದಲೇ ಬರೆಯುತ್ತಾರೆ. ಅರುಣ ಶಾನುಭಾಗ್, ನಿರ್ಭಯ ಇವರುಗಳ ಬಗ್ಗೆ ಬರೆಯುವಾಗ ಅವರ ಲೇಖನಿ ಯಿಂದ ಶಾಯಿಯಷ್ಟೇ ಅಲ್ಲ ಕಣ್ಣೀರೂ ಕೂಡ ಹರಿದಿರಲೇಬೇಕು ಎಂಬಷ್ಟು ಭಾವನೆ ಮೂಡು ತ್ತದೆ.
‘ಮರದ ರೆಂಬೆಗಳು ಎಷ್ಟೇ ಅಗಲಕ್ಕೆ ಚಾಚಿದರೂ, ಮರ ತಾನು ಬೇರೂರಿದ ಜಾಗವನ್ನು ಮರೆಯ ಬಾರದು’ ಎಂಬ ಮಾತಿಗೆ ಪೂರಕವೆಂಬಂತೆ, ದೇಶ ಬಿಟ್ಟರೂ ಭಾಷೆ ಬಿಡಬಾರದು, ನೆಲ ದೂರವಾ ದರೂ ನೆನಪು ದೂರವಾಗಬಾರದು ಎಂದು ಕನ್ನಡಿಗರನ್ನು ಸಂಘಟಿಸುವ ಕೆಲಸ ಮಾಡುತ್ತಾರೆ. ವಿದೇಶಿ ನೆಲದಲ್ಲಿಯೂ ಕೂಡ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಕತೆಯನ್ನು ‘ಅನಿವಾಸಿಗಳನ್ನು ಮನಃವಾಸಿಗಳನ್ನಾಗಿಸಿದ ಸಮ್ಮೇಳನ’ ಎಂಬ ಲೇಖನದಲ್ಲಿ ಬರೆದು, ತಾಯ್ನಾಡಿನ ಮೇಲಿನ ತಮ್ಮ ಕಕ್ಕುಲಾತಿಯನ್ನು ಮೆರೆಯುತ್ತಾರೆ.
ಬಹರೇನ್‌ನಲ್ಲಿ ಆಚರಿಸುತ್ತಿರುವ ಮತ್ತು ಅನುಸರಿಸುತ್ತಿರುವ ಬಸವ ತತ್ವದ ಬಗ್ಗೆ, ಅಲ್ಲಿ ಪ್ರತಿ ಶುಕ್ರವಾರ ನಡೆಸುತ್ತಿರುವ ಮಹಾಮನೆಯ ಬಗ್ಗೆ, ಕನ್ನಡ ಮಣ್ಣಿನ ಬೀದಿ ನಾಟಕಗಳನ್ನು ಅಲ್ಲಿ ಯಶಸ್ವಿಯಾಗಿ ಪ್ರದರ್ಶಿಸುತ್ತಿರುವ ಬಗ್ಗೆ ಬರೆಯುತ್ತಾ ಬೀದಿ ನಾಟಕಗಳು ಭಾರತದಲ್ಲಿ ಹೇಗೆ ಜನ್ಮ ತಾಳಿದವು ಎಂಬ ಬಗ್ಗೆ ಸೊಗಸಾದ ಚಿತ್ರಣವನ್ನು ಚಿತ್ರಿಸಿ ಕೊಡುತ್ತಾರೆ. ಬೆನ್ನುಡಿಯಲ್ಲಿ ವಿಶ್ವೇಶ್ವರ ಭಟ್ಟರು ಹೇಳುವಂತೆ ‘ಬಹುದೇಶವಾಸಿ’ ಕೃತಿಯು ಸ್ಥಳೀಯ ಮಣ್ಣಿನ ವಾಸನೆಯಿಂದಾರಂಭಿಸಿ, ಜಾಗತಿಕ ವಿದ್ಯಾಮಾನಗಳ ವಿಸ್ತಾರದವರೆಗೆ, ಲೋಕಲ್‌ನಿಂದಿಡಿದು ಗ್ಲೋಬಲ್‌ವರೆಗಿನ ಬಹು ಶಿಸ್ತೀಯ ವಿಷಯಗಳ ವ್ಯಾಪ್ತಿಯನ್ನು ಹೊಂದಿದೆ.
ಓದಿ ಮರೆಯುವಂತಹ ಯಾವ ಲೇಖನವೂ ಇದರಲ್ಲಿಲ್ಲ, ಓದಿ ಮುಗಿಸಿದ ನಂತರವೂ ಅವು ಕಾಡುತ್ತವೆ. ಇಲ್ಲಿನ ಲೇಖನಗಳು ಜ್ಞಾನ ಮತ್ತು ಅನುಭವವನ್ನು ನೀಡುತ್ತಲೇ ಸಾಮಾಜಿಕ ಕಳಕಳಿ ಯನ್ನು ಅಭಿವ್ಯಕ್ತಿಸುತ್ತವೆ. ಸೋತ ಮನಸ್ಸುಗಳಿಗೆ ಸಾಂತ್ವನ ಹೇಳುತ್ತವೆ. ಕಟ್ಟಿಕೊಂಡ ಕನಸುಗಳಿಗೆ ಸೂರ್ತಿಯ ಸೆಲೆಯಾಗುತ್ತವೆ. ಸ್ವಾಭಿಮಾನ ಹೊಂದಿದವರಿಗೆ ನಾನು ಸ್ವತಂತ್ರವಾಗಿ ಉದ್ಯಮ ಕಟ್ಟಬೇಕು ಎಂಬ ಕಿಡಿಯನ್ನು ಹೊತ್ತಿಸುತ್ತವೆ.
ಈ ಕೃತಿಯಲ್ಲಿ ದೇಶವಿದೆ, ವಿದೇಶಗಳಿವೆ, ಜನರಿದ್ದಾರೆ, ಸಂಸ್ಕೃತಿಗಳಿದ್ದಾವೆ, ಉದ್ಯಮಿಗಳಿದ್ದಾರೆ, ಕಲಾವಿದರಿದ್ದಾರೆ, ಕ್ರೀಡಾಪಟುಗಳಿದ್ದಾರೆ, ಸಮಜದ ನೋವಿದೆ, ದಾನಶೀಲತೆಯಿದೆ, ಮಹಿಳೆಯರ ಬದುಕಿನ ತಲ್ಲಣಗಳಿವೆ, ಪ್ರವಾಸೋ ದ್ಯಮದ ಸಾಧ್ಯತೆಗಳಿವೆ, ಅನಿವಾಸಿ ಕನ್ನಡಿಗರ ಕನ್ನಡ ಪ್ರೀತಿ ಯಿದೆ, ಮಾನವೀಯತೆಯಿದೆ. ಕೂತಲ್ಲಿಯೇ ವಿಶ್ವ ದರ್ಶನ ಮಾಡಿಸುವ ಕಾರಣಕ್ಕಾಗಿ ಈ ಕೃತಿಯನ್ನು ಎಲ್ಲರೂ ಓದಲೇಬೇಕು ಮತ್ತು ಓದುಗರ ಸಂಗ್ರಹದಲ್ಲಿರಲೇಬೇಕು.