ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅದೃಶ್ಯ ಶಕ್ತಿಯ ಹೆಸರೇ ದೇವರು

ಅದೃಶ್ಯ ಶಕ್ತಿಯ ಹೆಸರೇ ದೇವರು

image-9e6fbd01-c740-4ef9-bcbb-e36d94cef8ab.jpg
ಸಂವಾದ 348  ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಡಾ.ಮೈಸೂರು ನಾಗರಾಜ ಶರ್ಮ ಅವರಿಂದ ಉಪನ್ಯಾಸ ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು ಈ ಜಗತ್ತಿನಲ್ಲಿ ಮನುಷ್ಯನ ಶಕ್ತಿಗಿಂತ ಅವ್ಯಕ್ತವಾದ ಒಂದು ಶಕ್ತಿ ಇದೆ. ಆ ಶಕ್ತಿ ಈ ಜಗತ್ತನ್ನು ನಿಯಂತ್ರಿಸುತ್ತಿದೆ ಎಂಬುದು ಎಲ್ಲರೂ ನಂಬಲೇಬೇಕಾದ ವಿಚಾರ. ಸೂರ್ಯ ಹುಟ್ಟುವುದು, ಮುಳುಗುವುದು, ಒಂದು ಬೀಜ ವೃಕ್ಷವಾಗಿ ಬೆಳೆಯುವುದು. ಈ ಎಲ್ಲಾ ಕಾರ್ಯಗಳನ್ನು ಅನೇಕ ವರ್ಷಗಳಿಂದ ಯಾವುದೋ ಒಂದು ಶಕ್ತಿ ನಡೆಸುತ್ತಿದೆ ಎಂದು ನಾವೆಲ್ಲರೂ ನಂಬಲೇ ಬೇಕು. ಈ ಅದೃಶ್ಯ ಶಕ್ತಿಗೆ ಒಂದು ಹೆಸರಿಡಬೇಕೆಂದು ಆದಿಮಾನವನು ದೇವರು ಅಥವಾ ಭಗವಂತ ಎಂದು ಕರೆದಿದ್ದಾನೆ ಎಂಬುದು ನಂಬಿಕೆ ಎಂದು ಡಾ.ಮೈಸೂರು ನಾಗರಾಜ ಶರ್ಮ ಹೇಳಿದರು. ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಸನಾತನ ಆಚರಣೆಗಳ ಅಂತರಂಗ ವಿಚಾರ’ದ ಕುರಿತು ಅರಿವಿನ ಉಪನ್ಯಾಸ ನೀಡಿದ ಅವರು, ದೇವರು ಎನ್ನುವುದು ಇದಿಯೋ, ಇಲ್ಲವೋ ಎಂಬುದು ಅವರಿವರನ್ನು ಕೇಳಿ ಅನುಸರಿಸಬಾರದು. ಅವರವರ ಹೃದಯ ಹೇಳಿದಂತೆ ನಡೆದುಕೊಳ್ಳಬೇಕು. ಅವರ ಆತ್ಮದಿಂದ ಅರಿತುಕೊಳ್ಳಬೇಕು ಎಂದರು. ಕಲ್ಲಿನ ವಿಗ್ರಹವನ್ನು ಪೂಜಿಸುತ್ತೇವೆ. ಅದು ದೇವರ ಪ್ರತಿನಿಧಿಯಾಗಿರುವ ಕಲ್ಲು ಎಂದು ಪೂಜಿಸುವುದಿಲ್ಲ. ಅದರಲ್ಲಿ ದೇವರಿದ್ದಾನೆ ಎಂದು ಭಾವಿಸಿ ಪೂಜಿಸುತ್ತೇವೆ. ಧರ್ಮವನ್ನು ನಂಬಿ ಆಚರಣೆ ಉಳಿಸಿಕೊಂಡಿರುವ ಸಾವಿರಾರು ಜನ, ಆಚರಣೆಯ ಹಿಂದಿನ ಅರ್ಥವನ್ನೇ ತಿಳಿದಿರುವುದಿಲ್ಲ. ಅದರಲ್ಲೂ ಇಂದಿನ ಪೀಳಿಗೆಯವರು, ಅದು ಏಕೆ ಮಾಡಬೇಕು? ಇದು ಹೀಗೇಕೆ ಮಾಡಬೇಕು? ಎಂದು ಕೇಳಿದಾಗ ನಮ್ಮ ಹತ್ತಿರ ಉತ್ತರವಿರುವುದಿಲ್ಲ. ಹೀಗೆ ಮುದುವರಿದರೆ ಈ ಆಚರಣೆಗಳೇ ಒಂದು ದಿನ ಕಣ್ಮರೆಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ‘ನಾನು ಹೇಳುವ ಸಂಗತಿಗಳೆಲ್ಲವನ್ನೂ ನೀನು ನಂಬಬೇಕಿಲ್ಲ. ಅದನ್ನು ನಿನ್ನ ಮನಸ್ಸಿಗೆ ತೆಗೆದುಕೊಂಡು, ಮಂಥನ ಮಾಡಿ, ಅದು ಸರಿ ಇದೆ ಎಂದೆನಿಸಿದರೆ ಅನುಸರಿಸು’ ಎಂದು ಅಭಿಪ್ರಾಯ ಸ್ವಾತಂತ್ರ ನೀಡಿದ್ದ. ಹೀಗಾಗಿ ಆಚರಣೆ, ನಂಬಿಕೆ ವಿಚಾರದಲ್ಲಿ ನಮ್ಮ ಸನಾತನ ಹಿಂದೂ ಧರ್ಮ ನೀಡಿರುವ ಸ್ವಾತಂತ್ರ ಬೇರಾವ ಧರ್ಮ ದಲ್ಲೂ ನೀಡಿಲ್ಲ. ಒಂದೇ ಶಕ್ತಿ ೫ ಶಕ್ತಿಗಳಾಗಿ ವಿಭಜನೆಗೊಂಡಿದ್ದೇ ಪಂಚಭೂತಗಳು ಎಂದು ಹೇಳಲಾಗುತ್ತದೆ. ಈ ಬಗ್ಗೆ ವೈಜ್ಞಾನಿಕ ಲೋಕದಲ್ಲಿ ೫ ಎಲಿಮೆಂಟ್ಸ್ ಎಂದು ಹೇಳಲಾಗುತ್ತದೆ. ಎಲ್ಲಾ ಜೀವಿಗಳು ಈ ಪಂಚಭೂತಗಳಿಂದ ಮಿಶ್ರಣವಾಗಿರುವುದು ಎಂದು ನಂಬಲಾಗಿದೆ ಎಂದು ಹೇಳಿದರು. ಸಂಯುಕ್ತ ದೇವತೆಗಳ ಉದಾಹರಣೆ ಅಶ್ವಥ ವೃಕ್ಷಪ್ರದಕ್ಷಿಣೆ ಹಾಕುವಾಗ ಒಂದು ಶ್ಲೋಕ ಹೇಳಲಾಗುತ್ತದೆ. ಆ ಶ್ಲೋಕದಲ್ಲಿ ತಿಳಿಸಿದಂತೆ, ಮರದ ಬುಡ ಬ್ರಹ್ಮ, ಮಧ್ಯ ವಿಷ್ಣು, ತುದಿಯಲ್ಲಿ ಶಿವ ಇರುತ್ತಾನೆ ಎಂದು ತಿಳಿಸಲಾಗಿದೆ. ಆಯುರ್ವೇದ ವೈದ್ಯಶಾಸದಲ್ಲಿ ಬುಡದ ಬೇರನ್ನು ಬಳಸಿ ಕಷಾಯ ಮಾಡಿ ಮಕ್ಕಳಾಗದ ಮಹಿಳೆಯರಿಗೆ ನೀಡಿದಾಗ ಮಕ್ಕಳಾಗುತ್ತದೆ ಎಂದು ತಿಳಿಸಲಾಗಿದೆ. ಇದು ವೈದ್ಯಕೀಯ ಕ್ಷೇತ್ರದಲ್ಲೂ ದೃಢೀಕರಿಸಿದ್ದಾರೆ. ಅಂದರೆ, ಬ್ರಹ್ಮನು ಸೃಷ್ಟಿ ಮಾಡುವ ಶಕ್ತಿ ಎಂದರ್ಥ. ವಿಷ್ಣು ಸ್ಥಿತಿಗೆ ಕಾರಣವಾದ್ದರಿಂದ ಮರದ ಮಧ್ಯದ ಖಂಡದಿಂದ ಕಷಾಯ ಮಾಡಿಕೊಟ್ಟರೆ ಆರೋಗ್ಯ ಸ್ಥಿರವಾಗಿರುತ್ತದೆ. ತುದಿಯಲ್ಲಿ ಶಿವ, ಮರದ ತುದಿಯ ಚಿಗುರೆಲೆಯನ್ನು ಕಷಾಯ ಮಾಡಿ ನೀಡಿದರೆ ಗರ್ಭಪಾತ ಆಗುತ್ತದೆ ಎಂದು ಹೇಳುತ್ತದೆ ಶಿವ ಲಯಕಾರಕ. *** ಸನಾತನ ಆಚರಣೆ ಎಂದರೆ ದೊಡ್ಡ ಅಪರಾಧವಲ್ಲ. ಪ್ರತಿಯೊಂದು ಸಮುದಾಯ, ದೇಶ ಕಾಲಕ್ಕನುಗುಣವಾಗಿ ಅದರದೇ ಆದ ಆಚರಣೆ, ಸಂಪ್ರದಾಯ ಮಾಡಿಕೊಂಡು ಬರುತ್ತಿವೆ. ಬಹಳ ಹಿಂದಿನಿಂದ ನಡೆದುಕೊಂಡು ಬಂದ ಆಚರಣೆಯನ್ನು ಸನಾತನ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಆಚರಣೆಗಳಿಗೆ ಒಂದು ಕಾರಣ ಮತ್ತು ಹಿನ್ನೆಲೆ ಇರುತ್ತದೆ. ಆದರೆ ವೈಚಾರಿಕತೆ ಹೆಸರಿನಲ್ಲಿ ಹುಳಿ ಹಿಂಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ, ಎಚ್ಚರಿಕೆಯಿಂದ ಇರಬೇಕು. -ನಂಜನಗೂಡು ಮೋಹನ್ ವಿಶ್ವವಾಣಿ ಸಂಪಾದಕೀಯ ಸಲಹೆಗಾರರು