ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಪತ್ತು ಹೆಚ್ಚುತ್ತಿದೆ, ನೆಮ್ಮದಿ ಕಡಿಮೆಯಾಗುತ್ತಿದೆ !

ಒಂದು ಕಾಲದಲ್ಲಿ ಜನರ ಬಹುದೊಡ್ಡ ಕನಸು ಎಂದರೆ ಸ್ವಂತ ಮನೆ, ಸ್ಥಿರ ಆದಾಯ ಮತ್ತು ಸುಖಿ ಕುಟುಂಬ. ಇಂದು ಇವೆಲ್ಲವೂ ಇದ್ದರೂ ನೆಮ್ಮದಿಯಿಂದ ಬದುಕುವವರ ಸಂಖ್ಯೆ ಕಡಿಮೆಯಾಗು ತ್ತಿರುವಂತೆ ಭಾಸವಾಗುತ್ತಿದೆ. ಇಂದು ನಮ್ಮೆಲ್ಲರ ಬದುಕಿನ ಮಟ್ಟ ಸುಧಾರಿಸಿದೆ, ತಂತ್ರಜ್ಞಾನ ಬೆಳದಿದೆ, ಸೌಲಭ್ಯಗಳು ಹೆಚ್ಚಾಗಿವೆ. ಆದರೆ ಮನಸ್ಸಿನ ಶಾಂತಿ ಮತ್ತು ತೃಪ್ತಿ ಮಾತ್ರ ಹಿಂದೆ ಸರಿಯುತ್ತಿರುವಂತೆ ಕಾಣುತ್ತಿದೆ.

ಮಧುರಾ ಎಲ್ ಭಟ್ಟ, ಬೆಂಗಳೂರು

ಒಂದು ಕಾಲದಲ್ಲಿ ಜನರ ಬಹುದೊಡ್ಡ ಕನಸು ಎಂದರೆ ಸ್ವಂತ ಮನೆ, ಸ್ಥಿರ ಆದಾಯ ಮತ್ತು ಸುಖಿ ಕುಟುಂಬ. ಇಂದು ಇವೆಲ್ಲವೂ ಇದ್ದರೂ ನೆಮ್ಮದಿಯಿಂದ ಬದುಕುವವರ ಸಂಖ್ಯೆ ಕಡಿಮೆಯಾಗು ತ್ತಿರುವಂತೆ ಭಾಸವಾಗುತ್ತಿದೆ. ಇಂದು ನಮ್ಮೆಲ್ಲರ ಬದುಕಿನ ಮಟ್ಟ ಸುಧಾರಿಸಿದೆ, ತಂತ್ರಜ್ಞಾನ ಬೆಳದಿದೆ, ಸೌಲಭ್ಯಗಳು ಹೆಚ್ಚಾಗಿವೆ. ಆದರೆ ಮನಸ್ಸಿನ ಶಾಂತಿ ಮತ್ತು ತೃಪ್ತಿ ಮಾತ್ರ ಹಿಂದೆ ಸರಿಯು ತ್ತಿರುವಂತೆ ಕಾಣುತ್ತಿದೆ.

ಮನುಷ್ಯನ ಬದುಕಿನಲ್ಲಿ ಎಲ್ಲವೂ ವೇಗವಾಗಿದೆ. ಕೆಲಸದ ಒತ್ತಡ, ಗುರಿಗಳ ಬೆನ್ನಟ್ಟುವಿಕೆ, ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಸದಾ ಇತರರ ಜೀವನ ದೊಂದಿಗೆ ನಮ್ಮ ಬದುಕನ್ನು ಹೋಲಿಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಸಮಯ ಸಿಕ್ಕಾಗ ಲೆಲ್ಲ ಮೊಬೈಲ್ ಪರದೆಯ ಹಿಂದೆ ಓಡುವ ನಾವು ವಾಸ್ತವ ಜೀವನದ ಉದ್ದೇಶವನ್ನೇ ಮರೆತಿದ್ದೇವೆ.

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೂ, ಅನೇಕರು ಆತಂಕ, ಒತ್ತಡ ಮತ್ತು ಒಂಟಿತನದ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ. ಕಾರಣ, ಸಂತೋಷವನ್ನು ನಾವು ವಸ್ತುಗಳಲ್ಲಿ ಹುಡುಕುತ್ತಿದ್ದೇವೆ. ಹೊಸ ವಾಹನ, ದೊಡ್ಡ ಮನೆ, ದುಬಾರಿ ಮೊಬೈಲ್ ಅಥವಾ ಉದ್ಯೋಗದಲ್ಲಿ ದೊಡ್ಡ ಹುದ್ದೆ ಪಡೆದಾಗ ಖುಷಿ ಸಿಗಬಹುದು. ಆದರೆ ಆ ಸಂತೋಷ ಬಹಳ ದಿನ ಉಳಿಯುವುದಿಲ್ಲ. ಮತ್ತೆ ಹೊಸ ಗುರಿ, ಹೊಸ ಆಸೆ, ಹೊಸ ಹೋಲಿಕೆ ಆರಂಭವಾಗುತ್ತದೆ.

ಇದನ್ನೂ ಓದಿ: Dr Jagadeesh Maane Column: ವಿಭಜನೆಯ ಬೆಂಕಿಯಲ್ಲಿ ಹುಟ್ಟಿತು ಬಲಿಷ್ಠ ಭಾರತದ ಕನಸು !

ಇನ್ನೊಂದೆಡೆ, ಮಾನವ ಸಂಬಂಧಗಳ ಮೌಲ್ಯ ನಿಧಾನವಾಗಿ ಕಡಿಮೆಯಾಗುತ್ತಿದೆ. ಮನೆಯಲ್ಲಿ ನಾಲ್ವರು ಇದ್ದರೂ ಪ್ರತಿಯೊಬ್ಬರೂ ತಮ್ಮದೇ ಪ್ರಪಂಚದಲ್ಲಿ ಬದುಕುತ್ತಿದ್ದಾರೆ. ಸಂಭಾಷಣೆ ಕಡಿಮೆಯಾಗಿದೆ. ಕೇಳುವ ಗುಣ ಕಡಿಮೆಯಾಗಿದೆ. ಒಬ್ಬರ ಬಗ್ಗೆ ಮತ್ತೊಬ್ಬರು ಕಾಳಜಿ ವಹಿಸುವ ಸಮಯವೂ ಕಡಿಮೆಯಾಗಿದೆ.

ಬದುಕಿನಲ್ಲಿ ನೆಮ್ಮದಿ ಕಾಣುವುದು ಎಂದರೆ ಸಮಸ್ಯೆಗಳೆ ಇಲ್ಲದೆ ಬದುಕುವುದು ಎಂದಲ್ಲ. ಇರುವು ದನ್ನು ಸ್ವೀಕರಿಸಿ, ಇರುವ ಸಂಬಂಧಗಳನ್ನು ಗೌರವಿಸಿ, ಸಣ್ಣ ಸಂತೋಷಗಳನ್ನು ಅನುಭವಿಸುವ ಸಾಮರ್ಥ್ಯವೇ ನಿಜವಾದ ನೆಮ್ಮದಿ. ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ, ಪ್ರಕೃತಿಯೊಂದಿಗೆ ಸಮಯ ಕಳೆಯಲು ಯಾವುದೇ ಹಣ ಬೇಕಾಗಿಲ್ಲ. ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿ ಕೊಳ್ಳುವತ್ತ ನಮ್ಮ ಚಿತ್ತ ಇರಬೇಕು. ಇದೇ ಮುಂದೆ ಮನಸ್ಸಿಗೆ ದೊಡ್ಡ ಸಂಪತ್ತಾಗುತ್ತವೆ.

ಇಂದು ಸಮಾಜಕ್ಕೆ ಬೇಕಾಗಿರುವುದು ಕೇವಲ ಆರ್ಥಿಕ ಬೆಳವಣಿಗೆಯಲ್ಲ. ಭಾವನಾತ್ಮಕ ಆರೋಗ್ಯ, ಮಾನವೀಯ ಸಂಬಂಧಗಳು ಮತ್ತು ಜೀವನದತ್ತ ಸಮತೋಲಿತ ದೃಷ್ಟಿಕೋನವೂ ಅಷ್ಟೇ ಮುಖ್ಯವಾಗಿದೆ. ಹಣ ಅಗತ್ಯ, ಯಶಸ್ಸು ಮುಖ್ಯ. ಆದರೆ ಅವು ನೆಮ್ಮದಿ ಕಸಿದುಕೊಳ್ಳುವ ಮಟ್ಟಕ್ಕೆ ಬೆಳೆಯಬಾರದು.

"ನಮ್ಮ ಬಳಿ ಇರುವ ಸಂಪತ್ತನ್ನು ಎಣಿಸಲು ನಾವು ಪ್ರತಿದಿನ ಸಮಯ ತೆಗೆದುಕೊಳ್ಳುತ್ತೇವೆ. ಆದರೆ ನಮ್ಮ ಬಳಿ ಇರುವ ಸಂತೋಷ ಮತ್ತು ನೆಮ್ಮದಿಯನ್ನು ಕೊನೆಯದಾಗಿ ಯಾವಾಗ ಎಣಿಸಿದ್ದೇವೆ?" ಎಂಬ ಪ್ರಶ್ನೆಯನ್ನು ಒಮ್ಮೆಯಾದರೂ ನಮ್ಮಲ್ಲಿ ನಾವು ಕೇಳಿಕೊಳ್ಳಬೇಕು.

ಜೀವನದ ನಿಜವಾದ ಶ್ರೀಮಂತಿಕೆ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣದಲ್ಲಲ್ಲ, ನಮ್ಮೊಂದಿಗೆ ನಿಂತಿರುವ ಸಂಬಂಧಗಳಲ್ಲಿದೆ. ಕೆಲಸ, ಯಶಸ್ಸು ಮತ್ತು ಸಾಧನೆಗಳು ಬದುಕಿನ ಒಂದು ಭಾಗ ಮಾತ್ರ. ಆದರೆ ಪ್ರತಿಯೊಂದು ಸಂತೋಷಕ್ಕೂ ಅರ್ಥ ಕೊಡುವುದು ನಮ್ಮ ಕುಟುಂಬ, ಸ್ನೇಹಿತರು ಮತ್ತು ಆತ್ಮೀಯರೊಂದಿಗಿನ ಬಾಂಧವ್ಯ. ಆದ್ದರಿಂದ ಬದುಕಿನ ಬ್ಯುಸಿಯ ನಡುವೆ ಸ್ವಲ್ಪ ಸಮಯ ವನ್ನು ನಮ್ಮವರಿಗಾಗಿ ಮೀಸಲಿಡೋಣ. ಏಕೆಂದರೆ ಸಂಬಂಧಗಳನ್ನು ಉಳಿಸಿಕೊಳ್ಳಲು ಹೆಚ್ಚು ಹಣ ಬೇಕಾಗುವುದಿಲ್ಲ, ಸ್ವಲ್ಪ ಸಮಯ, ಕಾಳಜಿ ಮತ್ತು ಪ್ರೀತಿಯೇ ಸಾಕು. ಬದುಕಿನ ಕೊನೆಯಲ್ಲಿ ನಮಗೆ ನೆಮ್ಮದಿ ನೀಡುವುದು ನಾವು ಗಳಿಸಿದ ಸಂಪತ್ತಲ್ಲ, ನಾವು ಕಾಪಾಡಿಕೊಂಡ ಸಂಬಂಧಗಳೇ.